ತಿರುಪತಿಯಲ್ಲಿ ಮತ್ತೊಂದು ಹಗರಣ; ರೇಷ್ಮೆ ಹೆಸರಲ್ಲಿ ಪಾಲಿಸ್ಟರ್‌ ವಸ್ತ್ರ ಪೂರೈಸಿ 54.95 ಕೋಟಿ ರೂ. ವಂಚನೆ
x

ತಿರುಪತಿಯಲ್ಲಿ ಮತ್ತೊಂದು ಹಗರಣ; ರೇಷ್ಮೆ ಹೆಸರಲ್ಲಿ ಪಾಲಿಸ್ಟರ್‌ ವಸ್ತ್ರ ಪೂರೈಸಿ 54.95 ಕೋಟಿ ರೂ. ವಂಚನೆ

ಟಿಟಿಡಿ ಆಡಳಿತ ಮಂಡಳಿಯು ವಿಐಪಿಗಳು ಮತ್ತು ದಾನಿಗಳಿಗೆ ಉಡುಗೊರೆ ರೂಪದಲ್ಲಿ ರೇಷ್ಮೆ ಶಾಲುಗಳನ್ನು ನೀಡುತ್ತಿದೆ. ತಿರುಮಲ ದೇವಸ್ಥಾನದ ರಂಗನಾಯಕ ಮಂಟಪದ ಬಳಿ ದರ್ಶನದ ಸಮಯದಲ್ಲಿ ಟಿಟಿಡಿಗೆ ದೇಣಿಗೆ ನೀಡುವವರನ್ನು ಈ ರೇಷ್ಮೆ ಶಾಲುಗಳಿಂದ ಗೌರವಿಸುವ ಸಂಪ್ರದಾಯವಿದೆ.


ತಿರುಪತಿ ತಿರುಮಲ ಲಡ್ಡು ವಿವಾದ ಮತ್ತು ಪರಕಾಮಣಿ ಕಳ್ಳತನದ ತನಿಖೆ ನಡೆಯುತ್ತಿರುವಾಗಲೇ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ದೇವಾಲಯಕ್ಕೆ ವಸ್ತ್ರ ಅಥವಾ ಶಲ್ಯ ಪೂರೈಸುತ್ತಿದ್ದ ಕಂಪನಿಯೊಂದು ರೇಷ್ಮೆ ಬದಲಿಗೆ ಪಾಲಿಯೆಸ್ಟರ್ ವಸ್ತ್ರ ವಿತರಿಸುವ ಮೂಲಕ ತಿರುಪತಿ ತಿರುಮಲ ದೇವಸ್ಥಾನಂಗೆ (ಟಿಟಿಡಿ) ಬರೋಬ್ಬರಿ 54 ಕೋಟಿ ರೂ. ವಂಚಿಸಿರುವ ಆರೋಪ ಕೇಳಿ ಬಂದಿದೆ.

ಟಿಟಿಡಿ ಜಾಗೃತ ದಳವು ಖಾಸಗಿ ಕಂಪನಿಯೊಂದು 2015 ರಿಂದ 2025 ರವರೆಗೆ ವಸ್ತ್ರ ಪೂರೈಕೆ ಹಾಗೂ ವಹಿವಾಟು ಕುರಿತು ನಡೆಸಿದ ಪರಿಶೀಲನೆಯಲ್ಲಿ ಅಕ್ರಮ ನಡೆದಿರುವುದನ್ನು ಪತ್ತೆ ಮಾಡಿದೆ. ಸದ್ಯ ಈ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ಇಲಾಖೆ ತನಿಖೆಗಾಗಿ ವರ್ಗಾಯಿಸಲಾಗಿದೆ.

