ಅಮೀರ್ ಖಾನ್ ಪುತ್ರನ ಮಹಾರಾಜ್ ಚಿತ್ರ ಪ್ರದರ್ಶನಕ್ಕೆ  ಹೈಕೋರ್ಟ್ ತಡೆ
x

ಅಮೀರ್ ಖಾನ್ ಪುತ್ರನ 'ಮಹಾರಾಜ್' ಚಿತ್ರ ಪ್ರದರ್ಶನಕ್ಕೆ ಹೈಕೋರ್ಟ್ ತಡೆ

ಜುನೈದ್ ಖಾನ್ ಅವರ ಚೊಚ್ಚಲ ಚಿತ್ರ 'ಮಹಾರಾಜ್' ಬಲಪಂಥೀಯ ಗುಂಪುಗಳ ಗಮನ ಸೆಳೆದಿದೆ.ನೆಟ್‌ಫ್ಲಿಕ್ಸ್‌ ನಲ್ಲಿ ಚಿತ್ರದ ಬಿಡುಗಡೆಯನ್ನು ತಡೆಯಲು ಅರ್ಜಿ ಸಲ್ಲಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ನೆಟ್‌ಫ್ಲಿಕ್ಸ್ ಅನ್ನು ಬಹಿಷ್ಕರಿಸಲು ಕರೆ ನೀಡುತ್ತಿದ್ದಾರೆ.


ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಅವರ ಚೊಚ್ಚಲ ಚಿತ್ರ ‘ಮಹಾರಾಜ್’ ಸಂಕಷ್ಟಕ್ಕೆ ಸಿಲುಕಿದೆ. ಸಿನಿಮಾ ಇಂದು(ಜೂನ್ 14) ಬಿಡುಗಡೆಯಾಗಬೇಕಿತ್ತು.ಬಿಡುಗಡೆಗೆ ಗುಜರಾತ್ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಈಮೊದಲು ನಯನತಾರಾ ʻಅನ್ನಪೂರ್ಣʼ ಸಿನಿಮಾ ತೊಂದರೆಗೆ ಸಿಲುಕಿತ್ತು. 1862 ರ ವಸಾಹತುಶಾಹಿ ಯುಗದ ಮಾನಹಾನಿ ಪ್ರಕರಣದ ನೈಜ ಕಥೆಯನ್ನು ಆಧರಿಸಿದ 'ಮಹಾರಾಜ್' ಚಿತ್ರದ ಮೂಲಕ ಜುನೈದ್‌, ಬಾಲಿವುಡ್ ಪ್ರವೇಶಿಸಲು ಸಿದ್ಧರಾಗಿದ್ದರು. ಚಿತ್ರ ಬಲಪಂಥೀಯ ಗುಂಪುಗಳ ಗಮನ ಸೆಳೆದಿದ್ದು, ನೆಟ್‌ಫಿಕ್ಸ್‌ನಲ್ಲಿ ಚಿತ್ರದ ಬಿಡುಗಡೆಯನ್ನು ತಡೆಯಲು ಮುಂದಾಗಿವೆ.

ಅರ್ಜಿ ಸಲ್ಲಿಸಿದವರು ಯಾರು?: ವೈಷ್ಣವಿ ಪುಷ್ಟಿಮಾರ್ಗಿ ಪಂಥವು ಚಿತ್ರದ ಬಿಡುಗಡೆ ವಿರುದ್ಧ ಅರ್ಜಿ ಸಲ್ಲಿಸಿದೆ. ಸಿನಿಮಾ ಪುಷ್ಟಿಮಾರ್ಗಿ ಪಂಥದ ವಿರುದ್ಧ ʻದ್ವೇಷ ಮತ್ತು ಹಿಂಸೆʼ ಭಾವನೆಯನ್ನು ಪ್ರಚೋದಿಸುವ ಸಾಧ್ಯತೆಯಿದೆ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿ ಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) 2021 ಅನ್ವಯ ನೀತಿ ಸಂಹಿತೆಗೆ ಹಾಗೂ ಒಟಿಟಿ ಸ್ವಯಂ ನಿಯಂತ್ರಣ ಸಂಹಿತೆಗೆ ವಿರುದ್ಧ ವಾಗಿದೆ ಎಂದು ದೂರಿನಲ್ಲಿದೆ. ತಮಗೆ ಚಿತ್ರ ವೀಕ್ಷಿಸಲು ಅವಕಾಶ ನೀಡಿಲ್ಲ ಅಥವಾ ಚಿತ್ರದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.

