ಎಎಪಿ ಕಚೇರಿಗೆ ಬೀಗ: ಚುನಾವಣೆ ಆಯೋಗಕ್ಕೆ ವರದಿ
ನವದೆಹಲಿ, ಮಾ. 23- ದೆಹಲಿಯಲ್ಲಿರುವ ಆಮ್ ಆದ್ಮಿ ಪಕ್ಷದ ಕಚೇರಿಯನ್ನು ಬಂದ್ ಮಾಡಲಾಗಿದೆ. ಪಕ್ಷ ವಿಷಯವನ್ನು ಚುನಾವಣೆ ಆಯೋಗಕ್ಕೆ ವರದಿ ಮಾಡುತ್ತದೆ ಎಂದು ಪಕ್ಷದ ಹಿರಿಯ ನಾಯಕ ಅತಿಶಿ ಮರ್ಲೆನಾ ಶನಿವಾರ ಹೇಳಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ʻಕಚೇರಿ ಬಂದ್ ಮಾಡಿರುವುದು ಚುನಾವಣೆಯಲ್ಲಿ ʻಸಮಾನಾವಕಾಶ ಮಾನದಂಡಕ್ಕೆʼ ವಿರುದ್ಧವಾಗಿದೆʼ ಎಂದು ದೂರಿದರು.
ʻಲೋಕಸಭೆ ಚುನಾವಣೆ ಸಮಯದಲ್ಲಿ ಪಕ್ಷದ ಕಚೇರಿಗೆ ಹೇಗೆ ಪ್ರವೇಶ ತಡೆಯುತ್ತಾರೆ? ಇದು ಸಂವಿಧಾನಕ್ಕೆ ವಿರುದ್ಧ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡಲಿದ್ದೇವೆʼ ಎಂದು ಹೇಳಿದರು. ಎಎಪಿಯ ನಾಯಕ ಮತ್ತು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಪತ್ರಿಕಾಗೋಷ್ಠಿಯಲ್ಲಿ,ʻಚುನಾವಣೆ ಆಯೋಗ ತಟಸ್ಥವಾಗಿ ಕಾರ್ಯನಿರ್ವ ಹಿಸಬೇಕು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕುʼ ಎಂದು ಒತ್ತಾಯಿಸಿದರು.
ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಬಿಜೆಪಿ ಕೇಂದ್ರ ಕಚೇರಿ ಎದುರು ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ದೆಹಲಿಯ ಡಿಡಿಯು ಮಾರ್ಗದಲ್ಲಿರುವ ಎಎಪಿ ಕಚೇರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ತಾವು, ಅತಿಶಿ ಸೇರಿದಂತೆ ಇಬ್ಬರು ಸಚಿವರು ಪಕ್ಷದ ಕಚೇರಿಗೆ ಹೋಗದಂತೆ ತಡೆದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪಕ್ಷದ ಕಚೇರಿ ಮುಚ್ಚಿದ್ದು ಏಕೆ? ಎಂದು ಭಾರದ್ವಾಜ್ ಪ್ರಶ್ನಿಸಿದರು.
ಅತಿಶಿ ಅವರು ಎಕ್ಸ್ ನಲ್ಲಿ ಹಾಕಿರುವ ವಿಡಿಯೋದಲ್ಲಿ ಅವರು ದೆಹಲಿ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು. ಕೆಲವು ಆಪ್ ನಾಯಕರು ರಸ್ತೆ ಮೇಲೆ ಮಲಗಿದ್ದರು.
ಕೇಜ್ರಿವಾಲ್ ಅವರನ್ನು ಮಾ.28 ರವರೆಗೆ ಇಡಿ ವಶಕ್ಕೆ ಒಪ್ಪಿಸಲಾಗಿದೆ.