
ಬಾರಾಮತಿಯಲ್ಲಿ ರನ್‌ವೇಯಿಂದ ಸಾಕಷ್ಟು ದೂರದಲ್ಲಿ, ವಿಮಾನದ ಚದುರಿದ ಮತ್ತು ಸುಟ್ಟುಹೋದ ಅವಶೇಷಗಳನ್ನು ಫೋಟೋಗಳು ಮತ್ತು ವೀಡಿಯೊಗಳು ತೋರಿಸಿವೆ.
ಅಜಿತ್ ಪವಾರ್ ವಿಮಾನ ದುರಂತ: ಎರಡನೇ ಲ್ಯಾಂಡಿಂಗ್ ಪ್ರಯತ್ನದಲ್ಲಿ ಪತನ?
ಬಾರಾಮತಿ ವಿಮಾನ ನಿಲ್ದಾಣವು ದಟ್ಟವಾದ ಮಂಜಿನಲ್ಲಿ ಆವೃತವಾಗಿದ್ದು, ಗೋಚರತೆ ಕಡಿಮೆಯಾಗಿತ್ತು. ಫ್ಲೈಟ್‌ರಾಡಾರ್24 ಟ್ರಾಕಿಂಗ್ ವೆಬ್‌ಸೈಟ್ ಪ್ರಕಾರ, ಲಿಯರ್‌ಜೆಟ್ 45 ವಿಮಾನವು ಎರಡನೇ ಬಾರಿ ಇಳಿಯುವ ಪ್ರಯತ್ನದಲ್ಲಿದ್ದಾಗ ಪತನಗೊಂಡು ಆಹುತಿಯಾಯಿತು.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಬುಧವಾರ (ಜ.28) ವಿಮಾನ ದುರಂತದಲ್ಲಿ ಮೃತಪಟ್ಟ ಘಟನೆಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಗಳು ಸಿಗದೇ ಉಳಿದಿವೆ. ಪೈಲಟ್ ಯಾವುದೇ ಎಸ್‌ಒಎಸ್ ಅಥವಾ ತುರ್ತು ಸಂಕೇತವನ್ನು ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೆ ಕಳುಹಿಸದೆ, ರನ್‌ವೇ ಗೋಚರಿಸುತ್ತಿದೆ ಎಂದು ತಿಳಿಸಿದ್ದರೂ, ವಿಮಾನವು ರನ್‌ವೇಗೆ ಸುಮಾರು 100 ಅಡಿ ಮೊದಲು ಪತನಗೊಂಡಿದ್ದು ಹೇಗೆ ಎಂಬುದು ಸದ್ಯದ ಪ್ರಶ್ನೆ.
ಬಾರಾಮತಿ ವಿಮಾನ ನಿಲ್ದಾಣವು ದಟ್ಟವಾದ ಮಂಜಿನಲ್ಲಿ ಆವೃತವಾಗಿದ್ದು, ಗೋಚರತೆ ಕಡಿಮೆಯಾಗಿತ್ತು. ಫ್ಲೈಟ್‌ರಾಡಾರ್24 ಟ್ರಾಕಿಂಗ್ ವೆಬ್‌ಸೈಟ್ ಪ್ರಕಾರ, ಲಿಯರ್‌ಜೆಟ್ 45 ವಿಮಾನವು ಎರಡನೇ ಬಾರಿ ಇಳಿಯುವ ಪ್ರಯತ್ನದಲ್ಲಿದ್ದಾಗ ಪತನಗೊಂಡು ಆಹುತಿಯಾಯಿತು. ಮೊದಲ ಪ್ರಯತ್ನದಲ್ಲಿ ಪೈಲಟ್‌ಗಳಿಗೆ ರನ್‌ವೇ ಗೋಚರಿಸದಿದ್ದರಿಂದ 'ಗೋ-ಎರೌಂಡ್' (Go-around) ಮಾಡಿ, ಎರಡನೇ ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ದರು.
