ಸೂರ್ಯಕುಮಾರ್ ಉತ್ತಮ ಆಯ್ಕೆ: ಅಗರ್ಕರ್
x

ಸೂರ್ಯಕುಮಾರ್ ಉತ್ತಮ ಆಯ್ಕೆ: ಅಗರ್ಕರ್

ಕೆ.ಎಲ್. ರಾಹುಲ್, ರಿಷಬ್ ಪಂತ್ ಮತ್ತು ಪಾಂಡ್ಯ ಅವರಿಗೆ ನಾಯಕತ್ವದ ಬಾಗಿಲು ಮುಚ್ಚಿಲ್ಲ ಎಂದು ಅಗರ್ಕರ್ ಹೇಳಿದರು.


ಟಿ 20 ತಂಡದ ನಾಯಕತ್ವಕ್ಕೆ ಸೂರ್ಯಕುಮಾರ್‌ ಯಾದವ್‌ ಅವರನ್ನು ದೇಹದಾರ್ಢ್ಯ, ಸಹ ಆಟಗಾರರ ಪ್ರತಿಕ್ರಿಯೆ ಮತ್ತು ಸ್ಥಿರವಾದ ಆಟದಿಂದಾಗಿ ಹಾರ್ದಿಕ್ ಪಾಂಡ್ಯ ಅವರ ಬದಲು ಆಯ್ಕೆ ಮಾಡಲಾಯಿತು ಎಂದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸೋಮವಾರ (ಜುಲೈ 22) ಮುಂಬೈನಲ್ಲಿ ಹೇಳಿದರು.

ಜುಲೈ 27 ರಿಂದ ಆರಂಭವಾಗಲಿರುವ ಮೂರು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳ ಶ್ರೀಲಂಕಾ ಪ್ರವಾಸಕ್ಕೆ ಮೊದಲು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಸೂರ್ಯಕುಮಾರ್ ಯಾದವ್ ಆಯ್ಕೆ ಏಕೆ?: ʻಸೂರ್ಯ ಅವರನ್ನೇ ಏಕೆ ನಾಯಕನನ್ನಾಗಿ ಮಾಡಲಾಯಿತು? ಏಕೆಂದರೆ, ಅವರು ಅರ್ಹ ಅಭ್ಯರ್ಥಿಗಳಲ್ಲಿ ಒಬ್ಬರು. ಕಳೆದ ಒಂದು ವರ್ಷದಿಂದ ತಂಡದಲ್ಲಿದ್ದಾರೆ; ನಮಗೆ ಡ್ರೆಸ್ಸಿಂಗ್ ರೂಮ್‌ನಿಂದ ಸಾಕಷ್ಟು ಹಿಮ್ಮಾಹಿತಿ ಬರುತ್ತದೆ. ಉತ್ತಮ ಕ್ರಿಕೆಟ್ ಮೆದುಳು ಹೊಂದಿದ್ದಾರೆ ಹಾಗೂ ಅವರು ವಿಶ್ವದ ಅತ್ಯುತ್ತಮ ಟಿ20 ಬ್ಯಾಟರ್‌ಗಳಲ್ಲಿ ಒಬ್ಬರು,ʼ ಎಂದು ಅಗರ್ಕರ್ ಹೇಳಿದರು.

ʻನೀವು ಕ್ರಿಕೆಟ್‌ನ ವಿವಿಧ ವಿಧಗಳಲ್ಲಿ ಆಡುವ ನಾಯಕನನ್ನು ಬಯಸುತ್ತೀರಿ. ಅವರು ಅರ್ಹ ಅಭ್ಯರ್ಥಿ ಎನ್ನುವುದು ನಮ್ಮ ಅನಿಸಿಕೆ. ತಮ್ಮ ಪಾತ್ರವನ್ನು ಹೇಗೆ ನಿರ್ವಹಿಸುತ್ತಾರೆ ಎಂದು ಕಾದು ನೋಡುತ್ತೇವೆ. ಫಿಟ್ನೆಸ್ ಸಾಬೀತುಪಡಿಸಿದ ನಾಯಕ ಬೇಕಿತ್ತು. ಪಾಂಡ್ಯ ಅವರಂತೆ ಗಾಯ ಗಳಿಗೆ ಗುರಿಯಾಗುವ ವ್ಯಕ್ತಿ ಅವರಲ್ಲ,ʼ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಹೇಳಿದರು.