ವಿಆರ್‌ಎಸ್‌ ಎಕ್ಸ್‌ಪೋರ್ಟ್ಸ್ ಮತ್ತು ಅದರ ಅಂಗಸಂಸ್ಥೆಯು ಟಿಟಿಡಿಗೆ ಶುದ್ಧ ಮಲ್ಬೆರಿ ರೇಷ್ಮೆ ವಸ್ತ್ರಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿತ್ತು. ಆದರೆ, ಅದು ರೇಷ್ಮೆ ಬದಲಿಗೆ 100 ಪ್ರತಿಶತ ಪಾಲಿಸ್ಟರ್ ಬಟ್ಟೆ ಪೂರೈಸಿದೆ. 2015 ರಿಂದ 2025 ರವರೆಗೆ ಈ ಕಂಪನಿಯು ಸುಮಾರು 54.95 ಕೋಟಿ ರೂ. ಮೌಲ್ಯದ ಪಾಲಿಸ್ಟರ್ ಬಟ್ಟೆಗಳನ್ನು ಪೂರೈಸಿ ಟಿಟಿಡಿಗೆ ವಂಚಿಸಿದೆ ಎಂದು ಜಾಗೃತ ದಳ ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಟಿಟಿಡಿ ಈ ವಸ್ತ್ರಗಳನ್ನು ವಿಐಪಿಗಳು ಮತ್ತು ದಾನಿಗಳಿಗೆ ಉಡುಗೊರೆಯಾಗಿ ನೀಡುತ್ತಿತ್ತು. ತಿರುಮಲ ದೇವಸ್ಥಾನದ ರಂಗನಾಯಕ ಮಂಟಪದ ಬಳಿ ವಿರಾಮದ ದರ್ಶನ ಸಮಯದಲ್ಲಿ ಟಿಟಿಡಿಗೆ ದೇಣಿಗೆ ನೀಡುವವರನ್ನು ಈ ವಸ್ತ್ರಗಳಿಂದ ಗೌರವ ಸಂಪ್ರದಾಯ ನಡೆದು ಬಂದಿದೆ.

ಈಗ ಖಾಸಗಿ ಸಂಸ್ಥೆಯು ರೇಷ್ಮೆ ಬದಲಿಗೆ ಪಾಲಿಸ್ಟರ್‌ ಬಟ್ಟೆಗಳನ್ನು ನೀಡಿದ್ದು, ಇದರ ಹಿಂದಿರುವ ಜಾಲದ ಪತ್ತೆಗಾಗಿ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯು ಎಸಿಬಿಗೆ ದೂರು ವರ್ಗಾಯಿಸಿದೆ. ವಿಆರ್‌ಎಸ್‌ ಎಕ್ಸ್‌ಪೋರ್ಟ್ಸ್ ಕಂಪನಿಯು ತಿರುಪತಿ ಬಳಿ ತನ್ನ ಶಾಖೆ ಹೊಂದಿದ್ದು, ಟಿಟಿಡಿ ಜಾಗೃತ ಇಲಾಖೆಯು ಸರಕುಗಳ ಮಾದರಿ ಸಂಗ್ರಹಿಸಿದೆ.

ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಇತ್ತೀಚೆಗೆ ಈ ಕಂಪನಿಗಳು ಪೂರೈಸುವ ವಸ್ತ್ರಗಳ ಗುಣಮಟ್ಟ ಪರಿಶೀಲಿಸುವಂತೆ ಜಾಗೃತ ದಳಕ್ಕೆ ಆದೇಶಿಸಿದ್ದರು. ಟೆಂಡರ್ ನಿಯಮಗಳ ಪ್ರಕಾರ, ಈ ಕಂಪನಿಯು ಶುದ್ಧ ನೇಯ್ದ ರೇಷ್ಮೆ ಪೇಟಾ ಮತ್ತು ಶಾಲುಗಳನ್ನು ಪೂರೈಸಬೇಕು. ಅಲ್ಲದೆ, ಒಂದು ಕಡೆ ಓಂ ನಮೋ ವೆಂಕಟೇಶಾಯ ಎಂದು ತೆಲುಗಿನಲ್ಲಿ ಮತ್ತು ಇನ್ನೊಂದು ಬದಿಯಲ್ಲಿ ಸಂಸ್ಕೃತದಲ್ಲಿ ನೇಯಬೇಕು. ಅದರ ಎರಡೂ ಬದಿಗಳಲ್ಲಿ ಶಂಖ ಚಕ್ರದ ಹೆಸರನ್ನು ಹೊಂದಿರುವ ಚಿಹ್ನೆಗಳು ಇರಬೇಕು ಎಂಬ ನಿಯಮವಿದೆ.

