![Aero India 2025 : ಮೊದಲ ದಿನವೇ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಲೋಹದ ಹಕ್ಕಿಗಳು Aero India 2025 : ಮೊದಲ ದಿನವೇ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ಲೋಹದ ಹಕ್ಕಿಗಳು](https://karnataka.thefederal.com/h-upload/2025/02/10/511871-aero-show.webp)
Aero India 2025 : ಮೊದಲ ದಿನವೇ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ 'ಲೋಹದ ಹಕ್ಕಿಗಳು'
Aero India 2025 : ಐತಿಹಾಸಿಕ ವೈಮಾನಿಕ ಪ್ರದರ್ಶನದಲ್ಲಿ ಶಕ್ತಿ ಹಾಗೂ ವೇಗವನ್ನು ಮೈಗೂಡಿಸಿಕೊಂಡಿರುವ ಹಲವಾರು ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.
ಬೆಂಗಳೂರು: ಭಾರತೀಯ ವಾಯುಪಡೆಯ ಲೋಹದ ಹಕ್ಕಿಗಳು ನಗರದ ತಿಳಿ ಆಗಸದಲ್ಲಿ ಸೋಮವಾರ ಅಬ್ಬರಿಸಿದವು. ಜತೆಗೆ ರಷ್ಯಾ, ಅಮೆರಿಕದ ವಾಯುಪಡೆಯ ಬಲಶಾಲಿ ಐದನೇ ತಲೆಮಾರಿನ ಯುದ್ಧ ವಿಮಾನಗಳೂ ಕಿವಿಗಡಚಿಕ್ಕುವಂತೆ ಸದ್ದು ಮಾಡಿಕೊಂಡು ಮಿಂಚಿನ ಕ್ಷಣದಲ್ಲಿ ಹಾರಿ ಹೋದವು. ಇವೆಲ್ಲವೂ ಬೆಂಗಳೂರಿನಲ್ಲಿ ಆರಂಭಗೊಂಡ 15ನೇ ಆವೃತ್ತಿಯ ಏರೋ ಇಂಡಿಯಾ 2025ರಲ್ಲಿ (Aero India 2025) ಕಂಡು ಬಂದ ದೃಶ್ಯಗಳು.
ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ವೈಮಾನಿಕ ಪ್ರದರ್ಶನದಲ್ಲಿ ಶಕ್ತಿ ಹಾಗೂ ವೇಗವನ್ನು ಮೈಗೂಡಿಸಿಕೊಂಡಿರುವ ಹಲವಾರು ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.
ಉದ್ಯಮಿಗಳು, ಗಣ್ಯರು ಹಾಗೂ ಸಾರ್ವಜನಿಕರ ವೀಕ್ಷಣೆ ಸೇರಿದಂತೆ ಐದು ದಿನಗಳ ಕಾಲ ನಡೆಯುವ ಈ ಪ್ರದರ್ಶನ ಏಷ್ಯಾದ ಅತ್ಯಂತ ದೊಡ್ಡ ಏರೋ ಶೋಗಳಲ್ಲಿ ಒಂದು ಎಂಬ ಖ್ಯಾತಿ ಪಡೆದಿದೆ. ಹಲವು ದೇಶಗಳು ಮತ್ತು ನಾನಾ ಕಂಪನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಉತ್ಪನ್ನಗಳು ಹಾಗೂ ಏರೋಸ್ಪೇಸ್ ಕ್ಷೇತ್ರದ ಸಾಮರ್ಥ್ಯ ಪ್ರದರ್ಶಿಸುತ್ತಿವೆ.
ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ಮೊದಲ ಪ್ರದರ್ಶನದಲ್ಲಿ ನೇತೃತ್ವ ವಹಿಸಿದ್ದರು. ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಿಸಿದ ದೇಶೀಯ ಯುದ್ಧವಿಮಾನ ‘ತೇಜಸ್’ ನಲ್ಲಿ ಹಾರಾಟ ನಡೆಸಿದರು.
ಮಹಿಳಾ ಶಕ್ತಿ
ಏರೋಶೋದಲ್ಲಿ ಗಮನ ಸೆಳೆದಿರುವುದು ಮಹಿಳಾ ಶಕ್ತಿ. ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್ಗಳು ರಾಫೆಲ್ ವಿಮಾನಗಳಲ್ಲಿ ಹಾರಾಟ ನಡೆಸಿ ಭೇಷ್ ಎನಿಸಿಕೊಂಡರು. ಇದು ಭಾರತೀಯ ವಾಯುಪಡೆಯಲ್ಲಿನ ಮಹಿಳೆಯರ ಪ್ರಭಾವ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.