ಪ್ರತ್ಯಕ್ಷದರ್ಶಿಯೊಬ್ಬರು, "ವಿಮಾನವು ಇಳಿದ ರೀತಿಯಿಂದಲೇ ಬೀಳುತ್ತದೆ ಎಂಬುದು ಗೊತ್ತಾಗುತ್ತಿತ್ತು. ಅದು ಸ್ಫೋಟಗೊಂಡು ಬೃಹತ್ ಬೆಂಕಿಯ ಉಂಡೆಯಾಯಿತು. ನಂತರ ನಾಲ್ಕೈದು ಸ್ಫೋಟಗಳ ಸದ್ದು ಕೇಳಿಸಿತು. ಸ್ಥಳೀಯರು ಬದುಕುಳಿದವರನ್ನು ಎಳೆದುಕೊಂಡು ಬರುವ ಆಶಯದಿಂದ ಓಡಿ ಹೋದರು, ಆದರೆ ಬೆಂಕಿಯ ಕೆನ್ನಾಲಿಗೆಯಿಂದ ಅದು ಸಾಧ್ಯವಾಗಲಿಲ್ಲ," ಎಂದು ತಿಳಿಸಿದ್ದಾರೆ.
ಪೈಲಟ್ ರನ್‌ವೇ ಗೋಚರಿಸುತ್ತಿತ್ತು
ವಿಮಾನ ದುರಂತ ತನಿಖಾ ದಳ (AAIB) ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ (DGCA) ಪ್ರಾಥಮಿಕ ವಿವರಗಳ ಪ್ರಕಾರ, ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ ಎರಡನೇ ಪ್ರಯತ್ನದಲ್ಲಿ ಮೊದಲು ರನ್‌ವೇ ಗೋಚರಿಸುತ್ತಿಲ್ಲ ಎಂದು ತಿಳಿಸಿದ್ದರು, ಆದರೆ ನಂತರ ರನ್‌ವೇ ಗೋಚರಿಸುತ್ತಿದೆ ಎಂದು ಹೇಳಿದ್ದರು. ಬೆಳಿಗ್ಗೆ 8.43 ಕ್ಕೆ ಎಟಿಸಿ ಲ್ಯಾಂಡಿಂಗ್‌ಗೆ ಅನುಮತಿ ನೀಡಿತ್ತು. ಆದರೆ ಪೈಲಟ್ ಕಡೆಯಿಂದ ಯಾವುದೇ 'ರೀಡ್‌ಬ್ಯಾಕ್' ಬಂದಿರಲಿಲ್ಲ. ಬದಲಾಗಿ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತ್ತು.
ಹಿಂದೂಸ್ತಾನ್ ಟೈಮ್ಸ್ ವರದಿ ಕಾರ್ವರ್ ಏವಿಯೇಷನ್‌ನ (Carver Aviation) ಮ್ಯಾನೇಜರ್ ಹೇಳಿಕೆಯನ್ನು ವರದಿ ಮಾಡಿದ್ದು, ಬಾರಾಮತಿಯಲ್ಲಿ 1,770 ಮೀಟರ್ ರನ್‌ವೇ ಇದೆ ಮತ್ತು ಮಂಜಿನಿಂದಾಗಿ ಗೋಚರತೆಯ ಸಮಸ್ಯೆ ಇದ್ದಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಮಾನದ ವೇಗವೇ ಅಧಿಕವಾಗಿತ್ತು?