ಹಾರ್ದಿಕ್ ಪ್ರಮುಖ ಆಟಗಾರ: ʻಆದರೆ, ಹಾರ್ದಿಕ್ ಪಾಂಡ್ಯ ತಂಡದ ಅತ್ಯಂತ ಪ್ರಮುಖ ಆಟಗಾರ. ಅವರಲ್ಲಿರುವ ಕೌಶಲಗಳನ್ನು ಕಂಡು ಹಿಡಿಯುವುದು ತುಂಬಾ ಕಷ್ಟವಾದ್ದರಿಂದ, ಅವರು ಅತ್ಯುತ್ತಮ ಆಟಗಾರನಾಗಬೇಕೆಂದು ನಾವು ಬಯಸುತ್ತೇವೆ. ಕಳೆದ ಕೆಲವು ವರ್ಷಗಳಿಂದ ಅವರು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಅವರಿಗೆ ಹಾಗೂ ಆಯ್ಕೆದಾರರು ಇಬ್ಬರಿಗೂ ಕಷ್ಟವಾಗುತ್ತದೆ,ʼ ಎಂದು ಹೇಳಿದರು.

ʻಮುಂದಿನ ಟಿ 20 ವಿಶ್ವಕಪ್‌ನವರೆಗೆ ನಮಗೆ ಸಮಯವಿದೆ. ಆಗ ನಾವು ಕೆಲವು ವಿಷಯಗಳನ್ನು ಪರಿಗಣಿಸಬಹುದು. ಹಾರ್ದಿಕ್ ಅವರ ಆಟ ಮುಖ್ಯ. ಫಿಟ್‌ನೆಸ್ ಸ್ಪಷ್ಟ ಸವಾಲಾಗಿದ್ದು, ನಾವು ಸದಾ ಲಭ್ಯವಿರುವ ವ್ಯಕ್ತಿಯನ್ನು ಬಯಸುತ್ತೇವೆ,ʼ ಎಂದು ಅಗರ್ಕರ್ ಹೇಳಿದರು.

ಮಾಜಿ ಉಪನಾಯಕ ಕೆ.ಎಲ್. ರಾಹುಲ್ ಕಡೆಗಣಿಸಲ್ಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ʻಆಗ ನಾನು ಆಯ್ಕೆದಾರ ಆಗಿರಲಿಲ್ಲ,ʼ ಎಂದು ಅಗರ್ಕರ್ ಹೇಳಿದರು.

ʻನಾನು ಬಂದ ನಂತರ 50 ಓವರ್‌ಗಳ ವಿಶ್ವಕಪ್ ಮತ್ತು ಟಿ20 ವಿಶ್ವಕಪ್ ಪಂದ್ಯಾವಳಿ ನಡೆದಿದೆ. ಫಿಟ್ನೆಸ್ ನಮ್ಮ ಕಾಳಜಿ. ಸೂರ್ಯ ಉತ್ತಮ ನಾಯಕನಾಗಲು ಅಗತ್ಯವಾದ ಗುಣಗಳನ್ನು ಹೊಂದಿದ್ದಾರೆ ಎಂದು ಭಾವಿಸುತ್ತೇವೆ,ʼ ಎಂದರು.

ʻಎರಡು ವರ್ಷ ಬಹಳ ದೀರ್ಘ ಅವಧಿ. ಅದು ಕೆಲವು ವಿಷಯಗಳನ್ನು ವಿಭಿನ್ನವಾಗಿ ಪ್ರಯತ್ನಿಸಲು ಮತ್ತು ನೋಡಲು ನಮಗೆ ಕಾಲಾವಕಾಶ ನೀಡುತ್ತದೆ. ಮುಖ್ಯ ವಿಷಯವೆಂದರೆ, ನಾವು ಸದಾ ಕಾಲ ಲಭ್ಯವಿರುವವರನ್ನು ಬಯಸುತ್ತೇವೆ. ಹಾರ್ದಿಕ್ ಅವರನ್ನು ಸ್ವಲ್ಪ ಉತ್ತಮವಾಗಿ ನಿರ್ವಹಿಸಬಹುದು ಎಂದುಕೊಂಡಿದ್ದೇವೆ,ʼ ಎಂದು ಹೇಳಿದರು.

ಜಡೇಜಾ ಅವರನ್ನು ಕೈಬಿಟ್ಟಿಲ್ಲ: ಟಿ 20 ಪಂದ್ಯಗಳಿಂದ ನಿವೃತ್ತರಾದ ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ʼಕೈ ಬಿಟ್ಟಿಲ್ಲʼ ಎಂದು ಅಗರ್ಕರ್ ಸ್ಪಷ್ಟಪಡಿಸಿದರು.