ಭಾರತೀಯ ವಾಯುಪಡೆಯ ‘ಸೂರ್ಯ ಕಿರಣ ಏರೋಬ್ಯಾಟಿಕ್ ತಂಡ’ (SKAT) ಹಾರಾಟ ನಡೆಸಿದಾಗ ಪ್ರೇಕ್ಷಕರು ಮೂಕವಿಸ್ಮಿತರಾದರು. ಅದೇ ರೀತಿ ಏಕಕಾಲಕ್ಕೆ ಒಂಬತ್ತು ಹಾಕ್ ಎಂಕೆ 132 ವಿಮಾನಗಳನ್ನು ಜತೆಜತೆಯಾಗಿ ಹಾರಾಟ ನಡೆಸಿ ಬಾನಲ್ಲಿ ಚಿತ್ತಾರ ಮೂಡಿಸಿತು. ನೌಕಾಪಡೆಯ ‘ವರುಣ’, 'ಜಾಗ್ವಾರ್' ವಿಮಾನಗಳ ಹಾರಾಟ, ಸುಖೋಯ್ ವಿಮಾನಗಳ ‘ತ್ರಿಶೂಲ’ ಗಮನ ಸೆಳೆದವು.
ಎಚ್ಎಎಲ್ ನಿರ್ಮಿತ ಸಣ್ಣ ಯುಟಿಲಿಟಿ ಹೆಲಿಕಾಪ್ಟರ್ಗಳು ಚಿತ್ತಾಕರ್ಷಕ ಏರೋಬ್ಯಾಟಿಕ್ ಪ್ರದರ್ಶನ ನೀಡಿದವು. ಈ ಹೆಲಿಕಾಪ್ಟರ್ಗಳು ಎತ್ತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಪಡೆಗಳಿಗೆ ನೆರವಾಗುತ್ತವೆ.
ಅಮೆರಿಕದ ಎಫ್-35 ಮತ್ತು ರಷ್ಯಾದ ಎಸ್ಯು -57 ಪ್ರದರ್ಶನ
ಏರೋ ಇಂಡಿಯಾದ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡು ಪ್ರಮುಖ ಐದನೇ ತಲೆಮಾರಿನ ಯುದ್ಧವಿಮಾನಗಳು ಪ್ರದರ್ಶನ ನೀಡಿದವು. ಅಮೆರಿಕಾದ ಎಫ್-35 ಲೈಟ್ನಿಂಗ್ II ಮತ್ತು ರಷ್ಯಾದ ಎಸ್ಯು -57 ಯುದ್ಧ ವಿಮಾನಗಳು ಈ ಬಾರಿ ಪಾಲ್ಗೊಂಡಿವೆ.
ಕೇಂದ್ರ ಸರ್ಕಾರ ತನ್ನ ಪ್ರಕಟಣೆಯಲ್ಲಿ "ಏರೋ ಇಂಡಿಯಾ 2025ರಲ್ಲಿ ರಷ್ಯಾದ ಮತ್ತು ಅಮೆರಿಕಾದ ಯುದ್ಧವಿಮಾನಗಳ ಪಾಲ್ಗೊಳ್ಳುವಿಕೆ ಜಾಗತಿಕ ರಕ್ಷಣಾ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಕ್ಷಣ,'' ಎಂದು ಹೇಳಿಕೊಂಡಿದೆ.
ಬೆಂಗಳೂರು ಏರೋಸ್ಪೇಸ್ ರಾಜಧಾನಿ : ಡಿ ಕೆ ಶಿವಕುಮಾರ್
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, "ಕರ್ನಾಟಕ ಹೊಸ ತಂತ್ರಜ್ಞಾನಗಳು ಮತ್ತು ಜಾಗತಿಕ ಹೂಡಿಕೆಗಳಿಗೆ ಪ್ರಮುಖ ಕೇಂದ್ರವಾಗಿದೆ. ಬೆಂಗಳೂರು ದೇಶದ ಏರೋಸ್ಪೇಸ್ ರಾಜಧಾನಿಯೂ ಹೌದು. ಇದು ಶೇಕಡಾ 60ಕ್ಕೂ ಹೆಚ್ಚು ಏರೋಸ್ಪೇಸ್ ತಯಾರಿಕೆ ಮತ್ತು ರಕ್ಷಣಾ ಸಂಶೋಧನೆಗೆ ಕೊಡುಗೆ ನೀಡುತ್ತಿದೆ" ಎಂದು ಹೇಳಿದರು.