ಮೋದಿ ಸರ್ಕಾರದಿಂದ ವಿದೇಶಿ ನೆಲದಲ್ಲಿ ಉಗ್ರರ ಹತ್ಯೆ: ಗಾರ್ಡಿಯನ್
x

ಮೋದಿ ಸರ್ಕಾರದಿಂದ ವಿದೇಶಿ ನೆಲದಲ್ಲಿ ಉಗ್ರರ ಹತ್ಯೆ: ಗಾರ್ಡಿಯನ್

ಪುಲ್ವಾಮಾ ನಂತರ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಕಾರ್ಯತಂತ್ರದ ಭಾಗ


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಕಾರ್ಯತಂತ್ರದ ಭಾಗವಾಗಿ ಪಾಕಿಸ್ತಾನ ಸೇರಿದಂತೆ ವಿದೇಶಗಳಲ್ಲಿ ಹಲವಾರು ಭಯೋತ್ಪಾದಕರ ಹತ್ಯೆಗಳನ್ನು ನಡೆಸಿದೆ ಎಂದು ‌ʻದಿ ಗಾರ್ಡಿಯನ್ʼ ವರದಿ ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತರು ಮತ್ತು ಪಾಕಿಸ್ತಾನದ ತನಿಖಾಧಿಕಾರಿಗಳು ಹಂಚಿಕೊಂಡ ದಾಖಲೆಗಳನ್ನು ಉಲ್ಲೇಖಿಸಿರುವ ವರದಿ, ಭಾರತದ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ಕಾರ್ಯಾ ಚರಣೆ 2019ರಲ್ಲಿ ವೇಗ ಪಡೆದುಕೊಂಡಿತು. ಬೇಹುಗಾರಿಕಾ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ನೇರವಾಗಿ ಪ್ರಧಾನ ಮಂತ್ರಿಯವರ ಕಚೇರಿಯಿಂದ ಆದೇಶ ಪಡೆದುಕೊಂಡಿದೆ ಎಂದು ಹೇಳಿದೆ.

ಕೆನಡಾ ಮತ್ತು ಅಮೆರಿಕ ಸರ್ಕಾರಗಳು ತಮ್ಮ ನೆಲದಲ್ಲಿ ನಡೆದ ಹತ್ಯೆ ಪ್ರಯತ್ನಗಳಲ್ಲಿ ಭಾರತೀಯ ಏಜೆಂಟರ ಪಾತ್ರದ ಬಗ್ಗೆ ಮಾಡಿದ ಆರೋಪಗಳನ್ನು ವರದಿ ಬೆಂಬಲಿಸುತ್ತವೆ. ಜೂನ್ 2023 ರಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯನ್ನು ಭಾರತ ಆಯೋಜಿಸಿದೆ ಎಂದು ಕೆನಡಾ ಆರೋಪಿಸಿತ್ತು. ಮತ್ತೊಂದೆಡೆ, ಅಮೆರಿಕ ತನ್ನ ನೆಲದಲ್ಲಿ ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ವಿಫಲ ಸಂಚಿನಲ್ಲಿ ನವದೆಹಲಿಯ ಪಾತ್ರವಿದೆ ಎಂಬ ಸುಳಿವು ನೀಡಿದೆ.

2020ರಿಂದ 20 ಪಾಕ್ ಉಗ್ರರ ಹತ್ಯೆ: ದಿ ಗಾರ್ಡಿಯನ್ ಸಂಗ್ರಹಿಸಿದ ಮಾಹಿತಿ‌ ಪ್ರಕಾರ, ಭಾರತ 2020 ರಿಂದ ಪಾಕಿಸ್ತಾನದಲ್ಲೇ ಸುಮಾರು 20 ಭಯೋತ್ಪಾದಕರ ಹತ್ಯೆಗಳನ್ನು ರೂಪಿಸಿದೆ. ಈ ಹತ್ಯೆಗಳನ್ನು ಅಪರಿಚಿತ ಬಂದೂಕುಧಾರಿಗಳು ನಡೆಸಿದ್ದಾರೆ ಎಂದಿದೆ.

ದಿ ಗಾರ್ಡಿಯನ್‌ನೊಂದಿಗೆ ಮಾತನಾಡಿದ ಭಾರತೀಯ ಗುಪ್ತಚರ ಅಧಿಕಾರಿಗಳು, ಹತ್ಯೆಗಳಲ್ಲಿ ರಾ ನೇರ ಪಾಲ್ಗೊಂಡಿದೆ. ಪಾಶ್ಚಿಮಾತ್ಯ ದೇಶಗಳು ಮತ್ತು ಪಾಕಿಸ್ತಾನದಲ್ಲಿ ಖಾಲಿಸ್ತಾನ್ ಚಳವಳಿಯ ನಾಯಕರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿದೆ ಎಂದು ಹೇಳಿದ್ದಾರೆ.

