Arvind Kejriwal : ದೆಹಲಿ ಸೋಲಿನ ಬಳಿಕ ಪಂಜಾಬ್​ ಶಾಸಕರ ತುರ್ತು ಸಭೆ ಕರೆದ ಅರವಿಂದ್ ಕೇಜ್ರಿವಾಲ್​
x
ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್​ ಮಾನ್​. (ಸಂಗ್ರಹ ಚಿತ್ರ)

Arvind Kejriwal : ದೆಹಲಿ ಸೋಲಿನ ಬಳಿಕ ಪಂಜಾಬ್​ ಶಾಸಕರ ತುರ್ತು ಸಭೆ ಕರೆದ ಅರವಿಂದ್ ಕೇಜ್ರಿವಾಲ್​

Arvind Kejriwal : ಈ ಸಭೆ ಮಂಗಳವಾರ ನಡೆಯಲಿದೆ ಎಂದು ಆಪ್​ ಮೂಲಗಳು ತಿಳಿಸಿವೆ. 30 ಎಎಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಸಭೆ ಕರೆದು ಮಾತುಕತೆ ನಡೆಸಲಿದ್ದಾರೆ.


ಚಂಡಿಗಢ: ದೆಹಲಿಯಲ್ಲಿ ಆಪ್​ ಸೋತಿರುವುದು ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್​​ಗೆ ಆತಂಕ ಹುಟ್ಟಿಸಿದೆ. ಪಂಜಾಬ್ ಈಗ ಆಪ್​ ಸರ್ಕಾರ ಇರುವ ಏಕೈಕ ರಾಜ್ಯ. ಈ ನಡುವೆ, ಪಂಜಾಬ್​ನ ಪ್ರತಿ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ರಾಜ್ಯದ 30 ಎಎಪಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಅರವಿಂದ್ ಕೇಜ್ರಿವಾಲ್ ಅಲ್ಲಿನ ಶಾಸಕರ ತುರ್ತು ಸಭೆ ಕರೆದಿದ್ದಾರೆ.

ಈ ಸಭೆ ಮಂಗಳವಾರ ನಡೆಯಲಿದೆ ಎಂದು ಆಪ್​ ಮೂಲಗಳು ತಿಳಿಸಿವೆ. 30 ಎಎಪಿ ಶಾಸಕ ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಸಭೆ ಕರೆದು ಮಾತುಕತೆ ನಡೆಸಲಿದ್ದಾರೆ.

27 ವರ್ಷಗಳ ಬಳಿಕ ದಿಲ್ಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಎಎಪಿಯ ದಶಕದ ಆಡಳಿತ ಕೊನೆಗೊಂಡಿದೆ. ಈ ಫಲಿತಾಂಶ ಪ್ರಕಟಗೊಂಡ ತಕ್ಷಣ ಪ್ರತಾಪ್ ಸಿಂಗ್ ಬಾಜ್ವಾ, ಎಎಪಿ ಶಾಸಕರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಎಎಪಿ ಶಾಸಕರು ಈಗ ಆಪ್​ಗೆ ಉಳಿಗಾಲ ಇಲ್ಲ ಎಂಬುದನ್ನು ಅರಿತುಕೊಂಡಿದ್ದಾರೆ. ಹೀಗಾಗಿ ಅವರೆಲ್ಲರೂ ಕಾಂಗ್ರೆಸ್​ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಪಂಜಾಬ್‌ನಲ್ಲಿಎಎಪಿಯೊಳಗೆ ಆಂತರಿಕ ಸಂಘರ್ಷವಿದೆ. ಹೀಗಾಗಿ ರಾಜ್ಯ ಸರ್ಕಾರ ಪುನರ್​​ರಚನೆ ಆಗಬಹುದು ಎಂಬುದಾಗಿ ಕಾಂಗ್ರೆಸ್​ ನಾಯಕ ಬಾಜ್ವಾ ಹೇಳಿಕೆ ನೀಡಿದ್ದರು.

2022 ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, ಎಎಪಿ 117 ಸ್ಥಾನಗಳ ಪೈಕಿ 92 ಗೆ ಗೆಲುವು ಸಾಧಿಸಿ ಕಾಂಗ್ರೆಸ್‌ನಿಂದ ಅಧಿಕಾರ ಕಬಳಿಸಿತ್ತು. ಕಾಂಗ್ರೆಸ್ 18 ಸ್ಥಾನ ಗಳಿಸಿತ್ತು. ಶಿರೋಮಣಿ ಅಕಾಲಿ ದಳಕ್ಕೆ ಮೂರು ಸೀಟುಗಳು ದೊರಕಿದ್ದವು.

“ಪಂಜಾಬ್ ಜನತೆ ಕೂಡ ನಿರಂಕುಶ ಪಕ್ಷದ ನಿಜ ಮುಖ ನೋಡಿದ್ದಾರೆ. ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ 2022ರಲ್ಲಿ ಪಂಜಾಬ್​ನ ಜನತೆಯನ್ನು ಮೋಸಗೊಳಿಸಿದ್ದಾರೆ ” ಎಂದು ಬಾಜ್ವಾ ಹೇಳಿಕೆ ನೀಡಿದ್ದರು. “ದಿಲ್ಲಿಯ ಫಲಿತಾಂಶ ಎಎಪಿಯ ಅಂತ್ಯದ ಸೂಚನೆ” ಎಂದಿದ್ದಾರೆ.

ಕಾಂಗ್ರೆಸ್ ನಾಯಕ ಬಾಜ್ವಾ ಅವರ ಪ್ರಕಾರ, ಕೇಜ್ರಿವಾಲ್ ಲುಧಿಯಾನಾದಿಂದ ಸ್ಪರ್ಧಿಸಿ ಪಂಜಾಬ್ ಸರ್ಕಾರದೊಳಗೆ ಸೇರುವ ಸಾಧ್ಯತೆ ಇದೆ. ಪಂಜಾಬ್ ಬಿಜೆಪಿ ನಾಯಕ ಸುಭಾಷ್ ಶರ್ಮಾ ಕೂಡ, ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದ್ದಾರೆ.

70 ಕ್ಷೇತ್ರಗಳ ದಿಲ್ಲಿ ವಿಧಾನಸಭೆಯಲ್ಲಿ 67 ಸ್ಥಾನಗಳನ್ನು ಹೊಂದಿದ್ದ ಎಎಪಿ, ಫೆಬ್ರವರಿ 5ರ ಚುನಾವಣೆಯಲ್ಲಿ ಕೇವಲ 22 ಸ್ಥಾನ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಚಿವ ಸೌರಭ್ ಭಾರದ್ವಾಜ್, ಅವಧ್ ಓಜಾ ಮತ್ತು ಸೋಮನಾಥ್ ಭಾರ್ತಿಯಂಥ ಘಟಾನುಘಟಿಗಳು ಸೋತಿದ್ದರು.

Read More
Next Story