
ದೆಹಲಿ ವಾಯುಮಾಲಿನ್ಯ
ರಾಷ್ಟ್ರ ರಾಜಧಾನಿಯಲ್ಲಿ ಎರಡನೇ ದಿನವೂ ವಾಯು ಮಾಲಿನ್ಯ ಮಟ್ಟ 'ತೀವ್ರ'
ದೀಪಾವಳಿ ನಂತರ ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟವು ನಿರಂತರವಾಗಿ ಕಳಪೆ ಅಥವಾ ತುಂಬಾ ಕಳಪೆ ವರ್ಗದಲ್ಲಿಯೇ ಉಳಿದಿದೆ. ಸಾಂದರ್ಭಿಕವಾಗಿ ತೀವ್ರ ವಲಯಕ್ಕೆ ಇಳಿಯುತ್ತಿದೆ.
ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯವು ಸತತ ಎರಡನೇ ದಿನವಾದ ಬುಧವಾರ ಕೂಡ ತೀವ್ರ ಹದಗೆಟ್ಟಿದೆ. ಬೆಳಿಗ್ಗೆ 9 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ 414 ಕ್ಕೆ ತಲುಪಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.
ಮಂಗಳವಾರ ಅತ್ಯಂತ ಕೆಟ್ಟ ವಾಯು ಗುಣಮಟ್ಟ ದಾಖಲಾಗಿತ್ತು. 423 ರಷ್ಟಿದ್ದ ವಾಯು ಗುಣಮಟ್ಟವು ʼತೀವ್ರʼ ಸ್ವರೂಪದಲ್ಲೇ ಮುಂದುವರಿದಿರುವುದು ಆತಂಕ ಉಂಟು ಮಾಡಿದೆ.
ಗಾಳಿಯ ಗುಣಮಟ್ಟ ಸುಧಾರಿಸಲು ಕೇಂದ್ರ ಸರ್ಕಾರವು ಶ್ರೇಣೀಕೃತ ಪ್ರತಿಕ್ರಿಯೆಯ ಕ್ರಿಯಾ ಯೋಜನೆಯ ಹಂತ III ರಡಿ ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದೆ.
0 ಮತ್ತು 50 ರ ನಡುವಿನ ವಾಯು ಗುಣಮಟ್ಟ ಸೂಚಕವನ್ನು ಉತ್ತಮ, 51 ರಿಂದ 100 ತೃಪ್ತಿದಾಯಕ, 101 ರಿಂದ 200 ಮಧ್ಯಮ, 201 ರಿಂದ 300 ಕಳಪೆ, 301 ರಿಂದ 400 ತುಂಬಾ ಕಳಪೆ ಮತ್ತು 401 ರಿಂದ 500 ತೀವ್ರ ಎಂದು ಪರಿಗಣಿಸಲಾಗುತ್ತದೆ ಎಂದು ಸಿಪಿಸಿಬಿ ವರ್ಗೀಕರಣ ಮಾಡಿದೆ.
ದೀಪಾವಳಿಯ ನಂತರ, ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟವು ನಿರಂತರವಾಗಿ ಕಳಪೆ ಅಥವಾ ತುಂಬಾ ಕಳಪೆ ವರ್ಗದಲ್ಲಿಯೇ ಉಳಿದಿದೆ. ಈಗ ತೀವ್ರ ವಲಯಕ್ಕೆ ಇಳಿದಿದೆ.
ತಾಪಮಾನ ಕುಸಿತ
ಈ ಮಧ್ಯೆ ಕಳೆದ ವಾರದಿಂದ ನಗರದಲ್ಲಿ ತಾಪಮಾನವು ಕಡಿಮೆಯಾಗುತ್ತಲೇ ಇದೆ. ಬುಧವಾರ ಕನಿಷ್ಠ ತಾಪಮಾನವು 10.4 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದ್ದು, ಪ್ರಸಕ್ತ ಋತುವಿನಲ್ಲಿ ಸಾಮಾನ್ಯಕ್ಕಿಂತ 3.1 ಡಿಗ್ರಿ ಕಡಿಮೆಯಾಗಿದೆ. ಭಾರತದ ಹವಾಮಾನ ಇಲಾಖೆಯ ಪ್ರಕಾರ ಗರಿಷ್ಠ ತಾಪಮಾನವು 27 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿ ನೆಲೆಗೊಳ್ಳುವ ಸಾಧ್ಯತೆಯಿದೆ ಎಂದು ಹಾವಾಮಾನ ಇಲಾಖೆ ತಿಳಿಸಿದೆ.

