ಮಾನನಷ್ಟ ಮೊಕದ್ದಮೆ:ಮೇಧಾ ಪಾಟ್ಕರ್ ದೋಷಿ
ವಿ ಕೆ ಸಕ್ಸೇನಾ ಅವರು ನವೆಂಬರ್ 2000 ರಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್ ಲಿಬರ್ಟೀಸ್‌ನ ಅಧ್ಯಕ್ಷರಾಗಿದ್ದಾಗ ಮೇಧಾ ಪಾಟ್ಕರ್ ಅವರು ತಮ್ಮ ವಿರುದ್ಧ ನೀಡಿದ ಹೇಳಿಕೆ ಕುರಿತು ಪ್ರಕರಣ ದಾಖಲಿಸಿದ್ದರು.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದಾಖಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ನರ್ಮದಾ ಬಚಾವೋ ಆಂದೋಲನ (ಎನ್‌ಬಿಎ) ನಾಯಕಿ ಮತ್ತು ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ದೋಷಿ ಎಂದು ದೆಹಲಿಯ ನ್ಯಾಯಾಲಯ ಶುಕ್ರವಾರ (ಮೇ 23)ರಂದು ತೀರ್ಪು ನೀಡಿದೆ. ಈ ಪ್ರಕರಣ ದಾಖಲಿಸಿ 23 ವರ್ಷ ಆಗಿತ್ತು.
ಪಾಟ್ಕರ್ ಅವರ ಹೇಳಿಕೆಗಳು ʻಮಾನಹಾನಿಕರʼ ಮತ್ತು ʻನಕಾರಾತ್ಮಕ ಭಾವನೆಯನ್ನುಉತ್ತೇಜಿಸುತ್ತವೆʼ ಎಂದ ಮೆಟ್ರೋಪಾಲಿಟನ್ ಮ್ಯಾಜಿ ಸ್ಟ್ರೇಟ್ ರಾಘವ್ ಶರ್ಮಾ ಅವರು, ಅಪರಾಧಿ ಎಂದು ಘೋಷಿಸಿದರು.ಈ ಅಪರಾಧಕ್ಕೆ ಗರಿಷ್ಠ ಎರಡು ವರ್ಷ ಸರಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.
ಸಕ್ಸೇನಾ ಅವರು ನವೆಂಬರ್ 2000 ರಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್ ಲಿಬರ್ಟೀಸ್‌ನ ಅಧ್ಯಕ್ಷರಾಗಿದ್ದಾಗ, ಪಾಟ್ಕರ್ ತಮ್ಮ ವಿರುದ್ಧ ನೀಡಿದ ಪತ್ರಿಕಾ ಪ್ರಕಟಣೆ ಆಧರಿಸಿ ಪ್ರಕರಣ ದಾಖಲಿಸಿದ್ದರು.
55 ಪುಟಗಳ ತೀರ್ಪು: ʻವೈಯಕ್ತಿಕ ಘನತೆ ವ್ಯಕ್ತಿಯೊಬ್ಬನ ಅತ್ಯಮೂಲ್ಯ ಆಸ್ತಿ. ಏಕೆಂದರೆ, ಅದು ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳು ಹಾಗೂ ಸಮಾಜದ ಲ್ಲಿ ವ್ಯಕ್ತಿಯ ಸ್ಥಾನಮಾನದ ಮೇಲೆ ಪರಿಣಾಮ ಬೀರುತ್ತದೆʼ ಎಂದು ಮ್ಯಾಜಿಸ್ಟ್ರೇಟ್ ತಮ್ಮ 55 ಪುಟಗಳ ತೀರ್ಪಿನಲ್ಲಿ ಹೇಳಿದ್ದಾರೆ.
ʻಸಕ್ಸೇನಾ ಅವರನ್ನು ಹೇಡಿ, ದೇಶದ್ರೋಹಿ ಮತ್ತು ಹವಾಲಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಪಾಟ್ಕರ್ ಅವರ ಆರೋಪ ಮಾನಹಾನಿಕರ ಮಾತ್ರವಲ್ಲದೆ, ನಕಾರಾತ್ಮಕ ಭಾವನೆಯನ್ನು ಪ್ರಚೋದಿಸುತ್ತದೆ. ಗುಜರಾತಿನ ಜನರನ್ನು ಮತ್ತು ಅವರ ಸಂಪನ್ಮೂಲಗಳ ನ್ನು ವಿದೇಶಿ ಹಿತಾಸಕ್ತಿಗಳಿಗೆ ಅಡವಿಟ್ಟಿದ್ದಾರೆ ಎಂಬ ಆರೋಪ ಅವರ ಸಮಗ್ರತೆ ಮತ್ತು ಸಾರ್ವಜನಿಕ ಸೇವೆ ಮೇಲಿನ ನೇರ ದಾಳಿʼ ಎಂದು ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
ಉದ್ದೇಶಪೂರ್ವಕ ಕೃತ್ಯ: ಪಾಟ್ಕರ್ ಅವರ ಕೃತ್ಯ ʻದುರುದ್ದೇಶಪೂರಿತ. ದೂರುದಾರರ ಒಳ್ಳೆಯ ಹೆಸರನ್ನು ಹಾಳುಮಾಡುವ ಉದ್ಧೇಶ ಹೊಂದಿದೆ. ಅವರು ಐಪಿಸಿಯ ಸೆಕ್ಷನ್ 500 (ಮಾನನಷ್ಟ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಮಾಡಿದ್ದಾರೆ,ʼ ಎಂದ ನ್ಯಾಯಾಲಯ, ಶಿಕ್ಷೆಯ ಪ್ರಮಾಣವನ್ನು ಮೇ 30 ರಂದು ತಿಳಿಸಲಿದೆ.
ಪಾಟ್ಕರ್ ವಿರುದ್ಧ ಸಕ್ಸೇನಾ ಟಿವಿ ಚಾನೆಲ್‌ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಹಾಗೂ ಅವಹೇಳನಕಾರಿ ಪತ್ರಿಕಾ ಹೇಳಿಕೆ ನೀಡಿದ್ದಕ್ಕೆ ನವೆಂಬರ್ 24, 2000 ರಲ್ಲಿ ಎರಡು ಪ್ರಕರಣ ದಾಖಲಿಸಿದ್ದರು.