
ಆಲಿಯಾ ಭಟ್‌ಗೆ ವಂಚನೆ ಮಾಡಿದ ವೇದಿಕಾ ಶೆಟ್ಟಿ
ಬಾಲಿವುಡ್ ನಟಿ ಆಲಿಯಾ ಭಟ್‌ಗೆ 76 ಲಕ್ಷ ರೂ. ವಂಚನೆ; ನಟಿಯ ಮಾಜಿ ಪಿಎ ಬೆಂಗಳೂರಿನಲ್ಲಿ ಬಂಧನ
ನಟಿ ಆಲಿಯಾ ಭಟ್ ಒಡೆತನದ ʻಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ʼ ನಲ್ಲಿ ಹಣಕಾಸು ಅವ್ಯವಹಾರ ನಡೆಸಿದ ಆರೋಪದ ಮೇಲೆ ನಟಿಯ ಆಪ್ತ ಸಹಾಯಕಿ ವೇದಿಕಾ ಶೆಟ್ಟಿ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಬಾಲಿವುಡ್ ನಟಿ ಆಲಿಯಾ ಭಟ್ ಅವರಿಗೆ 76.9 ಲಕ್ಷ ರೂ. ವಂಚನೆ ಮಾಡಿದ ಆರೋಪದ ಮೇಲೆ ನಟಿಯ ಮಾಜಿ ಆಪ್ತ ಸಹಾಯಕಿ ವೇದಿಕಾ ಶೆಟ್ಟಿಯನ್ನು ಮುಂಬೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜುಲೈ 10 ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ.
ವೇದಿಕಾ ಶೆಟ್ಟಿ (32) ಅವರ ಸಹಿಗಳನ್ನು ನಕಲಿ ಮಾಡಿ ಹಣ ದುರುಪಯೋಗಪಡಿಸಿಕೊಂಡಿದ್ದ ಆರೋಪ ಹೊತ್ತಿದ್ದರು. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವ ಕುರಿತು ಮಾಹಿತಿ ಆಧರಿಸಿ ಮುಂಬೈನ ಜುಹು ಪೊಲೀಸರು ವೇದಿಕಾ ಶೆಟ್ಟಿಯನ್ನು ಬಂಧಿಸಿದ್ದಾರೆ. ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ಅವರು ಈ ಸಂಬಂಧ ಜನವರಿ ತಿಂಗಳಲ್ಲಿ ಜುಹು ಪೊಲೀಸರಿಗೆ ದೂರು ನೀಡಿದ್ದರು.
ಆಲಿಯಾ ಭಟ್ ನಿರ್ಮಾಣದ ಕಂಪನಿ ʻಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ʼ ನಲ್ಲಿ ಕೆಲಸ ಮಾಡುತ್ತಿದ್ದ ವೇದಿಕಾ ಶೆಟ್ಟಿ ಅವರು ಆಲಿಯಾ ಭಟ್ ಸಹಿಗಳನ್ನು ನಕಲಿ ಮಾಡಿ ಹಣಕಾಸು ದುರುಪಯೋಗಪಡಿಸಿಕೊಂಡಿದ್ದರು. ವೇದಿಕಾ ಶೆಟ್ಟಿ ಅವರು 2021 ರಿಂದ 2024 ರವರೆಗೆ ಆಲಿಯಾ ಭಟ್ ಅವರ ಆಪ್ತ ಸಹಾಯಕಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ಅವಧಿಯಲ್ಲಿ ನಟಿಯ ಹಣಕಾಸು ದಾಖಲೆಗಳು ಮತ್ತು ಪಾವತಿಗಳನ್ನು ನಿರ್ವಹಿಸುತ್ತಿದ್ದರು. ಜತೆಗೆ ವೇಳಾಪಟ್ಟಿಯನ್ನು ಯೋಜಿಸುತ್ತಿದ್ದರು. ಮೇ 2022 ಮತ್ತು ಆಗಸ್ಟ್ 2024 ರ ನಡುವೆ ವಂಚನೆ ನಡೆದಿದೆ ಎನ್ನಲಾಗಿದೆ.
ವೇದಿಕಾ ಶೆಟ್ಟಿ ಅವರು ನಕಲಿ ಬಿಲ್‌ಗಳನ್ನು ಸಿದ್ಧಪಡಿಸಿ, ಆಲಿಯಾ ಭಟ್ ಅವರಿಂದ ಸಹಿ ಹಾಕಿಸಿ ಹಣವನ್ನು ವರ್ಗಾಯಿಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೇದಿಕಾ ಶೆಟ್ಟಿ ಅವರು ಈ ನಕಲಿ ಬಿಲ್‌ಗಳನ್ನು ನೈಜವಾಗಿ ಕಾಣುವಂತೆ ಮಾಡಲು ವೃತ್ತಿಪರ ಪರಿಕರಗಳನ್ನು ಬಳಸಿದ್ದರು. ನಟಿಯ ಖರ್ಚುಗಳು, ಪ್ರಯಾಣ, ಸಭೆಗಳು ಮತ್ತು ಇತರ ಸಂಬಂಧಿತ ವ್ಯವಸ್ಥೆಗಳಿಗಾಗಿ ಹಣ ಡ್ರಾ ಮಾಡಿ ದುರುಪಯೋಗ ಮಾಡಿಕೊಂಡಿದ್ದರು. ಹೀಗೆ ಡ್ರಾ ಮಾಡಿದ ಹಣವನ್ನು ಆಕೆಯ ಸ್ನೇಹಿತನ ಖಾತೆಗೆ ವರ್ಗಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
ವೇದಿಕಾ ಶೆಟ್ಟಿ ಮೇಲೆ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ಪದೇ ಪದೇ ಸ್ಥಳ ಬದಲಾಯಿಸುತ್ತಿದ್ದರು. ರಾಜಸ್ಥಾನ, ಕರ್ನಾಟಕ, ಪುಣೆ ಸೇರಿದಂತೆ ಹಲವು ಕಡೆ ಆರೋಪಿಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಕೊನೆಗೆ ಬೆಂಗಳೂರಿನಲ್ಲಿ ಜುಹು ಪೊಲೀಸರ ಬಲೆಗೆ ಬಿದ್ದಿದ್ದಾರೆ.