ಹಿರಿಯ ಪೈಲಟ್ ಒಬ್ಬರ ವಿಶ್ಲೇಷಣೆಯನ್ನು ಇಂಡಿಯಾ ಟುಡೇ ವರದಿ ಮಾಡಿದ್ದು. ವಿಮಾನದ ಇಳಿಯುವ ವೇಗ (Approach Speed) ಸಾಮಾನ್ಯಕ್ಕಿಂತ ಅಧಿಕವಾಗಿತ್ತು. ನೆಲದಿಂದ 500 ಅಡಿ ಎತ್ತರದಲ್ಲಿದ್ದಾಗ, ವಿಮಾನದ ವೇಗ 183 ನಾಟ್ಸ್ ಆಗಿದ್ದರೆ, ಸಾಮಾನ್ಯವಾಗಿ ಲಿಯರ್‌ಜೆಟ್‌ಗೆ 106-135 ನಾಟ್ಸ್ ವೇಗ ಇರಬೇಕು ಎಂದು ತಜ್ಞರು ಹೇಳಿದ್ದಾರೆ. ಇಂತಹ ಅಸ್ಥಿರ ಪರಿಸ್ಥಿತಿಯಲ್ಲಿ ವಿಮಾನವು ಎರಡನೇ ಬಾರಿಯೂ 'ಗೋ-ಎರೌಂಡ್' ಮಾಡಬೇಕಿತ್ತು, ಆದರೆ ಲ್ಯಾಂಡಿಂಗ್‌ಗೆ ಮುಂದುವರಿಸಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯಾರಿದ್ದರು ವಿಮಾನದಲ್ಲಿ?
ಅಜಿತ್ ಪವಾರ್ ಜೊತೆಗೆ, ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿಧಿತ್ ಜಾಧವ್, ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್, ಸಹ-ಪೈಲಟ್ ಶಾಂಭವಿ ಪಾಠಕ್ ಮತ್ತು ವಿಮಾನ ಸಹಾಯಕಿ (Flight Attendant) ಪಿಂಕಿ ಮಾಲಿ ವಿಮಾನದಲ್ಲಿದ್ದರು. ಐವರೂ ಮೃತಪಟ್ಟಿದ್ದಾರೆ.
ಯಾವ ಕಂಪನಿ ವಿಮಾನ
ವಿಎಸ್ಆರ್ ವೆಂಚರ್ಸ್ ಎಂಬ ಖಾಸಗಿ ಕಂಪನಿ ವಿಮಾನವನ್ನು ನಿರ್ವಹಿಸುತ್ತಿದ್ದ ಈ ವಿಮಾನ ಮುಂಬೈಯಿಂದ ಬೆಳಿಗ್ಗೆ 8. 10ಕ್ಕೆ ಹೊರಟು, ಸುಮಾರು 8.45ಕ್ಕೆ ಬಾರಾಮತಿಯಲ್ಲಿ ಪತನಗೊಂಡಿದೆ. ಪವಾರ್ ತಮ್ಮ ತವರೂರಾದ ಬಾರಾಮತಿಯಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ಕುರಿತು ನಾಲ್ಕು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದರು.
ಬಾರಾಮತಿ ವಿಮಾನ ನಿಲ್ದಾಣವು 'ಅನ್‌ಕಂಟ್ರೋಲ್ಡ್ ಏರ್‌ಫೀಲ್ಡ್' ಆಗಿದ್ದು, ಇಲ್ಲಿ ವಿಮಾನಯಾನ ತರಬೇತಿ ಸಂಸ್ಥೆಗಳ ಬೋಧಕರು ಸಂಚಾರ ಮಾಹಿತಿ ನೀಡುತ್ತಾರೆ, ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನಿರ್ವಹಿಸುವುದಿಲ್ಲ. ಬಾರಾಮತಿಗೆ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ ಇಲ್ಲದ್ದರಿಂದ ಪೈಲಟ್‌ಗಳು ಮ್ಯಾನುವಲ್ ಮತ್ತು ದೃಷ್ಟಿ ತಂತ್ರಗಳನ್ನು ಅವಲಂಬಿಸಬೇಕಾಗುತ್ತದೆ. ಎಎಐಬಿ ತನಿಖೆ ವಹಿಸಿಕೊಂಡಿದ್ದು, ಬ್ಲ್ಯಾಕ್ ಬಾಕ್ಸ್ ಪತ್ತೆ ಮತ್ತು ಸಮಗ್ರ ತನಿಖೆ ನಡೆಯುತ್ತಿದೆ.