ಚಿತ್ರದಲ್ಲಿ ಏನಿದೆ?: ಪತ್ರಕರ್ತ ಮತ್ತು ಸಮಾಜ ಸುಧಾರಕ ಕರ್ಸಂದಾಸ್ ಮುಲ್ಜಿ ಅವರ ವಿರುದ್ಧದ 1862 ರ ಮಾನಹಾನಿ ಪ್ರಕರಣವನ್ನು ಸಿನಿಮಾ ಆಧರಿಸಿದೆ. ಬಾಂಬೆಯಲ್ಲಿ ಪ್ರಸಾರವಾಗುತ್ತಿದ್ದ ಗುಜರಾತ್ ವಾರಪತ್ರಿಕೆ 'ಸತ್ಯಪ್ರಕಾಶ'ದಲ್ಲಿ ಮುಲ್ಜಿ ಅವರು,ʼಧಾರ್ಮಿಕ ನಾಯಕ ಜಾದುನಾಥ್ ಮಹಾರಾಜ್ (ಜೈದೀಪ್ ಅಹ್ಲಾವತ್ ಪಾತ್ರ ನಿರ್ವಹಿಸಿದ್ದಾರೆ) ಮಹಿಳಾ ಅನುಯಾಯಿಗಳೊಂದಿಗೆ ಲೈಂಗಿಕ ಸಂಪರ್ಕ ಹೊಂದಿ ದ್ದಾರೆ. ಅವರಿಗೆ ಪುರುಷರು ತಮ್ಮ ಪತ್ನಿಯರನ್ನು ಅರ್ಪಿಸುವ ಮೂಲಕ, ಭಕ್ತಿಯನ್ನು ತೋರಿಸುತ್ತಾರೆ,ʼ ಎಂದು ಬರೆದಿದ್ದರು. ಅವರ ಮೇಲೆ ಮಾನನಷ್ಟ ಆರೋಪ ಹೊರಿಸಲಾಯಿತು. ಬಾಂಬೆಯ ಸರ್ವೋಚ್ಚ ನ್ಯಾಯಾಲಯದ ಇಬ್ಬರು ಬ್ರಿಟಿಷ್ ನ್ಯಾಯಾಧೀಶರು ಮೊಕದ್ದಮೆ ಯನ್ನು ವಜಾಗೊಳಿಸಿದರು. 'ಪತ್ರಕರ್ತ ಧಾರ್ಮಿಕ ಮುಖಂಡನ ದುಷ್ಕೃತ್ಯಗಳನ್ನು ಬಹಿರಂಗಪಡಿಸುವ ಕರ್ತವ್ಯವನ್ನು ಮಾತ್ರ ಮಾಡುತ್ತಿ ದ್ದಾರೆ' ಎಂದ ನ್ಯಾಯಾಲಯ, ಮುಲ್ಜಿ ಅವರ ಪರ ತೀರ್ಪು ನೀಡಿತು.

ಕರ್ಸಂದಾಸ್ ಮುಲ್ಜಿ ಅವರು ಮಹಿಳೆಯರ ಹಕ್ಕುಗಳು ಮತ್ತು ಸಾಮಾಜಿಕ ಸುಧಾರಣೆಯ ಆಶಯವಿದ್ದ ವಕೀಲ. ಮುಂಬಯಿಯ ಎಲ್ಫಿನ್‌ ಸ್ಟೋನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಅವರು ಮುಖಂಡ ದಾದಾಭಾಯಿ ನೌರೋಜಿ ಅವರ ಶಿಷ್ಯ. ಮುಲ್ಜಿ ವಿಧವೆಯರ ಪುನರ್ವಿವಾಹ, ತುಳಿತಕ್ಕೊಳಗಾದವರ ಪರ ನಿಂತವರು.

