ಭಾರ್ತಿ ಏರ್‌ಟೆಲ್‌ನ ಹೊಸ ದರಗಳು ಜುಲೈ 3 ರಿಂದ ಜಾರಿಗೆ ಬರಲಿವೆ. ಬೆಲೆ ಪರಿಷ್ಕರಣದಿಂದ ವೆಚ್ಚ 600 ರೂ.ವರೆಗೆ ಹೆಚ್ಚಾಗಲಿದೆ.
ದೇಶದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್, ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್‌ಗಳಿಗೆ ಶುಲ್ಕವನ್ನು ಹೆಚ್ಚಿಸಿದೆ. ಹೊಸ ದರಗಳು ಜುಲೈ 3 ರಿಂದ ಜಾರಿಗೆ ಬರಲಿವೆ. ಬೆಲೆ ಪರಿಷ್ಕೃರಣದಿಂದ ವೆಚ್ಚ 600 ರೂ.ವರೆಗೆ ಹೆಚ್ಚಾಗಲಿದೆ.
ಜಿಯೋ ನಂತರ ಏರ್ಟೆಲ್ ಬೆಲೆ ಹೆಚ್ಚಿಸಿದೆ. ಶೀಘ್ರದಲ್ಲೇ ವೊಡಾಫೋನ್ ಐಡಿಯಾ ಕೂಡ ಅನುಕರಿಸುವ ಸಾಧ್ಯತೆಯಿದೆ.
ಪೂರ್ವ ಪಾವತಿ ಯೋಜನೆ: ಏರ್‌ಟೆಲ್‌ನ ಪರಿಷ್ಕೃತ ಪ್ರಿ ಪೇಯ್ಡ್ ಯೋಜನೆಗಳು ವಿವಿಧ ಪ್ಯಾಕೇಜ್‌ಗಳಲ್ಲಿ ಗಮನಾರ್ಹ ಹೆಚ್ಚಳವಾಗಿವೆ. ಅನಿಯಮಿತ ಕರೆ, ಸಂದೇಶ(ಎಸ್ಎಂಎಸ್) ಗಳೊಂದಿಗೆ ಡೇಟಾ ನೀಡುತ್ತದೆ. ಈ ಹಿಂದೆ 2 ಜಿಬಿ ಡೇಟಾಕ್ಕೆ 28 ದಿನಗಳಿಗೆ 179 ರೂ. ಇದ್ದ ಯೋಜನೆ ಈಗ 199 ರೂ. ಆಗಿದೆ.
6 ಜಿಬಿ ಡೇಟಾದ 84 ದಿನಗಳ ಯೋಜನೆ 455 ರೂ.ನಿಂದ 509 ರೂ.ಗೆ ಏರಿದೆ. 24 ಜಿಬಿ ಡೇಟಾದ ವಾರ್ಷಿಕ ಯೋಜನೆ 1,799 ರೂ.ನಿಂದ 1,999 ರೂ.ಗೆ ಏರಿದೆ.
ದೈನಂದಿನ ಡೇಟಾ ಯೋಜನೆ: ದೈನಂದಿನ ಡೇಟಾ ಯೋಜನೆಗಳು ಕೂಡ ಹೆಚ್ಚಳ ಕಂಡಿವೆ. 28 ದಿನಗಳ ದಿನಕ್ಕೆ 1ಜಿಬಿ ಯೋಜನೆ 265ರಿಂದ 299 ರೂ.ಗೆ ಏರಿದೆ. ದಿನವೊಂದಕ್ಕೆ 1.5 ಜಿಬಿ ಪ್ಲಾನ್ 299 ರಿಂದ 349 ರೂ. ಆಗಿದೆ. ದಿನಕ್ಕೆ 2.5 ಜಿಬಿ ಯೋಜನೆಯು 359 ರಿಂದ 409 ರೂ.ಗೆ ಹೆಚ್ಚಿದೆ. 28 ದಿನಗಳ ದಿನಕ್ಕೆ 3 ಜಿಬಿ ಯೋಜನೆ 399 ರಿಂದ 449 ರೂ.ಗೆ ಏರಿದೆ.