ʻಶ್ರೀಲಂಕಾ ಕಿರು ಸರಣಿಗೆ ಜಡೇಜಾ ಮತ್ತು ಅಕ್ಷರ್ ಅವರನ್ನು ಕರೆದುಕೊಂಡು ಹೋಗುವುದು ಅರ್ಥಹೀನವಾಗಿತ್ತು. ಜಡ್ಡು ಏನು ಮಾಡಿದ್ದಾರೆಂದು ನಮಗೆ ತಿಳಿದಿದೆ. ಅವರು ಸೊಗಸಾದ ವಿಶ್ವಕಪ್ (ಟಿ 20) ದಾಖಲೆ ಹೊಂದಿದ್ದಾರೆ. ಹಾಗಾಗಿ, ಅವರನ್ನು ಕೈಬಿಟ್ಟಿಲ್ಲ,ʼ ಎಂದು ಹೇಳಿದರು.

ʼಎಲ್ಲಾ ಆಯ್ಕೆಗಳು ಮುಕ್ತವಾಗಿವೆ. ಇಬ್ಬರನ್ನೂ ಆಯ್ಕೆ ಮಾಡಿದ್ದರೆ, ಅವರಿಬ್ಬರಲ್ಲಿ ಒಬ್ಬರಿಗೆ ಮೂರೂ ಪಂದ್ಯಗಳನ್ನು ಆಡುವ ಅವಕಾಶ ಸಿಗುತ್ತಿತ್ತು. ದೊಡ್ಡ ಟೆಸ್ಟ್ ಋತು ಬರಲಿದ್ದು, ಜಡೇಜಾ ಅಧಿಕ ಟೆಸ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜಡೇಜಾ ಒಬ್ಬ ಆಟಗಾರನಾಗಿ ಬಹಳ ಮುಖ್ಯ,ʼ ಎಂದು ಹೇಳಿದರು.

ರಾಹುಲ್, ರಿಷಬ್, ಪಾಂಡ್ಯಗೆ ನಾಯಕತ್ವದ ಸಾಧ್ಯತೆ: ಕೆ.ಎಲ್. ರಾಹುಲ್, ರಿಷಬ್ ಪಂತ್ ಮತ್ತು ಪಾಂಡ್ಯ ಅವರಿಗೆ ನಾಯಕತ್ವದ ಬಾಗಿಲು ಮುಚ್ಚಿಲ್ಲ ಎಂದು ಅಗರ್ಕರ್ ಹೇಳಿದರು.

ʻನಾವು ಪಂತ್ ಮತ್ತೆ ಆಡುವಂತೆ ಮಾಡಬೇಕಿದೆ. ಅದು ಮುಖ್ಯ. ಅವರು ಹೆಚ್ಚು ಕ್ರಿಕೆಟ್ ಆಡಿಲ್ಲ. ಒಂದು ವರ್ಷದ ನಂತರ ಹಿಂತಿರುಗಿರುವ ಆಟಗಾರರ ಮೇಲೆ ಹೊರೆ ಹೊರಿಸಲು ಬಯಸುವುದಿಲ್ಲ. ರಾಹುಲ್‌ ಸ್ವಲ್ಪ ಸಮಯದಿಂದ ಟಿ 20 ಭಾಗವಾಗಿಲ್ಲ. ಅಫ್ಘಾನಿಸ್ತಾನ ವಿರುದ್ಧ ಹಾರ್ದಿಕ್ ಗಾಯಗೊಂಡಾಗ ಸವಾಲು ಎದುರಾಗಿತ್ತು. ಆಗ, ರೋಹಿತ್ ಪರಿಸ್ಥಿತಿಯನ್ನು ಸುಧಾರಿಸಿದರು. ನಾವು ಮತ್ತೆ ಅಂಥ ಸನ್ನಿವೇಶ ಎದುರಿಸಲು ಇಚ್ಛಿಸುವುದಿಲ್ಲ,ʼ ಎಂದು ಹೇಳಿದರು.

ಗಿಲ್‌ಗೆ ಕಲಿಯುವ ಅವಕಾಶ: ಉಪನಾಯಕ ಶುಭಮನ್ ಗಿಲ್ ಅನುಭವ ಹಾಗೂ ಹಿರಿಯ ಆಟಗಾರರಿಂದ ಕಲಿಯಬೇಕೆಂದು ಆಯ್ಕೆದಾರರು ಬಯಸಿದ್ದಾರೆ ಎಂದು ಅಗರ್ಕರ್ ಹೇಳಿದರು.

