
ಸೌಧಿ ಅರೇಬಿಯಾ ಉಪ ವಿದೇಶಾಂಗ ಸಚಿವ
ಭಾರತ-ಪಾಕ್ ಉದ್ವಿಗ್ನತೆ |ದೆಹಲಿಗೆ ಭೇಟಿ ನೀಡಿದ ಸೌದಿ ವಿದೇಶಾಂಗ ಖಾತೆ ರಾಜ್ಯ ಸಚಿವ; ಉದ್ವಿಗ್ನ ಶಮನ ಕುರಿತು ಚರ್ಚೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಶಮನಗೊಳಿಸುವ ಸಂಬಂಧ ಸೌದಿ ಅರೇಬಿಯಾದ ಉಪ ವಿದೇಶಾಂಗ ಸಚಿವ ಅದೆಲ್ ಅಲ್-ಜುಬೈರ್ ಗುರುವಾರ ದೆಹಲಿಗೆ ಭೇಟಿ ನೀಡಿದ್ದು, ವಿದೇಶಾಂಗ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಿರುವ ಬೆನ್ನಲ್ಲೇ ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಅದೆಲ್ ಅಲ್-ಜುಬೈರ್ ಅವರು ಗುರುವಾರ ದೆಹಲಿಗೆ ಭೇಟಿ ನೀಡಿದ್ದು, ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಉಗ್ರರ ನೆಲೆಗಳ ಮೇಲೆ ಬುಧವಾರ ಭಾರತ ನಡೆಸಿದ ಮಿಲಿಟರಿ ದಾಳಿ ನಂತರ ಉಂಟಾಗಿರುವ ಉದ್ವಿಗ್ನತೆ ಕುರಿತಂತೆ ಅದೆಲ್ ಅಲ್-ಜುಬೈರ್ ಅವರು ಚರ್ಚೆ ನಡೆಸಿ, ಮಾಹಿತಿ ಪಡೆದಿದ್ದಾರೆ.
"ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಅದೆಲ್ ಅಲ್-ಜುಬೈರ್ ಅವರೊಂದಿಗೆ ಉತ್ತಮ ಸಭೆ" ಎಂದು ಜೈಶಂಕರ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಯೋತ್ಪಾದನೆಯನ್ನು ದೃಢವಾಗಿ ಎದುರಿಸುವ ಕುರಿತ ಭಾರತದ ನಿಲುವುಗಳನ್ನು ಹಂಚಿಕೊಳ್ಳಲಾಯಿತುʼ ಎಂದು ಹೇಳಿದ್ದಾರೆ.
ಇರಾನ್‌ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರು ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಜಂಟಿ ಆಯೋಗದ ಸಭೆ ನಡೆಸಿದ ಕೆಲವೇ ಗಂಟೆಗಳಲ್ಲಿ ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆ ರಾಜ್ಯ ಸಚಿವರು ಭಾರತಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದು ಕುತೂಹಲ ಮೂಡಿಸಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು. ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಭದ್ರಕೋಟೆಯಂತಿದ್ದ ಬಹವಾಲ್ಪುರ್ ಕೂಡ ಸೇರಿತ್ತು.
ಪಹಲ್ಗಾಮ್ ದಾಳಿಯ ಅಪರಾಧಿಗಳು ಮತ್ತು ದಾಳಿಗೆ ಕುಮ್ಮಕ್ಕು ನೀಡಿದವರನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸಲು ಭಾರತ ಈ ದಾಳಿಗಳನ್ನು ನಡೆಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದರು.