
ಅಹಮದಾಬಾದ್ ವಿಮಾನ ದುರಂತ: 135 ಶವಗಳ ಗುರುತು ಪತ್ತೆ; 101 ಶವಗಳ ಹಸ್ತಾಂತರ
ಬಹುತೇಕ ಶವಗಳು ಸುಟ್ಟು ಕರಕಲಾಗಿರುವುದರಿಂದ ಅಥವಾ ಹೆಚ್ಚು ಹಾನಿಗೊಳಗಾಗಿರುವುದರಿಂದ ಮೃತದೇಹಗಳ ಗುರುತಿಸುವ ಪ್ರಕ್ರಿಯೆಗೆ ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಅಹಮದಾಬಾದ್ನಲ್ಲಿ ಇತ್ತೀಚೆಗೆ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 270 ಜನರು ಸಾವನ್ನಪ್ಪಿದ ಐದು ದಿನಗಳ ನಂತರದಿಂದ ಇದುವರಗೆ 135 ಶವಗಳನ್ನು ಡಿಎನ್ಎ ಪರೀಕ್ಷೆಯ ಮೂಲಕ ಗುರುತಿಸಲಾಗಿದೆ. ಈ ಪೈಕಿ 101 ಶವಗಳನ್ನು ಈಗಾಗಲೇ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ಅನೇಕ ಶವಗಳು ತೀವ್ರವಾಗಿ ಸುಟ್ಟು ಕರಕಲಾಗಿರುವುದರಿಂದ ಅಥವಾ ಹೆಚ್ಚು ಹಾನಿಗೊಳಗಾಗಿರುವುದರಿಂದ, ಮೃತದೇಹಗಳ ಗುರುತಿಸುವಿಕೆಗಾಗಿ ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
"ಮಂಗಳವಾರ ಬೆಳಿಗ್ಗೆಯವರೆಗೆ 135 ಡಿಎನ್ಎ ಮಾದರಿಗಳನ್ನು ಗುರುತಿಸಲಾಗಿದೆ ಮತ್ತು 101 ಶವಗಳನ್ನು ಆಯಾ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಈ 101 ಶವಗಳ ಪೈಕಿ ಐದು ಜನರು ವಿಮಾನದಲ್ಲಿ ಪ್ರಯಾಣಿಕೆಲ್ಲ," ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಕೇಶ್ ಜೋಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಸ್ತಾಂತರಿಸಲಾದ 101 ಶವಗಳು ಗುಜರಾತ್, ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ ಮತ್ತು ದಿಯುವಿನ ವಿವಿಧ ಭಾಗಗಳಿಗೆ ಸೇರಿದವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಲ್ಲಾ ಶವಗಳ ಡಿಎನ್ಎ ಪ್ರೊಫೈಲಿಂಗ್ ಮಂಗಳವಾರ ಸಂಜೆ ಅಥವಾ ಬುಧವಾರ ಬೆಳಿಗ್ಗೆಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಡಾ. ಜೋಶಿ ಈ ಹಿಂದೆ ತಿಳಿಸಿದ್ದರು.
ದುರಂತದ ನಡೆದಿದ್ದು ಹೇಗೆ?
242 ಜನರೊಂದಿಗೆ ಲಂಡನ್ಗೆ ತೆರಳುತ್ತಿದ್ದ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು ಜೂನ್ 12ರಂದು ಮಧ್ಯಾಹ್ನ 1:39ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಹಮದಾಬಾದ್ನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಡಿಕ್ಕಿಯಾಗಿತ್ತು.
ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಜನರು ಸಾವನ್ನಪ್ಪಿದರೆ, ಅದೃಷ್ಟವಶಾತ್ ಒಬ್ಬ ಪ್ರಯಾಣಿಕ ಬದುಕುಳಿದಿದ್ದಾನೆ. ವಿಮಾನವು ಅಪ್ಪಳಿಸಿದ ಸ್ಥಳದಲ್ಲಿ ಭೂಮಿಯ ಮೇಲೆ ಇದ್ದ 29 ಜನರು, ಇದರಲ್ಲಿ ಐದು ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿದಂತೆ, ಸಾವನ್ನಪ್ಪಿದ್ದಾರೆ.