ʻಅಹಂಕಾರಿ ಬಿಜೆಪಿʼ ಹೇಳಿಕೆ: ಆರ್‌ಎಸ್‌ಎಸ್‌  ಯು ಟರ್ನ್
x

ʻಅಹಂಕಾರಿ ಬಿಜೆಪಿʼ ಹೇಳಿಕೆ: ಆರ್‌ಎಸ್‌ಎಸ್‌ ಯು ಟರ್ನ್


ʻಶ್ರೀರಾಮನಿಗೆ ಕೀರ್ತಿ ತಂದವರು ಅಧಿಕಾರದಲ್ಲಿದ್ದಾರೆ ಮತ್ತು ದೇವರನ್ನು ವಿರೋಧಿಸುವವರು ಚುನಾವಣೆಯಲ್ಲಿ ಸೋತಿದ್ದಾರೆʼ ಎಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಕುರಿತ ಹೇಳಿಕೆಯನ್ನು ಬದಲಿಸುವ ಮೂಲಕ ಹಾನಿಯನ್ನು ನಿಯಂತ್ರಿಸಲು ಮುಂದಾಗಿದೆ.

ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಅವರು ಬಿಜೆಪಿಯನ್ನು ಉಲ್ಲೇಖಿಸಿ, ʼರಾಮನ ಭಕ್ತ ಪಕ್ಷವು ಸೊಕ್ಕಿನಿಂದ 240 ಕ್ಕೆ ನಿಂತಿತು; ಆದರೆ, ಅದು ದೊಡ್ಡ ಪಕ್ಷವಾಯಿತುʼ. ʻರಾಮನಲ್ಲಿ ನಂಬಿಕೆಯಿಲ್ಲದವರನ್ನು 234 ರಲ್ಲಿ ನಿಲ್ಲಿಸಲಾಯಿತು,ʼ ಎಂದು ಪ್ರತಿಪಕ್ಷ ಇಂಡಿಯ ಒಕ್ಕೂಟವನ್ನು ಉಲ್ಲೇಖಿಸಿ ಗುರುವಾರ ಹೇಳಿದ್ದರು.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಗ್ಪುರದಲ್ಲಿ ನಡೆದ ಸಭೆಯೊಂದರಲ್ಲಿ ʻನಿಜವಾದ ನಾಯಕ ಎಂದಿಗೂ ದುರಹಂಕಾರಿ ಆಗಿರಬಾರದುʼ ಎಂದು ಬಿಜೆಪಿ ಮತ್ತು ಪ್ರಧಾನಿ ಮೋದಿಯವರನ್ನು ಪರೋಕ್ಷವಾಗಿ ಟೀಕಿಸಿದ್ದರು. ಆನಂತರ ಇಂದ್ರೇಶ್‌ ಕುಮಾರ್ ಅವರು ʻಅಹಂಕಾರʼದ ಉಲ್ಲೇಖ ಮಾಡಿದ್ದರು. ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್ ಕೂಡ ಈ ವಿಷಯವನ್ನು ಕೈಗೆತ್ತಿಕೊಂಡಿತು.

ಆರೆಸ್ಸೆಸ್-ಬಿಜೆಪಿ ನಂಟು: ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಬೆಳೆದಿದೆ ಎಂಬ ಊಹಾಪೋಹಗಳ ನಡುವೆ ಪ್ರಧಾನಿ ಅವರಿಗೆ ಆದ ಹಾನಿಯನ್ನು ತಗ್ಗಿಸಲು ಕುಮಾರ್ ಶುಕ್ರವಾರ ಪ್ರಯತ್ನಿಸಿದರು.

ʻದೇಶದ ಮನಸ್ಥಿತಿ ತುಂಬಾ ಸ್ಪಷ್ಟವಾಗಿದೆ. ಭಗವಾನ್ ರಾಮನನ್ನು ವಿರೋಧಿಸಿದವರು ಅಧಿಕಾರದಲ್ಲಿಲ್ಲ; ಶ್ರೀರಾಮನನ್ನು ಗೌರವಿಸುವ ಗುರಿ ಇದ್ದವರು ಅಧಿಕಾರದಲ್ಲಿದ್ದಾರೆ ಮತ್ತು ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆಯಾಗಿದೆ. ದೇಶವು ಬಿಜೆಪಿ ನಾಯಕತ್ವದೊಂದಿಗೆ ಗುರುತಿಸಿಕೊಂಡಿದೆ. ದೇಶವನ್ನು ಮುನ್ನಡೆಸಲು ಮೋದಿ, ಬಿಜೆಪಿ ಮತ್ತು ಎನ್‌ಡಿಎಗೆ ಭಗವಂತ ಅವಕಾಶ ನೀಡಿದ್ದಾನೆ,ʼ ಎಂದು ಕುಮಾರ್ ಹೇಳಿದ್ದಾರೆ.

ʻಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಯಾವುದೇ ಬಿರುಕು ಇಲ್ಲ. ಭಾಗವತ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರ ಅಹಂಕಾರ ಹೇಳಿಕೆಯು ಮೋದಿ ಅಥವಾ ಯಾವುದೇ ಬಿಜೆಪಿ ನಾಯಕರನ್ನು ಉದ್ದೇಶಿಸಿಲ್ಲ,ʼ ಎಂದು ಆರ್‌ಎಸ್‌ಎಸ್‌ ಮೂಲಗಳು ಹೇಳಿವೆ.


Read More
Next Story