ಸ್ಲೀಪರ್ ಸೆಲ್‌ಗಳಿಂದ ನಿರ್ವಹಣೆ: ಗುಪ್ತಚರ ಏಜೆಂಟರ ಸ್ಲೀಪರ್ ಸೆಲ್‌ಗಳು ಈ ಹತ್ಯೆಗಳನ್ನು ನಡೆಸಿವೆ. ಸ್ಥಳೀಯ ಅಪರಾಧಿಗಳು ಅಥವಾ ಬಡವರನ್ನು ಹತ್ಯೆಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ಪಾಕಿಸ್ತಾನದ ತನಿಖಾಧಿಕಾರಿಗಳು 2023 ರಲ್ಲಿ ಹೇಳಿದ್ದರು. ಇದಕ್ಕಾಗಿ ಭಾರತೀಯ ಏಜೆಂಟರು ಜಿಹಾದಿಗಳನ್ನು ನೇಮಿಸಿಕೊಂಡರು ಮತ್ತು ಅವರು ಪಾಷಂಡಿಗಳನ್ನು ಕೊಂದರು ಎಂದು ವರದಿ ಹೇಳಿದೆ.

ಈ ಕಾರ್ಯಾಚರಣೆಯಲ್ಲಿ ಕಾಶ್ಮೀರಿ ಉಗ್ರಗಾಮಿ ಜಾಹಿದ್ ಅಖುಂಡ್, ಜೈಶ್-ಎ-ಮೊಹಮ್ಮದ್ ಕಮಾಂಡರ್ ಶಾಹಿದ್ ಲತೀಫ್, ಉಗ್ರಗಾಮಿ ಸಂಘಟನೆ ಹಿಜ್ಬುತ್ ಮುಜಾಹಿದ್ದೀನ್ ಕಮಾಂಡರ್ ಬಶೀರ್ ಅಹ್ಮದ್ ಪೀರ್ ಮತ್ತು ಭಾರತದ ವಾಂಟೆಡ್ ಲಿಸ್ಟ್‌ನಲ್ಲಿರುವ ಸಲೀಂ ರೆಹಮಾನಿ ಹತ್ಯೆಗೊಳಗಾದರು.

ಏರ್ ಇಂಡಿಯಾ ವಿಮಾನದ ಅಪಹರಣದಲ್ಲಿ ಭಾಗಿಯಾಗಿದ್ದ ಅಖುಂಡ್ ಅಲಿಯಾಸ್ ಜಹೂರ್ ಮಿಸ್ತ್ರಿ ಹತ್ಯೆ ಪ್ರಕರಣದಲ್ಲಿ ರಾ ಏಜೆಂಟ್‌ ಅಖುಂಡ್‌ನ ಚಲನವಲನಗಳು ಮತ್ತು ಸ್ಥಳದ ಮಾಹಿತಿಗಾಗಿ ಹಣ ಪಾವತಿಸಿದ್ದಾರೆ. ಆನಂತರ ಆಕೆ ಪತ್ರಕರ್ತೆ ಎಂದು ಹೇಳಿಕೊಂಡು ಅವನನ್ನು ಸಂಪರ್ಕಿಸಿದಳು. ಮಾರ್ಚ್ 2022 ರಲ್ಲಿ ಕರಾಚಿಯಲ್ಲಿ ಆತನನ್ನು ಕೊಲ್ಲಲಾಯಿತು.ಇದಕ್ಕಾಗಿ ಲಕ್ಷಾಂತರ ರೂ. ಪಾವತಿಸಲಾಯಿತು. ಹಂತಕರು ಪರಾರಿಯಾದರು. ಆದರೆ, ಸ್ಥಳೀಯರನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿದರು ಎಂದು ಗಾರ್ಡಿಯನ್‌ ಹೇಳಿದೆ.

ಯುಎಇ ಪಾತ್ರ: ಪಾಕಿಸ್ತಾನಿ ಏಜೆಂಟರು ಹೇಳುವಂತೆ ಹೆಚ್ಚಿನ ಹತ್ಯೆಗಳು ಯುಎಇ ಹೊರಗಿನಿಂದ ಸಂಯೋಜಿಸಲ್ಪಟ್ಟಿವೆ. ಅಲ್ಲಿ ರಾ ಸ್ಲೀಪರ್ ಸೆಲ್‌ಗಳಿದ್ದು, ಹಂತ ಹಂತವಾಗಿ ಕಾರ್ಯಾಚರಣೆಗಳನ್ನು ಯೋಜಿಸಲಾಗುತ್ತದೆ. ಕೊಲೆ ಮಾಡಲು ಲಕ್ಷಾಂತರ ರೂ. ಪಾವತಿಸಲಾಗುತ್ತಿದ್ದು, ದುಬೈ ಮೂಲಕ ವಹಿವಾಟು ನಡೆಸಲಾಗುತ್ತಿತ್ತು. ನೇಪಾಳ, ಮಾಲ್ಡೀವ್ಸ್ ಮತ್ತು ಮಾರಿಷಸ್‌ನಲ್ಲಿ ನಡೆದ ಹತ್ಯೆಗಳನ್ನು ರಾ ನಿರ್ವಹಿಸಿದೆ ಎಂದು ವರದಿ ಹೇಳಿದೆ.

