ಮೈಕ್ರೋಸಾಫ್ಟ್ ಸ್ಥಗಿತ: ವಿಮಾನ ಕಾರ್ಯಾಚರಣೆಗೆ ಧಕ್ಕೆ
x
ಸರ್ವರ್‌ಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಗೋವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ, ಜುಲೈ 19, 2024 ರಂದು ಸಿಲುಕಿಕೊಂಡರು

ಮೈಕ್ರೋಸಾಫ್ಟ್ ಸ್ಥಗಿತ: ವಿಮಾನ ಕಾರ್ಯಾಚರಣೆಗೆ ಧಕ್ಕೆ

ಇಂಡಿಗೋ, ಸ್ಪೈಸ್‌ಜೆಟ್ ಮತ್ತು ಆಕಾಸಾ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆ ಮೇಲೆ ವಿಪರಿಣಾಮ ಉಂಟಾಗಿದೆ. ಚೆಕ್ ಇನ್ ಮತ್ತು ಬೋರ್ಡಿಂಗ್ ಪ್ರಕ್ರಿಯೆಗಳಲ್ಲಿ ಅಡಚಣೆಯಾಗಿದೆ.


ಮೈಕ್ರೋಸಾಫ್ಟ್ ವಿಂಡೋಸ್ ಸ್ಥಗಿತದಿಂದ ವಿಮಾನ ನಿಲ್ದಾಣ ಮತ್ತು ವಿಮಾನಯಾನ ಕಾರ್ಯಾಚರಣೆಗಳು ಶುಕ್ರವಾರ ಗಣನೀಯ ಅಡಚಣೆ ಎದುರಿಸಿದವು. ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಈ ಸಂಬಂಧ ಸಲಹೆ-ಸೂಚನೆಗಳನ್ನು ನೀಡುತ್ತಿವೆ.

ಇಂಡಿಗೋ, ಸ್ಪೈಸ್‌ ಜೆಟ್‌ ಮತ್ತು ಆಕಾಸಾದ ನೆಟ್‌ವರ್ಕ್‌ಗಳಾದ್ಯಂತ ಆನ್‌ಲೈನ್ ಒಳಪ್ರವೇಶ ಮತ್ತು ಬೋರ್ಡಿಂಗ್ ಪ್ರಕ್ರಿಯೆಗಳಲ್ಲಿ ಅಡಚಣೆ ಕಂಡುಬಂದಿದೆ. ಇದರಿಂದಾಗಿ, ವಿಮಾನಯಾನ ಸಂಸ್ಥೆಗಳು ಈ ಪ್ರಕ್ರಿಯೆಗಳನ್ನು ಮಾನವ ಸಂಪನ್ಮೂಲ ಬಳಸಿ ನಿರ್ವಹಿಸಬೇಕಾಯಿತು.

ʻನಮ್ಮ ಕಾರ್ಯಜಾಲ ವ್ಯವಸ್ಥೆ ಮೈಕ್ರೋಸಾಫ್ಟ್ ಸ್ಥಗಿತದಿಂದ ಪ್ರಭಾವಿತವಾಗಿವೆ. ಇದು ಇತರ ಕಂಪನಿಗಳ ಮೇಲೂ ಪರಿಣಾಮ ಬೀರಿದೆ. ಇದರಿಂದ ಬುಕಿಂಗ್, ಚೆಕ್ ಇನ್, ಬೋರ್ಡಿಂಗ್ ಪಾಸ್‌ ಮತ್ತು ಕೆಲವು ವಿಮಾನಗಳ ಆಗಮನ-ನಿರ್ಗಮನದ ಮೇಲೆ ಪರಿಣಾಮ ಆಗಬಹುದು,ʼ ಎಂದು ಇಂಡಿಗೋ ಎಕ್ಸ್‌ನಲ್ಲಿ ತಿಳಿಸಿದೆ.

ʻನಾವೆಲ್ಲರೂ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು, ಸ್ಥಿರತೆ ಮತ್ತು ಸಹಜತೆಯನ್ನು ಪುನಃಸ್ಥಾಪಿಸಲು ಕೆಲಸ ಮಾಡುತ್ತಿದ್ದೇವೆ. ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ನಮ್ಮ ಡಿಜಿಟಲ್ ತಂಡವು ಮೈಕ್ರೋಸಾಫ್ಟ್ ಅಝೂರ್‌ನೊಂದಿಗೆ ಸಂಪರ್ಕದಲ್ಲಿದೆ,ʼ ಎಂದು ಹೇಳಿದೆ.

ಹಸ್ತಚಾಲಿತ ಚೆಕ್ ಇನ್: ʻಸೇವಾ ಪೂರೈಕೆದಾರರ ಮೂಲಸೌಕರ್ಯ ಸಮಸ್ಯೆಯಿಂದಾಗಿ ಬುಕಿಂಗ್, ಚೆಕ್ ಇನ್ ಮತ್ತು ವಿಮಾನಗಳ ಆಗಮನ-ನಿರ್ಗಮನ ಸೇರಿದಂತೆ ನಮ್ಮ ಕೆಲವು ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿಲ್ಲ. ಪ್ರಸ್ತುತ ವಿಮಾನ ನಿಲ್ದಾಣಗಳಲ್ಲಿ ಹಸ್ತಚಾಲಿತ ಚೆಕ್ ಇನ್ ಮತ್ತು ಬೋರ್ಡಿಂಗ್ ಪ್ರಕ್ರಿಯೆಗಳನ್ನು ಅನುಸರಿಸುತ್ತಿದ್ದೇವೆ,ʼ ಎಂದು ವಿಮಾನಯಾನ ಸಂಸ್ಥೆ ಆಕಾಸಾ ಹೇಳಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಏರಲು ಆದಷ್ಟು ಬೇಗ ವಿಮಾನ ನಿಲ್ದಾಣವನ್ನು ತಲುಪಬೇಕೆಂದು ಪ್ರಯಾಣಿಕರನ್ನು ವಿನಂತಿಸಿದೆ.