ದೀರ್ಘಾವಧಿ ಯೋಜನೆಗಳು: ದಿನಕ್ಕೆ 1.5 ಜಿಬಿಯ 56 ದಿನಗಳ ಯೋಜನೆ 479 ರಿಂದ 579 ರೂ., ದಿನಕ್ಕೆ 2 ಜಿಬಿ ಯೋಜನೆ 549 ರಿಂದ 649 ರೂ.ಗೆ ಹೆಚ್ಚಿದೆ. ದಿನಕ್ಕೆ 1.5 ಜಿಬಿ 84 ದಿನಗಳ ಪ್ಲಾನ್ 719 ರಿಂದ 859 ರೂ.ಗೆ ಹಾಗೂ ದಿನಕ್ಕೆ 2 ಜಿಬಿ ಯೋಜನೆ 839ರಿಂದ 979 ರೂ.ಗೆ ಹೆಚ್ಚಾಗಿದೆ. ದಿನಕ್ಕೆ 2 ಜಿಬಿ ವಾರ್ಷಿಕ ಯೋಜನೆ 2,999 ರಿಂದ 3,599 ರೂ.ಗೆ ಏರಿದೆ.
ಒಂದು ದಿನದ 1 ಜಿಬಿ ಡೇಟಾ 19 ರಿಂದ 22 ರೂ., 2 ಜಿಬಿ ಡೇಟಾ 29 ರಿಂದ 33 ರೂ. ಹಾಗೂ 4 ಜಿಬಿ ಡೇಟಾ 65 ರಿಂದ 77 ರೂ.ಗೆ ಏರಿದೆ.
ಪೋಸ್ಟ್ ಪೇಯ್ಡ್ ಸಂಪರ್ಕ: ಪೋಸ್ಟ್ ಪೇಯ್ಡ್ ಬಳಕೆದಾರರು ಇನ್ನು ಮುಂದೆ ಹೆಚ್ಚು ಪಾವತಿಸಬೇಕಾಗುತ್ತದೆ.
40 ಜಿಬಿ ಡೇಟಾದ ಮೂಲ ಯೋಜನೆ 399 ರಿಂದ 449 ರೂ.ಗೆ ಏರಿದೆ. 75 ಜಿಬಿ ಡೇಟಾ ಯೋಜನೆಗೆ 499 ರೂ. ಬದಲು 549 ರೂ. ನೀಡಬೇಕಾಗುತ್ತದೆ.
ಕೌಟುಂಬಿಕ ಯೋಜನೆ: ಎರಡು ಸಂಪರ್ಕಗಳ ಯೋಜನೆ 599 ರಿಂದ 699(105 ಜಿಬಿ ಡೇಟಾ) ಹಾಗೂ 190 ಜಿಬಿ ಡೇಟಾದ ನಾಲ್ಕು ಸಂಪರ್ಕಗಳ ಯೋಜನೆ 999 ರಿಂದ 1,199 ರೂ.ಗೆ ಹೆಚ್ಚಿದೆ.
ಎಆರ್‌ಪಿಯು ಮಟ್ಟ: ಭಾರತೀಯ ಟೆಲಿಕಾಂ ಕಂಪನಿಗಳು ಉಳಿಯಲು ಪ್ರತಿ ಬಳಕೆದಾರರ ಅಂದಾಜು ಮೊಬೈಲ್ ಸರಾಸರಿ ಆದಾಯ (ಎಆರ್‌ಪಿಯು) 300 ರೂ. ಮೀರುವ ಅಗತ್ಯವಿದೆ ಎಂದು ಭಾರ್ತಿ ಏರ್‌ಟೆಲ್ ಒತ್ತಿಹೇಳಿದೆ. ಈ ಮಟ್ಟವು ನೆಟ್‌ವರ್ಕ್ ತಂತ್ರಜ್ಞಾನ ಮತ್ತು ಸ್ಪೆಕ್ಟ್ರಮ್‌ನಲ್ಲಿ ಹೂಡಿಕೆಗೆ ನಿರ್ಣಾಯಕವಾಗಿದೆ.
ಬಜೆಟ್ ಪ್ರಜ್ಞೆಯ ಗ್ರಾಹಕರ ಮೇಲೆ ಪರಿಣಾಮ ಉಂಟುಮಾಡದಿರಲು ದಿನಕ್ಕೆ 70 ಪೈಸೆಗಿಂತ ಕಡಿಮೆ ಬೆಲೆ ಏರಿಕೆ ಮಾಡಲಾಗಿದೆ ಎಂದು ಏರ್‌ಟೆಲ್ ಹೇಳಿದೆ.