ಹಲವಾರು ವಿಫಲ ಪ್ರಯತ್ನಗಳ ನಂತರ ಜೈಶೆಯ ಉಗ್ರ ಲತೀಫ್ ನನ್ನು 20 ವರ್ಷದ ಪಾಕಿಸ್ತಾನಿ ಯುವಕ ಹತ್ಯೆ ಮಾಡಿದ. ಆ ಯುವಕನ್ನು ಎಮಿರೇಟ್ಸ್‌ನಲ್ಲಿ ರಾ ನೇಮಕ ಮಾಡಿಕೊಂಡಿದ್ದು, 1.5 ದಶಲಕ್ಷ ಪಾಕಿಸ್ತಾನಿ ರೂ. (4.2 ಲಕ್ಷ ರೂ.) ನೀಡಿದೆ. ಪೀರ್‌ ಹತ್ಯೆಯನ್ನು ಕೂಡ ಯುಎಇಯಿಂದಲೇ ಯೋಜಿಸಲಾಗಿತ್ತು ಎಂದು ವರದಿ ಹೇಳಿದೆ.

ಹತ್ಯೆಗಳಿಗೆ ಪ್ರಚೋದನೆ ಏನು?: 2019 ರಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲಿ 40 ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರ ಸಾವಿನ ನಂತರ ವಿದೇಶದಲ್ಲಿ ಭಯೋತ್ಪಾದಕರ ನಿರ್ಮೂಲನೆ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ ಎಂದು ಇಬ್ಬರು ಭಾರತೀಯ ಗುಪ್ತಚರ ಏಜೆಂಟರು ದಿ ಗಾರ್ಡಿಯನ್ ಗೆ ಹೇಳಿದ್ದಾರೆ.

ಮೋದಿ ಅವರು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ, ದಾಳಿಯ ಬೆದರಿಕೆಗಳನ್ನು ತೊಡೆದುಹಾಕಲು ಮುಂದಾಯಿತು.ʻಪುಲ್ವಾಮಾ ನಂತರ ದೇಶದ ಹೊರಗಿನ ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳಲಾಯಿತು. ಅವರ ಸುರಕ್ಷಿತ ತಾಣಗಳು ಪಾಕಿಸ್ತಾನದಲ್ಲಿ ಇದ್ದುದರಿಂದ, ದಾಳಿಯನ್ನು ನಿಲ್ಲಿಸಲು ನಮಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಮೂಲಕ್ಕೇ ಹೋಗಬೇಕಾಯಿತುʼ ಎಂದು ಗುಪ್ತಚರ ಅಧಿಕಾರಿಯೊಬ್ಬರು ದಿ ಗಾರ್ಡಿಯನ್‌ಗೆ ತಿಳಿಸಿದ್ದಾರೆ.

ಮೊಸ್ಸಾದ್, ಕೆಜಿಬಿ ಪ್ರೇರಿತ ಕಾರ್ಯಾಚರಣೆ: ನವದೆಹಲಿಯ ಕಾರ್ಯಾಚರಣೆಗಳು ಇಸ್ರೇಲಿನ ಮೊಸಾದ್‌ ಮತ್ತು ಸೋವಿಯತ್ ಒಕ್ಕೂಟದ ಕೆಜಿಬಿಯಿಂದ ಸ್ಫೂರ್ತಿ ಪಡೆದಿವೆ. ಸೌದಿ ಪತ್ರಕರ್ತ ಮತ್ತು ಭಿನ್ನಮತೀಯ ಜಮಾಲ್ ಖಶೋಗಿ ಅವರ ಹತ್ಯೆ ಕುರಿತು ರಾ ಅಧಿಕಾರಿಗಳು ಪಿಎಂಒನಲ್ಲಿ ಚರ್ಚಿಸಿದ್ದಾರೆ. ಸೌದಿಗಳು ಇದನ್ನು ಮಾಡಬಹುದಾದರೆ, ನಾವೇಕೆ ಮಾಡಬಾರದು ಎಂದು ಹಿರಿಯ ಅಧಿಕಾರಿಯೊಬ್ಬರು ಸಭೆಯಲ್ಲಿ ಕೇಳಿದರುʼ ಎಂದು ಅಧಿಕಾರಿ ಹೇಳಿದ್ದಾರೆ.

