
ದೆಹಲಿ ಸ್ಪೋಟ
ದೆಹಲಿ ಸ್ಫೋಟ | ಸ್ಫೋಟಕ ಸಾಗಿಸುವಾಗ ಆಕಸ್ಮಿಕ ಸಿಡಿತ ಶಂಕೆ; ಪ್ರಾಥಮಿಕ ತನಿಖೆಯಲ್ಲಿ ಬಯಲು
ಹರಿಯಾಣ ನೋಂದಣಿ ಸಂಖ್ಯೆಯಿದ್ದ ಬಿಳಿ ಬಣ್ಣದ ಹ್ಯುಂಡೈ -ಐ20 ಕಾರಿನಲ್ಲಿ ಸಂಭವಿಸಿದ ಈ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ರಾಷ್ಟ್ರ ರಾಜಧಾನಿಯ ಕೆಂಪು ಕೋಟೆ ಸಮೀಪವಿರುವ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಕಾರು ಸ್ಫೋಟ ಕುರಿತ ತನಿಖೆ ತೀವ್ರಗೊಂಡಿದೆ. ಈ ಘಟನೆಯು ಆತ್ಮಾಹುತಿ ದಾಳಿಯಲ್ಲ, ಬದಲಿಗೆ ಆತುರದಲ್ಲಿ ಜೋಡಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನಗಳ ಸಾಗಣೆ ವೇಳೆ ಆಕಸ್ಮಿಕವಾಗಿ ಸಿಡಿದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಹರಿಯಾಣ ನೋಂದಣಿ ಸಂಖ್ಯೆಯಿದ್ದ ಬಿಳಿ ಬಣ್ಣದ ಹ್ಯುಂಡೈ -ಐ20 ಕಾರಿನಲ್ಲಿ ಸಂಭವಿಸಿದ ಈ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸ್ಫೋಟಗೊಂಡ ಕಾರು ಚಲಾಯಿಸುತ್ತಿದ್ದವರು ಪುಲ್ವಾಮಾ ಮೂಲದ ಡಾ.ಉಮರ್ ಮೊಹಮ್ಮದ್ ನಬಿ ಎಂದು ಶಂಕಿಸಲಾಗಿದೆ. ಈತ ಹರಿಯಾಣದ ಫರಿದಾಬಾದ್ ಮೂಲದ ಭಯೋತ್ಪಾದಕ ಸಂಘಟನೆಯ ಪ್ರಮುಖ ಸದಸ್ಯನಾಗಿದ್ದು, ಈ ಜಾಲದ ಇಬ್ಬರು ಪ್ರಮುಖ ಸದಸ್ಯರನ್ನು ಭದ್ರತಾ ಪಡೆಗಳು ಬಂಧಿಸಿವೆ.
2,900 ಕೆ.ಜಿಗೂ ಹೆಚ್ಚು ಸ್ಫೋಟಕಗಳನ್ನು ವಶಪಡಿಸಿಕೊಂಡ ನಂತರ ಆರೋಪಿ ವೈದ್ಯ ಆತಂಕಗೊಂಡಿದ್ದ. ಉಮರ್ ನಬಿ ಆತುರದಿಂದ ಸ್ಫೋಟಕಗಳನ್ನು ಸ್ಥಳಾಂತರಿಸುವಾಗ ಆಕಸ್ಮಿಕವಾಗಿ ಸಿಡಿದಿರುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈಗಾಗಲೇ ಮೃತ ನಬಿಯ ತಾಯಿಯಿಂದ ಡಿಎನ್‌ಎ ಮಾದರಿ ಸಂಗ್ರಹಿಸಿದ್ದು, ಮೃತನ ಗುರುತು ದೃಢಪಡಿಸುವ ಪ್ರಕ್ರಿಯೆ ನಡೆದಿದೆ.
ಈ ಸ್ಫೋಟವು ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಸಂಘಟನೆಗಳಿಗೆ ಸಂಬಂಧಿಸಿದ ವೈಟ್ ಕಾಲರ್ ಭಯೋತ್ಪಾದಕ ಸಂಘಟನೆಯ ಭಾಗವಾಗಿರುವ ಸಾಧ್ಯತೆ ಇರಬಹುದು ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ. ಈ ಸಂಘಟನೆ ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ವ್ಯಾಪಿಸಿದೆ.

