
ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಿಲ್ಲ: ನೂತನ ಸುರೇಶ ಗೋಪಿ ಸ್ಪಷ್ಟನೆ
ಕೇಂದ್ರದ ನರೇಂದ್ರ ಮೋದಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೋಹದ ಬಗ್ಗೆ ಕೇರಳ ಚಿತ್ರನಟ ಹಾಗೂ ಕೇರಳದ ಮೊದಲ ಬಿಜೆಪಿ ಸಂಸದ ಸುರೇಶ್ ಗೋಪಿ ಹೇಳಿಕೆ ನೀಡಿದ್ದು, ತಾವು ಸಂಪುಟಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂಬ ಮಾಹಿತಿ ತಪ್ಪು ಎಂದು ಸ್ಪಷ್ಟನೆ ನೀಡಿದ್ದಾರೆ.
ತಮ್ಮ X ಸಾಮಾಜಿಕ ಜಾಲತಾಣ ಹ್ಯಾಂಡಲ್‌ನಲ್ಲಿ ಹೇಳಿಕೆ ನೀಡಿರುವ ಸುರೇಶ್ ಗೋಪಿ, " ಸರ್ಕಾರದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಕೆಲವು ಮಾಧ್ಯಮಗಳು ತಪ್ಪು ಸುದ್ದಿಯನ್ನು ಹರಡುತ್ತಿವೆ. ಇದು ತೀರಾ ತಪ್ಪಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೈಕೆಳಗೆ ನಾನು ಕೇರಳದ ಅಭಿವೃದ್ಧಿ ಮತ್ತು ಸಮೃದ್ಧಿಗೆ ಬದ್ಧರಾಗಿದ್ದೇವೆ," ಎಂದು ಹೇಳಿಕೊಂಡಿದ್ದಾರೆ.
ಆದರೆ, ತಮಗೆ ಬಿಜೆಪಿ ಈ ಹಿಂದೆ ಘೋಷಣೆ ಮಾಡಿದಂತೆ ಸಂಪುಟ ದರ್ಜೆ ಅಥವಾ ಸ್ವತಂತ್ರ ಖಾತೆಯನ್ನು ನೀಡಿಲ್ಲ ಎಂಬ ಕಾರಣಕ್ಕೆ ಸಚಿವ ಸ್ಥಾನ ಬಿಡಲು ಯೋಚಿಸುತ್ತಿದ್ದಾರೆ ಎಂದು ಕೇರಳದ ಮಾಧ್ಯಮಗಳು ವರದಿ ಮಾಡಿದ್ದವು. ಗೋಪಿ ಅವರು ತಮ್ಮ ನಿರ್ಧಾರಕ್ಕೆ ಚಲನಚಿತ್ರ ಯೋಜನೆಗಳನ್ನು ಕಾರಣ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿತ್ತು. ಆದರೆ, ಬಿಜೆಪಿ ಮೂಲಗಳ ಪ್ರಕಾರ,ಅವರು ಉನ್ನತ ದರ್ಜೆಯ ಸ್ಥಾನದ ನಿರೀಕ್ಷೆಯಲ್ಲಿದ್ದರು
ʻ'ನನ್ನನ್ನು ಸಚಿವ ಸ್ಥಾನದಿಂದ ಬಿಡುಗಡೆ ಮಾಡುವಂತೆ ಪಕ್ಷದ ನಾಯಕತ್ವವನ್ನು ಕೋರಿದ್ದೇನೆ. ತೊಡಗಿಸಿಕೊಂಡಿರುವ ಚಿತ್ರಗಳನ್ನು ಪೂರೈಸಬೇಕಿದೆ. ಪಕ್ಷ ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಹೊಸ ಜವಾಬ್ದಾರಿಯಿಂದ ಮುಕ್ತಗೊಳಿಸುತ್ತದೆ ಎಂದು ನಂಬುತ್ತೇನೆ,ʼ ಎಂದು ಮಲಯಾಳಂ ಟಿವಿ ಚಾನೆಲ್‌ಗೆ ತಿಳಿಸಿದ್ದರು.
