
ನ್ಯಾ.ಯಶವಂತ್ ವರ್ಮಾ ವಿರುದ್ಧದ ಆರೋಪ: ತನಿಖಾ ಸಮಿತಿ ಕಾರ್ಯದರ್ಶಿಯಾಗಿ ಕನ್ನಡಿಗ ಗಣಪತಿ ಭಟ್ ನೇಮಕ
ಉನ್ನತ ಮಟ್ಟದ ಸಮಿತಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಮತ್ತು ಕರ್ನಾಟಕದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು ಸದಸ್ಯರಾಗಿದ್ದಾರೆ.
ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ವಿರುದ್ಧದ ಗಂಭೀರ ಆರೋಪಗಳ ತನಿಖೆಗಾಗಿ ರಚಿಸಿರುವ ತ್ರಿಸದಸ್ಯ ಸಮಿತಿಗೆ ನಿವೃತ್ತ ಐಆರ್‌ಎಸ್ ಅಧಿಕಾರಿಯಾಗಿರುವ ಉತ್ತರ ಕನ್ನಡ ಮೂಲದ ಕನ್ನಡಿಗ ಗಣಪತಿ ಭಟ್ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ನೇಮಕಾತಿಯನ್ನು 2025ರ ಸೆಪ್ಟೆಂಬರ್ 5 ರಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ನ್ಯಾಯಮೂರ್ತಿಗಳ (ತನಿಖಾ) ಕಾಯ್ದೆಯಡಿ ಕಾರ್ಯನಿರ್ವಹಿಸಲಿರುವ ಈ ಉನ್ನತ ಮಟ್ಟದ ಸಮಿತಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಮತ್ತು ಕರ್ನಾಟಕದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು ಸದಸ್ಯರಾಗಿದ್ದಾರೆ.
1989ನೇ ಬ್ಯಾಚ್‌ನ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯಾಗಿರುವ ಗಣಪತಿ ಭಟ್, ಇತ್ತೀಚೆಗೆ ಕರ್ನಾಟಕ ಮತ್ತು ಗೋವಾ ಪ್ರಾದೇಶಿಕ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ತಮ್ಮ ಮೂರು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ಅವರು ನವದೆಹಲಿಯ ಅಂತಾರಾಷ್ಟ್ರೀಯ ತೆರಿಗೆ ವಿಭಾಗದ ಪ್ರಧಾನ ಮುಖ್ಯ ಆಯುಕ್ತ, ಲೋಕಸಭೆಯ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಕರ್ನಾಟಕ, ಗೋವಾ ಮತ್ತು ಕೇರಳದ ಆದಾಯ ತೆರಿಗೆ ತನಿಖಾ ಮಹಾನಿರ್ದೇಶಕರಂತಹ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಸಂಕೀರ್ಣ ತನಿಖೆಗಳು, ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರು, ಭಾರತೀಯರು ವಿದೇಶಗಳಲ್ಲಿ ಹೊಂದಿರುವ ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ಪರಿಣತಿ ಹೊಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬಿದ್ರೆಪಾಲ ಗ್ರಾಮದವರಾದ ಗಣಪತಿ ಭಟ್ ಅವರು ಶೈಕ್ಷಣಿಕವಾಗಿಯೂ ಉನ್ನತ ಸಾಧನೆ ಮಾಡಿದ್ದು, ಧಾರವಾಡದಿಂದ ಬಿ.ಎ., ಪುಣೆಯಿಂದ ಎಂ.ಎ. ಹಾಗೂ 2010ರಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಜೊತೆಗೆ, ದೆಹಲಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿ ಪೂರೈಸಿದ್ದಾರೆ. ಅವರು 'Tax Policy and FDI' ಎಂಬ ಪುಸ್ತಕದ ಲೇಖಕರಾಗಿದ್ದು, ಪ್ರಸ್ತುತ ಭಾರತೀಯ ಪ್ರಜಾಪ್ರಭುತ್ವದಲ್ಲಿ ಅಧಿಕಾರಗಳ ವಿಂಗಡಣೆ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಆರ್ಥಿಕತೆ ಮತ್ತು ತೆರಿಗೆ ವಿಷಯಗಳ ಜೊತೆಗೆ ಸಂಸ್ಕೃತ ಸಾಹಿತ್ಯದಲ್ಲಿಯೂ ಆಳವಾದ ಆಸಕ್ತಿ ಹೊಂದಿದ್ದಾರೆ.
ನ್ಯಾಯಮೂರ್ತಿ ಯಶವಂತ ವರ್ಮಾ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಸುಟ್ಟುಹೋದ ನೋಟುಗಳ ಕಂತೆಗಳು ಪತ್ತೆಯಾಗಿದ್ದವು. ಈ ಘಟನೆಯು ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿ, 146 ಸಂಸದರು ನ್ಯಾಯಮೂರ್ತಿ ವರ್ಮಾ ವಿರುದ್ಧ ದೋಷಾರೋಪಣೆ ನಿರ್ಣಯಕ್ಕೆ ಸಹಿ ಹಾಕಿ, ಲೋಕಸಭಾ ಸ್ಪೀಕರ್‌ಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಅಂಗೀಕರಿಸಿದ ಸ್ಪೀಕರ್ ಓಂ ಬಿರ್ಲಾ, ತನಿಖೆಗಾಗಿ ತ್ರಿಸದಸ್ಯ ಸಮಿತಿ ರಚಿಸಿದ್ದಾರೆ. ಸಮಿತಿಯು ತನ್ನ ವರದಿಯನ್ನು ಶೀಘ್ರದಲ್ಲಿ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.