ಮೋದಿ ಪ್ರಮಾಣವಚನ ಒಂದು ದಿನ ಮುಂದಕ್ಕೆ: ಜೂ.9ಕ್ಕೆ ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ
x

ಮೋದಿ ಪ್ರಮಾಣವಚನ ಒಂದು ದಿನ ಮುಂದಕ್ಕೆ: ಜೂ.9ಕ್ಕೆ ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ

ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಬೆಂಬಲವಿಲ್ಲದೆ ಮೋದಿ ಅವರು ಸರ್ಕಾರವನ್ನು ರಚಿಸಲು ಸಾಧ್ಯವಿಲ್ಲ. ಆ ಪಕ್ಷಗಳು ಸರ್ಕಾರದಲ್ಲಿ ತಮಗೆ ಸಮರ್ಪಕ ಪಾಲು ಕೇಳುತ್ತಿವೆ.


ನರೇಂದ್ರ ಮೋದಿಯವರ ಸರ್ಕಾರವನ್ನು ಬೆಂಬಲಿಸಲು ಮಿತ್ರ ಪಕ್ಷಗಳು ಮತ್ತು ಬಿಜೆಪಿ ನಡುವಿನ ಮಾತುಕತೆಗಳು ಅಂತಿಮವಾಗದೇ ಇರುವ ಹಿನ್ನೆಲೆಯಲ್ಲಿ ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ಜೂನ್ 9 (ಭಾನುವಾರ)ಕ್ಕೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಶನಿವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಅವರು ರಾಷ್ಟ್ರಪತಿ ಅವರಿಗೆ ಬುಧವಾರ ರಾಜೀನಾಮೆ ಪತ್ರ ಸಲ್ಲಿಸಿದ್ದು, ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಮುಂದುವರಿಯಲು ರಾಷ್ಟ್ರಪತಿ ಹೇಳಿದ್ದರು. ಈ ನಡುವೆ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ತಮ್ಮ ಪ್ರಮಾಣವಚನವನ್ನು ಜೂನ್ 12 ಕ್ಕೆ ಮುಂದೂಡಿದ್ದಾರೆ ಎಂದು ವರದಿಯಾಗಿದೆ.

ಸಮ್ಮಿಶ್ರ ಮಾತುಕತೆ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲು ವಿಫಲವಾದ್ದರಿಂದ, ಇಬ್ಬರು ನಿರ್ಣಾಯಕ ಮಿತ್ರಪಕ್ಷಗಳ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚಿನ ಬೆಳವಣಿಗೆ ನಡೆದಿದೆ. ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಮುಂದಿಟ್ಟಿರುವ ಬೇಡಿಕೆಗಳ ವಿವರ ಬಹಿರಂಗ ಗೊಂಡಿಲ್ಲ. ಆದರೆ, ಮೂಲಗಳ ಪ್ರಕಾರ, ಅವರು ಲೋಕಸಭೆ ಸ್ಪೀಕರ್ ಹುದ್ದೆ ಮತ್ತು ಹಲವು ಪ್ರಮುಖ ಖಾತೆಗಳನ್ನು ಬಯಸುತ್ತಿದ್ದಾರೆ.

ವಿದೇಶಿ ನಾಯಕರಿಗೆ ಆಹ್ವಾನ

ಮೋದಿ ಅವರ ಪ್ರಮಾಣವಚನಕ್ಕೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಮತ್ತು ಭೂತಾನ್‌ ರಾಜ ಜಿಗ್ಮೆ ಖೇಸರ್ ನಾಂಗ್ಯೆಲ್ ವಾಂಗ್‌ಚುಕ್ ಅವರನ್ನು ಆಹ್ವಾನಿಸಲಾಗಿದೆ.

Read More
Next Story