ಗೋಪಿ ಅವರು ತ್ರಿಶೂರ್‌ನಿಂದ ಆಯ್ಕೆಯಾದರೆ, ಸಂಪುಟ ಸ್ಥಾನ ಸಿಗಲಿದೆ ಎಂದು ಬಿಜೆಪಿ ಪ್ರಚಾರದ ವೇಳೆ ಹೇಳಿತ್ತು. ಗೋಪಿ ಅವರು ಸಂಪುಟ ದರ್ಜೆ ಇಲ್ಲವಾದರೆ, ಸ್ವತಂತ್ರ ಉಸ್ತುವಾರಿ ಸಚಿವ ಸ್ಥಾನವನ್ನಾದರೂ ನಿರೀಕ್ಷಿಸಿದ್ದರು ಎಂದು ರಾಜ್ಯ ಬಿಜೆಪಿ ಘಟಕ ಸುಳಿವು ನೀಡಿದೆ. ಬದಲಾಗಿ ಪಕ್ಷವು ಜಾರ್ಜ್ ಕುರಿಯನ್ ಸೇರಿದಂತೆ ಕೇರಳಕ್ಕೆ ಎರಡು ಸಚಿವ ಸ್ಥಾನ ನೀಡಲು ನಿರ್ಧರಿಸಿತು.
ಬಿಜೆಪಿ ಗೆಲುವಿನ ಕನಸು: ಸತತವಾಗಿ ಸೋತಿರುವ ವಿ. ಮುರಳೀಧರನ್ ಅವರಿಗೆ ಸಂಪುಟ ದರ್ಜೆ ನೀಡಲಾಗಿದೆ; ನಿಮಗೆ ಎಂಒಎಸ್ ಮಾತ್ರ ಎಂದು ಗೋಪಿ ಅವರ ರಾಜಕೀಯ ವಿರೋಧಿಗಳು ಅಪಹಾಸ್ಯ ಮಾಡಲು ಆರಂಭಿಸಿದ್ದಾರೆ.
ಗೋಪಿ ಅವರು ಲೋಕಸಭೆ ಚುನಾವಣೆಯಲ್ಲಿ ಗೆದ್ದ ಕೇರಳದ ಮೊದಲ ಬಿಜೆಪಿ ಅಭ್ಯರ್ಥಿ. ಸಿಪಿಐನ ವಿ.ಎಸ್. ಸುನೀಲ್‌ಕುಮಾರ್ ಅವರನ್ನು 70,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದು, ಕಾಂಗ್ರೆಸ್ ನಾಯಕ ಕೆ. ಮುರಳೀ ಧರನ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ.
ತಮ್ಮ ತ್ರಿಶೂರ್ ಲೋಕಸಭಾ ಕ್ಷೇತ್ರದ ಜನತೆಯ ಮೇಲಿರುವ ಬದ್ಧತೆ ಮತ್ತು ಒಂದೆರಡು ಚಲನಚಿತ್ರಗಳಿಗೆ ಸಹಿ ಹಾಕಿರುವುದರಿಂದ ಮಂತ್ರಿ ಸ್ಥಾನ ಬೇಡ ಎಂದಿದ್ದರು ಎನ್ನಲಾಗಿತ್ತು. ಒಂದು ಸಿನಿಮಾವನ್ನು ಮೆಗಾಸ್ಟಾರ್ ಮಮ್ಮುಟ್ಟಿ ಅವರ ಕಂಪನಿ ನಿರ್ಮಿಸುತ್ತಿದೆ. ಎನ್‌ಡಿಎ ಸಂಸದರ ಸಭೆಯಲ್ಲಿ ಭಾಗವಹಿಸಿ ಕೇರಳಕ್ಕೆ ಮರಳಿದ್ದ ಅವರಿಗೆ ಭಾನುವಾರ ಮೋದಿ ಅವರಿಂದ ಕರೆ ಬಂದಿತು. ʻಅವರು (ಮೋದಿ) ತೀರ್ಮಾನಿಸಿದರು. ನಾನು ಪಾಲಿಸಿದ್ದೇನೆ,ʼ ಎಂದು ಗೋಪಿ ಅವರು ಕುಟುಂಬದೊಂದಿಗೆ ವಿಮಾನ ನಿಲ್ದಾಣಕ್ಕೆ ಧಾವಿಸುವ ಮುನ್ನ ಹೇಳಿದ್ದರು.