ಪನ್ನುನ್ ಮತ್ತು ನಿಜ್ಜರ್ ಹತ್ಯೆ: ʻನಿಜ್ಜರ್ ಮತ್ತು ಪನ್ನುನ್ ಹತ್ಯೆಯಲ್ಲಿ ಯಾವುದೇ ಪಾತ್ರವನ್ನು ನವದೆಹಲಿ ನಿರಾಕರಿಸಿದೆ. ಆದರೆ, ಕೆನಡಾ ಮತ್ತು ಅಮೆರಿಕ ಆರೋಪ ಮಾಡಿದ ನಂತರ ಪಾಕಿಸ್ತಾನದಲ್ಲಿ ಹತ್ಯೆಗಳನ್ನು ಅಮಾನತುಗೊಳಿಸುವಂತೆ ಇತ್ತೀಚೆಗೆ ಆದೇಶಿಸಿದೆʼ ಎಂದು ತಿಳಿಸಿದರು. ʻಕೃಷಿ ಕಾನೂನು ವಿರುದ್ಧ ರೈತರ ಪ್ರತಿಭಟನೆಗೆ ವಿದೇಶದಲ್ಲಿ ನೆಲೆಸಿರುವ ಸಿಖ್ ಕಾರ್ಯಕರ್ತರು ಉತ್ತೇಜನ ನೀಡುತ್ತಿದ್ದಾರೆಂದು ಭಾರತ ಸರ್ಕಾರ ಶಂಕಿಸಿದೆʼ ಎಂದು ಹೇಳಿದರು. ಖಲಿಸ್ತಾನಿ ನಾಯಕ ಪರಮ್‌ಜಿತ್ ಸಿಂಗ್ ಪಂಜ್ವಾರ್ ಅವರನ್ನು ಲಾಹೋರಿನಲ್ಲಿ ಭಾರತೀಯ ಏಜೆಂಟರು ಕೊಂದಿದ್ದಾರೆ ಎಂದು ಪಾಕಿಸ್ತಾನಿ ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ಆರೋಪ ತಳ್ಳಿಹಾಕಿದ ಎಂಇಎ: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಆರೋಪಗಳನ್ನು ʻಸುಳ್ಳು ಮತ್ತು ದುರುದ್ದೇಶಪೂರಿತ ಭಾರತ ವಿರೋಧಿ ಪ್ರಚಾರʼ ಎಂದು ತಳ್ಳಿಹಾಕಿದೆ. ಬೇರೆ ದೇಶಗಳಲ್ಲಿ ಹತ್ಯೆ ನಡೆಸುವುದು ʻಭಾರತದ ಸರ್ಕಾರದ ನೀತಿಯಲ್ಲʼ ಎಂಬ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಹೇಳಿಕೆಯನ್ನು ಸಚಿವಾಲಯ ಪುನರುಚ್ಚರಿಸಿದೆ.

ಹಿರಿಯ ರಾ ಅಧಿಕಾರಿಯೊಬ್ಬರು ದಿ ಗಾರ್ಡಿಯನ್ ಜೊತೆ ಮಾತನಾಡಿ, ಹತ್ಯೆಗಳನ್ನು ಇಸ್ಲಾಮಾಬಾದ್ ನಡೆಸಿರುವ ಸಾಧ್ಯತೆಯಿದೆ. ಈ ʻನ್ಯಾಯಬಾಹಿರ ಹತ್ಯೆಗಳುʼ ಏಜೆನ್ಸಿಯ ಕೆಲಸವಲ್ಲ ಎಂದು ಹೇಳಿದರು.

ಪಾಕಿಸ್ತಾನದ ಮೌನವೇಕೆ?; ದಿ ಗಾರ್ಡಿಯನ್ ಜೊತೆ ಮಾತನಾಡಿದ ವಿಶ್ಲೇಷಕರು, ಪಾಕಿಸ್ತಾನಿ ಅಧಿಕಾರಿಗಳು ಹತ್ಯೆಗಳ ಬಗ್ಗೆ ಮೌನ ವಹಿಸಿದ್ದಾರೆ. ಏಕೆಂದರೆ, ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಭಯೋತ್ಪಾದಕರು ಮತ್ತು ನಿಷೇಧಿತ ಉಗ್ರಗಾಮಿ ಗುಂಪುಗಳಿಗೆ ಸೇರಿದವರು. ಇವರು ದೇಶದಲ್ಲಿ ಇಲ್ಲ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

Read More
Next Story