ಸಿನಿಮಾದಲ್ಲಿ ಶಾಲಿನಿ ಪಾಂಡೆ ಮತ್ತು ಶಾರ್ವರಿ ಪೋಷಕ ಪಾತ್ರಗಳಲ್ಲಿದ್ದಾರೆ. ವೈಆರ್‌ಎಫ್ ಎಂಟರ್‌ಟೇನ್‌ಮೆಂಟ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿದ ಚಿತ್ರ ಹೆಚ್ಚು ಪ್ರಚಾರವಿಲ್ಲದೆ ಬಿಡುಗಡೆಗೆ ಸಿದ್ಧವಾಗಿತ್ತು. ನೆಟ್‌ಫ್ಲಿಕ್ಸ್ ಬಿಡುಗಡೆಗೆ ಪೋಸ್ಟರ್ ಮಾತ್ರ ಬಿಡುಗಡೆ ಮಾಡಿತ್ತು.

ಸಾಮಾಜಿಕ ಮಾಧ್ಯಮಗಳಿಂದ ಬಹಿಷ್ಕಾರಕ್ಕೆ ಕರೆ: ಸಾಮಾಜಿಕ ಮಾಧ್ಯಮದಲ್ಲಿ 'ಬಾಯಿಕಾಟ್ ನೆಟ್‌ಫ್ಲಿಕ್ಸ್' ಎಂಬ ಹ್ಯಾಶ್‌ಟ್ಯಾಗ್ ಕಾಣಿಸಿಕೊಂಡಿತು. ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ ಅವರು ಚಲನಚಿತ್ರವನ್ನು ನಿಷೇಧಿಸುವಂತೆ ಎಕ್ಸ್‌ ನಲ್ಲಿ ಕರೆ ನೀಡಿದರು. ಇದಕ್ಕೆ ಹಲವರು ಪ್ರತಿಕ್ರಿಯಿಸಿದರು.

ಮತ್ತೊಬ್ಬರು,ʻನೆಟ್‌ಫ್ಲಿಕ್ಸ್‌ ಯಾವಾಗಲೂ ಹಿಂದೂ ವಿರೋಧಿ ವೆಬ್ ಸರಣಿ ಮತ್ತು ಚಲನಚಿತ್ರಗಳನ್ನು ತೋರಿಸುತ್ತದೆ,ʼ ಎಂದು ಬರೆದಿದ್ದರು. ಇನ್ನೊಬ್ಬರು,ʻ ಕೆಲವು ತಿಂಗಳ ಹಿಂದೆ ಆಹಾರ ಕುರಿತ ಚಲನಚಿತ್ರದಲ್ಲಿ ಧರ್ಮವನ್ನು ಪರಿಚಯಿಸಲಾಯಿತು. ಏಕೆ? ಈಗ ಹಿಂದೂ ಸಂತರಿಗೆ ಅವಮಾನ. ಇದು ಎಷ್ಟು ದಿನ ಮುಂದುವರಿಯುತ್ತದೆ?ʼ. ಈ ಸಂದೇಶವನ್ನು ಅನೇಕರು ಹಂಚಿಕೊಂಡಿದ್ದಾರೆ.

ಗುಜರಾತ್ ಹೈಕೋರ್ಟ್ ನೆಟ್‌ಫ್ಲಿಕ್ಸ್ ಇಂಡಿಯಾ, ಯಶ್ ರಾಜ್ ಫಿಲ್ಮ್ಸ್‌, ಮಾಹಿತಿ ಸಚಿವಾಲಯ ಮತ್ತು ಇತರರಿಗೆ ನೋಟಿಸ್ ನೀಡಿದೆ. ಮುಂದಿನ ವಿಚಾರಣೆಯನ್ನು ಜೂನ್ 18ಕ್ಕೆ ನಿಗದಿಪಡಿಸಿದೆ.

Read More
Next Story