ಸೇವಾ ಪೂರೈಕೆದಾರರೊಂದಿಗೆ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಸ್ಪೈಸ್‌ಜೆಟ್ ಹೇಳಿದೆ. ಬುಕಿಂಗ್, ಚೆಕ್ ಇನ್ ಮತ್ತು ಆಗಮನ-ನಿರ್ಗಮನ ಸೇರಿದಂತೆ ಆನ್‌ಲೈನ್ ಸೇವೆಗಳ ಮೇಲೆ ಪರಿಣಾಮವುಂಟಾಗಿದೆ. ʻಇದರಿಂದ ನಾವು ವಿಮಾನ ನಿಲ್ದಾಣಗಳಲ್ಲಿ ಹಸ್ತಚಾಲಿತ ಚೆಕ್ ಇನ್ ಮತ್ತು ಬೋರ್ಡಿಂಗ್ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸಿದ್ದೇವೆ,ʼ ಎಂದು ಹೇಳಿದೆ.

ಐಟಿ ಸಚಿವಾಲಯದ ಕ್ರಮ: ಐಟಿ ಸಚಿವಾಲಯವು ಮೈಕ್ರೋಸಾಫ್ಟ್‌ನೊಂದಿಗೆ ಸಂಪರ್ಕದಲ್ಲಿದೆ. ಇದು ಎನ್‌ಐಸಿ ನೆಟ್‌ವರ್ಕ್‌ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ʻನಿಲುಗಡೆಗೆ ಕಾರಣವನ್ನು ಗುರುತಿಸಲಾಗಿದೆ. ಸಮಸ್ಯೆ ಪರಿಹರಿಸಲು ತಾಂತ್ರಿಕ ನವೀಕರಣ ಮಾಡಲಾಗುತ್ತಿದೆ,ʼ ಎಂದು ಸಚಿವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ʻಐಟಿ ಸಚಿವಾಲಯವು ಮೈಕ್ರೋಸಾಫ್ಟ್ ಮತ್ತು ಅದರ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿದೆ... ಎನ್‌ಐಸಿ ನೆಟ್‌ವರ್ಕ್ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ,ʼ ಎಂದು ಸಚಿವರು ಹೇಳಿದ್ದಾರೆ.

ಏತನ್ಮಧ್ಯೆ, ಸರ್ಟ್‌ ಇನ್( CERT‌ In) ಸಲಹೆಗಾರ ಸಂಸ್ಥೆಯು,ʼಮೈಕ್ರೋಸಾಫ್ಟ್ ಸ್ಥಗಿತವು ಕ್ರೌಡ್‌ಸ್ಟ್ರೈಕ್ ಆಧುನೀಕರಣದಿಂದ ಉಂಟಾಗಿದೆ. ಅದರ ತೀವ್ರತೆ ನಿರ್ಣಾಯಕವಾದುದು ಎಂದು ಹೇಳಿದೆ.

ಮೈಕ್ರೋಸಾಫ್ಟ್ ಬಳಕೆದಾರರು ಜಗತ್ತಿನೆಲ್ಲೆಡೆ ಎದುರಿಸುತ್ತಿರುವ ನಿಲುಗಡೆ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು, ಬ್ಯಾಂಕ್‌ ಗಳು ಮತ್ತು ಮಾಧ್ಯಮಗಳಲ್ಲಿ ಅಡೆತಡೆಗೆ ಸಂಬಂಧಿಸಿದಂತೆ ವರದಿಗಳ ಹಿನ್ನೆಲೆಯಲ್ಲಿ ಈ ಸಲಹೆ ಬಂದಿದೆ.

ಕ್ರೌಡ್‌ಸ್ಟ್ರೈಕ್ ನಿಯೋಜಕ 'ಫಾಲ್ಕನ್ ಸೆನ್ಸರ್' ಗೆ ಸಂಬಂಧಿಸಿದ ವಿಂಡೋಸ್ ವ್ಯವಸ್ಥೆಗಳು ಸ್ಥಗಿತಗೊಂಡಿವೆ. ಉತ್ಪನ್ನದಲ್ಲಿ ಇತ್ತೀಚೆಗೆ ಮಾಡಿದ ನವೀಕರಣದಿಂದ ಕುಸಿಯುತ್ತಿವೆ ಎಂದು ವರದಿಯಾಗಿದೆ. ಸಂಬಂಧಪಟ್ಟ ವಿಂಡೋಸ್ ವ್ಯವಸ್ಥೆಗಳು ಫಾಲ್ಕನ್‌ಗೆ ಸಂಬಂಧಿಸಿದ 'ಬ್ಲೂ ಸ್ಕ್ರೀನ್ ಆಫ್ ಡೆತ್ (ಬಿಎಸ್‌ಒಡಿ) ಯನ್ನು ಅನುಭವಿಸುತ್ತಿವೆ, ಎಂದು ಸಿಇಆರ್‌ಟಿ-ಇನ್ ಸಲಹಾ ಸಂಸ್ಥೆ ಹೇಳಿದೆ.

Read More
Next Story