
ಕೃತಕ ಬುದ್ಧಿಮತ್ತೆ ಮಾನವನ ತೀರ್ಪು ಬದಲಾಯಿಸಲು ಸಾಧ್ಯವಿಲ್ಲ; ಮಾಜಿ ಸಿಜೆಐ ಚಂದ್ರಚೂಡ್
ವರ್ಚುವಲ್ ನ್ಯಾಯಾಲಯಗಳು ಒಟ್ಟು ವ್ಯವಸ್ಥೆಯನ್ನು ಸುಧಾರಿಸಿವೆಯಾದರೂ ನ್ಯಾಯಯುತ ವಿಚಾರಣೆ ಮತ್ತು ಡೇಟಾ ಸುರಕ್ಷತೆ ಬಗ್ಗೆ ಕಳವಳ ಉಂಟು ಮಾಡುತ್ತವೆ ಎಂದು ಹೇಳಿದರು.
ವರ್ಚುವಲ್ ನ್ಯಾಯಾಲಯಗಳು ಪ್ರಕ್ರಿಯೆಯನ್ನು ಸುಧಾರಿಸಿದರೂ ನ್ಯಾಯಯುತ ವಿಚಾರಣೆ ಪ್ರಕ್ರಿಯೆ ಬಗ್ಗೆ ಕಳವಳ ಉಂಟು ಮಾಡುತ್ತವೆ. ಹೀಗಾಗಿ ಹೊಸ ತಾಂತ್ರಿಕತೆ ಮತ್ತು ನ್ಯಾಯಾಂಗ ಸಮಗ್ರತೆಯ ನಡುವೆ ಸಮತೋಲನ ಇರಬೇಕು ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ.
ಕೃತಕ ಬುದ್ಧಿಮತ್ತೆ (ಎಐ) ಪ್ರಕರಣಗಳ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ ಹಾಗೂ ಕಾನೂನು ಪ್ರಕ್ರಿಯೆಗಳನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತಿದೆ ಎಂದು ಪ್ರತಿಪಾದಿಸಿದ ಮಾಜಿ ಸಿಜೆಐ, ಅದು ತೀರ್ಪನ್ನು ಬದಲಿಸುವಂಥ ಸಾಮರ್ಥ್ಯ ಹೊಂದಿಲ್ಲ ಎಂದು ಹೇಳಿದರು.
ವೆಲಿಂಗ್ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಅವರು, "ವರ್ಚುವಲ್ ನ್ಯಾಯಾಲಯಗಳು ಒಟ್ಟು ವ್ಯವಸ್ಥೆಯನ್ನು ಸುಧಾರಿಸಿವೆಯಾದರೂ ನ್ಯಾಯಯುತ ವಿಚಾರಣೆ ಮತ್ತು ಡೇಟಾ ಸುರಕ್ಷತೆ ಬಗ್ಗೆ ಕಳವಳ ಉಂಟು ಮಾಡುತ್ತವೆ. ನಾವು ಈ ಅಭಿವೃದ್ಧಿಗೆ ಒಡ್ಡಿಕೊಳ್ಳುವಾಗ ನ್ಯಾಯಾಂಗ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು. ದಕ್ಷತೆ ಎಂದರೆ ನ್ಯಾಯಸಮ್ಮತತೆ, ಉತ್ತರದಾಯಿತ್ವ,''ಎಂದು ಮಾಜಿ ಮುಖ್ಯ ನ್ಯಾಯಮೂರ್ತಿ ಹೇಳಿದರು.
"ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು, ಮಹಿಳೆಯರು, ಅಲ್ಪಸಂಖ್ಯಾತರಂತಹ ಸಮಾಜದ ಅಂಚಿನಲ್ಲಿರುವ ಸಮುದಾಯಗಳು ಶಿಕ್ಷಣ, ಉದ್ಯೋಗ ಮತ್ತು ನಾಯಕತ್ವದಲ್ಲಿ ರಚನಾತ್ಮಕ ಅಡೆತಡೆಗಳನ್ನು ಎದುರಿಸುತ್ತಿವೆ. ಸಮಾನವಾಗಿ ಸ್ಪರ್ಧಿಸಲು ಪ್ರತಿಯೊಬ್ಬರಿಗೂ ಅಗತ್ಯ ಬೆಂಬಲ ನೀಡಬೇಕು " ಎಂದು ಅವರು ಹೇಳಿದರು.
ಡಿಜಿಟಲ್ ಕ್ರಾಂತಿಯು ನಮ್ಮ ಅಸ್ತಿತ್ವವನ್ನು ಮರುವ್ಯಾಖ್ಯಾನಿಸಿದೆ. ಸಾಮೂಹಿಕವಾಗಿ ನಮ್ಮನ್ನು ಬೆದರಿಸಲು ಹೊಸ ಬೀಜಗಳನ್ನು ಬಿತ್ತಿದೆ ಎಂದು ಹೇಳಿದ ಅವರು "ನಮ್ಮ ಸ್ವಂತ ಸೃಷ್ಟಿಯೇ ಭವಿಷ್ಯಕ್ಕೆ ಬೆದರಿಕೆ ಹಾಕುತ್ತದೆ" ಎಂದು ನುಡಿದರು.
ಕ್ವಾಂಟಮ್ ಕಂಪ್ಯೂಟಿಂಗ್ ಈ ಹಿಂದೆ ಕೇಳರಿಯದ ಸೈಬರ್ ಅಪಾಯಗಳನ್ನು ತಂದೊಡ್ಡುತ್ತಿದೆ ಈ ತಂತ್ರಜ್ಞಾನವು ಡಿಜಿಟಲ್ ಗೌಪ್ಯತೆಯನ್ನು ನಾಶ ಮಾಡುವ ಹಾಗೂ ಸರ್ಕಾರಿ ಡೇಟಾಗಳನ್ನು ಅಪಾಯಕ್ಕೆ ತಳ್ಳುವ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನು ಮುಳುಗಿಸುವ ಸಾಮರ್ಥ್ಯ ಹೊಂದಿದೆ" ಎಂದು ಅವರು ಹೇಳಿದರು.