ಎಸಿಬಿ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವರದಿಯನ್ನು ಶೀಘ್ರವೇ ಸಲ್ಲಿಸಲಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ನಡೆದ ವಿವಾದಗಳು

ಲಡ್ಡು ತುಪ್ಪದ ಕಲಬೆರಕೆ

ತಿರುಪತಿಯ ಪವಿತ್ರ ಲಡ್ಡು ಪ್ರಸಾದ ತಯಾರಿಕೆಗೆ ಬಳಸುವ ತುಪ್ಪದಲ್ಲಿ ಕಲಬೆರಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. 2019 ರಿಂದ 2024ರ ಅವಧಿಯಲ್ಲಿ ಪೂರೈಸಲಾದ 250 ಕೋಟಿ ರೂ. ಅಧಿಕ ಮೌಲ್ಯದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ತಾಳೆ ಎಣ್ಣೆಯಂತಹ ಕಳಪೆ ಸಸ್ಯ ಆಧಾರಿತ ಪದಾರ್ಥಗಳನ್ನು ಬೆರೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ವಿವಾದವು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ ನಂತರ, ಈ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ಎಸ್‌ಐಟಿ ರಚಿಸಲಾಯಿತು. ತನಿಖೆಯಲ್ಲಿ ಹಲವು ಡೇರಿ ಸಂಸ್ಥೆಗಳು ಈ ಕಲಬೆರಕೆ ತುಪ್ಪವನ್ನು ಪೂರೈಸಿರುವುದು ದೃಢಪಟ್ಟಿತ್ತು.

ಕಾಣಿಕೆ ಕಳವು ಪ್ರಕರಣ

ಭಕ್ತರು 'ಶ್ರೀವಾರಿ ಹುಂಡಿ'ಗೆ ಹಾಕುವ ಕಾಣಿಕೆ ಹಣವನ್ನು ಲೆಕ್ಕ ಹಾಕುವ ಪರಕಾಮಣಿ ವಿಭಾಗದಲ್ಲಿಯೇ ಕಳವು ನಡೆದಿತ್ತು. ಏಪ್ರಿಲ್ 2023 ರಲ್ಲಿ ದೇವಾಲಯದ ಸಂಬಂಧಿತ ಮಠದ ಗುಮಾಸ್ತ ಸಿ.ವಿ.ರವಿ ಕುಮಾರ್ ಅವರು ಭಕ್ತರ ಕಾಣಿಕೆಯನ್ನು ಕದಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಟಿಟಿಡಿ ಆಡಳಿತದಲ್ಲಿ ಆಂತರಿಕ ಭದ್ರತಾ ಲೋಪಗಳ ಬಗ್ಗೆ ಇದು ಅನುಮಾನಗಳನ್ನು ಹುಟ್ಟುಹಾಕಿತ್ತು.

ಶ್ರೀವಾಣಿ ಟ್ರಸ್ಟ್ ನಿಧಿಗಳ ದುರುಪಯೋಗ

ಶ್ರೀವಾಣಿ ಟ್ರಸ್ಟ್‌ನ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳು 2024ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಮುನ್ನಾದಿನದಲ್ಲಿ ರಾಜಕೀಯವಾಗಿ ಚರ್ಚೆಯಾಗಿದ್ದವು. ಟ್ರಸ್ಟ್‌ನ ಹಣವನ್ನು ದೇವಾಲಯದ ಆಡಳಿತವು ಸೂಕ್ತವಾಗಿ ನಿರ್ವಹಿಸುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

Read More
Next Story