ʻಶುಬ್ಮನ್ ಅವರು ಮೂರೂ ವಿಧದಲ್ಲಿ ಆಡಬಲ್ಲ ಆಟಗಾರ. ಕಳೆದ ವರ್ಷ ಉತ್ತಮ ಗುಣಮಟ್ಟವನ್ನು ತೋರಿಸಿದ್ದಾರೆ. ತಂಡದಲ್ಲಿರುವ ಹಿರಿಯರಿಂದ ಕಲಿಯಬಲ್ಲವರನ್ನು ಹುಡುಕಬೇಕಿದೆ. ಸೂರ್ಯ ಅಥವಾ ರೋಹಿತ್ ಅವರಿಂದ ಇಂಥ ಸವಾಲು ಎದುರಾಗುವುದಿಲ್ಲ.ಗಿಲ್‌ ನಾಯಕತ್ವದ ಗುಣಗಳನ್ನು ತೋರಿಸಿದ್ದಾರೆ. ಜೀವನದಲ್ಲಿ ಯಾವುದೇ ಗ್ಯಾರಂಟಿಗಳಿಲ್ಲ,ʼ ಎಂದು ಹೇಳಿದರು.

ವೇಗದ ಬೌಲಿಂಗ್ ಸಂಯೋಜನೆ: ಭಾರತದಲ್ಲಿ ಟೆಸ್ಟ್ ಆಡುವಾಗ ಮೂವರು ಸೀಮರ್‌ಗಳ ಅಗತ್ಯವಿಲ್ಲ ಎಂದು ಅಗರ್ಕರ್ ಒಪ್ಪಿಕೊಂಡರು. ʻಎನ್‌ಸಿಎಎಯಲ್ಲಿ ಕೆಲವು ವೇಗದ ಬೌಲರ್‌ಗಳು ಇದ್ದಾರೆ. ಮೊಹಮ್ಮದ್ ಶಮಿ ಬೌಲಿಂಗ್ ಮಾಡಲು ಪ್ರಾರಂಭಿಸಿರುವುದು ಉತ್ತಮ ಸೂಚನೆ. ಸೆಪ್ಟೆಂಬರ್ 19ರಂದು ಮೊದಲ ಟೆಸ್ಟ್ ನಡೆಯಲಿದೆ. ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿರುವ ಹುಡುಗರೊಂದಿಗೆ ಮಾತನಾಡಬೇಕಿದೆ. ಟೆಸ್ಟ್‌ಗಳಲ್ಲಿ ಹನ್ನೊಂದು ಆಟಗಾರರಲ್ಲಿ ಮೂವರು ವೇಗಿಗಳನ್ನು ಆಡಿಸುವುದಿಲ್ಲ. ಆದರೆ, ಭವಿಷ್ಯದಲ್ಲಿ ಬಹಳಷ್ಟು ಟೆಸ್ಟ್ ಪಂದ್ಯಗಳು ಬರಲಿವೆ. ಆಗ, ಈ ಬಗ್ಗೆ ಮಾತುಕತೆ ಅಗತ್ಯವಿದೆ,ʼ ಎಂದು ವಿವರಿಸಿದರು.

ಕೊಹ್ಲಿ ಜೊತೆ ಸೌಹಾರ್ದ ಸಂಬಂಧ: ವಿರಾಟ್ ಕೊಹ್ಲಿ ಜೊತೆ ಸಂಬಂಧ ಪ್ರತಿಕ್ರಿಯಿಸಿದ ‌ಮುಖ್ಯ ಕೋಚ್‌ ಗೌತಮ್ ಗಂಭೀರ್, ತಾವಿಬ್ಬರೂ ಒಂದೇ ತಂಡಕ್ಕಾಗಿ ಆಡುತ್ತಾರೆ. ಇಬ್ಬರ ದೃಷ್ಟಿಕೋನಗಳು ಪ್ರತ್ಯೇಕ ಆಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ʻವದಂತಿಗಳು ಟಿಆರ್‌ಪಿಗೆ ಒಳ್ಳೆಯದು. ಆದರೆ, ಅವರೊಂದಿಗೆ ನನ್ನ ಸಂಬಂಧ ಉತ್ತಮವಾಗಿದೆ. ನಾವು 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದು ಮುಖ್ಯ. ಕೊಹ್ಲಿ ವಿಶ್ವ ದರ್ಜೆಯ ಆಟಗಾರ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ,ʼ ಎಂದು ಗಂಭೀರ್ ಹೇಳಿದ್ದಾರೆ.

Read More
Next Story