Aero India 2025: ಏರೋ ಶೋದಲ್ಲಿ ಗಮನ ಸೆಳೆದ 'ಮೇಡ್ ಇನ್ ತುಮಕೂರು' ಹೆಲಿಕಾಪ್ಟರ್
Aero India 2025: ಈ ಹೆಲಿಕಾಪ್ಟರ್ನ ಸುಧಾರಿತ ಫೀಚರ್ಗಳು ಮತ್ತು ಅತ್ಯಂತ ಎತ್ತರದ ಪ್ರದೇಶವಾಗಿರುವ ಹಿಮಾಲಯದಲ್ಲಿ ಯಶಸ್ವಿಯಾಗಿ ನಡೆಸಿದ ಪರೀಕ್ಷೆಗಳ ಕುರಿತು ಕಾಮೆಂಟೇಟರ್‌ಗಳು ವಿವರಣೆ ನೀಡಿದರು.
ಬೆಂಗಳೂರು : 15ನೇ ಆವೃತ್ತಿಯ ಏರೋ ಶೋ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿವೆ. ಅಂತೆಯೇ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಭಿವೃದ್ಧಿಪಡಿಸಿದ ಲಘು ಹೆಲಿಕಾಪ್ಟರ್ (LUH) ಗಮನ ಸೆಳೆಯುತ್ತಿವೆ. ವಿಶೇಷ ಏನೆಂದರೆ ಈ ಹೆಲಿಕಾಪ್ಟರ್ ತಯಾರಾಗಿದ್ದು ತುಮಕೂರಿನ ಘಟಕದಲ್ಲಿ. ಹೀಗಾಗಿ ಕನ್ನಡಿಗರಿಗೆ ಪಾಲಿಗೆ ಈ ಏರೋ ಶೋ ವಿಶೇಷ ಎನಿಸಿದೆ.
ಏರೋ ಶೋ ವೇಳೆ ಕಾಮೆಂಟೇಟರ್‌ಗಳು ಕನ್ನಡದಲ್ಲಿ ಈ ಹೆಲಿಕಾಪ್ಟರ್ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಯಾಗಿದೆ ಎಂದು ಹೇಳುವ ಜತೆಗೆ ತುಮಕೂರಿನ ಆಧುನಿಕ ತಯಾರಿಕಾ ಘಟಕದಲ್ಲಿ ನಿರ್ಮಿಸಲ್ಪಟ್ಟಿದೆ ಎಂದು ವಿಶೇಷವಾಗಿ ಹೇಳಿದರು. ಇದು ಸ್ಥಳೀಯ ಪ್ರೇಕ್ಷಕರ ಭಾರಿ ಸಂಭ್ರಮಕ್ಕೆ ಕಾರಣವಾಯಿತು ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಈ ಹೆಲಿಕಾಪ್ಟರ್ನ ಸುಧಾರಿತ ಫೀಚರ್ಗಳು ಮತ್ತು ಅತ್ಯಂತ ಎತ್ತರದ ಪ್ರದೇಶವಾಗಿರುವ ಹಿಮಾಲಯದಲ್ಲಿ ಯಶಸ್ವಿಯಾಗಿ ನಡೆಸಿದ ಪರೀಕ್ಷೆಗಳ ಕುರಿತು ಕಾಮೆಂಟೇಟರ್‌ಗಳು ವಿವರಣೆ ನೀಡಿದರು.
'ಆತ್ಮನಿರ್ಭರ್ ಭಾರತ್ ಮಿಷನ್'' ಅಡಿ ಅಭಿವೃದ್ಧಿಗೊಂಡಿರುವ ಈ ಹೆಲಿಕಾಪ್ಟರ್ ಹಾಗೂ ಇದೇ ರೀತಿಯ ದೇಶೀಯ ವೈಮಾನಿಕ ಉತ್ಪನ್ನಗಳು ವಿದೇಶಿ ತಂತ್ರಜ್ಞಾನ ಮತ್ತು ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಭಾರತಕ್ಕೆ ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಲಘು ಹೆಲಿಕಾಪ್ಟರ್, ತೂಕ ಕಡಿಮೆ ಹೊಂದಿದೆ. ವಿವಿಧ ಉದ್ದೇಶಕ್ಕೆ ಬಳಸಬಹುದಾದ ಮತ್ತು ಅಪಘಾತ ತಡೆಗಟ್ಟುವ ಹೈ-ಟೆಕ್ ಹೆಲಿಕಾಪ್ಟರ್ ಆಗಿದೆ. ಸಮುದ್ರ ಮಟ್ಟದಿಂದ ಹಿಡಿದು ಎತ್ತರ ಪ್ರದೇಶಗಳವರೆಗೆ ಕಾರ್ಯನಿರ್ವಹಿಸಬಲ್ಲದು. ಇದು ದಾಳಿ ಮತ್ತು ಪೆಟ್ರೋಲಿಂಗ್, ಸಾರಿಗೆ ಮತ್ತು ಇತರ ಯುದ್ಧ ತಂತ್ರಜ್ಞಾನ ಕಾರ್ಯಗಳಲ್ಲಿ ಬಳಸಬಹುದಾಗಿದೆ. 2,000 ಕಿಲೋ ತೂಕದ ಈ ಆರು ಸೀಟರ್ ಹೆಲಿಕಾಪ್ಟರ್ ಗರಿಷ್ಠ 235 ಕಿಮೀ ಪ್ರತಿ ಗಂಟೆ ವೇಗದಲ್ಲಿ ಹಾರಬಲ್ಲದು.
ಎಚ್ಎಎಲ್ ಈ ಹೆಲಿಕಾಪ್ಟರ್ ಅನ್ನು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳ ಬದಲಿಯಾಗಿ ಅಭಿವೃದ್ಧಿಪಡಿಸಿದೆ. ಈ ಶ್ರೇಣಿಯ ಹೆಲಿಕಾಪ್ಟರ್‌ಗಳ ಭವಿಷ್ಯದ ಸಾರಿಗೆಗಳಾಗಿವೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವ್ಯವಸ್ಥೆಗಳನ್ನೊಳಗೊಂಡಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೆಲಿಕಾಪ್ಟರ್ನ ಬ್ರೌಷರ್ನಲ್ಲಿ ಬರೆಯಲಾಗಿದೆ.