
ಆಪ್‌ಗೆ ಬಂದ ದೇಣಿಗೆಯಲ್ಲಿ ಮೂರು ಪಟ್ಟು ಹೆಚ್ಚಳ; ಪಟ್ಟಿಯಲ್ಲಿದೆ ಕರ್ನಾಟಕದ ಉದ್ಯಮಿಗಳ ಹೆಸರು
ಸೋಮವಾರ (ಡಿಸೆಂಬರ್ 22) ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯ ಪ್ರಕಾರ, ಪಕ್ಷದ ದೇಣಿಗೆಯು 2023-24ರಲ್ಲಿ 11.06 ಕೋಟಿ ರೂ. ಇತ್ತು, ಅದು 2024-25ರಲ್ಲಿ 38.1 ಕೋಟಿ ರೂ. ಗೆ ಏರಿಕೆಯಾಗಿದೆ.
ಆಮ್ ಆದ್ಮಿ ಪಕ್ಷಕ್ಕೆ (AAP) ಹರಿದುಬಂದ ದೇಣಿಗೆಯು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಏರಿಕೆಯಾಗಿದೆ. ಸೋಮವಾರ (ಡಿಸೆಂಬರ್ 22) ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯ ಪ್ರಕಾರ, ಪಕ್ಷದ ದೇಣಿಗೆಯು 2023-24ರಲ್ಲಿ 11.06 ಕೋಟಿ ರೂ. ಇತ್ತು, ಅದು 2024-25ರಲ್ಲಿ 38.1 ಕೋಟಿ ರೂ. ಗೆ ಏರಿಕೆಯಾಗಿದೆ. 20,000 ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ದೇಣಿಗೆ ನೀಡಿದವರ ವಿವರಗಳನ್ನು ಈ ವರದಿಯು ಒಳಗೊಂಡಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ಉದ್ಯಮಿಗಳ ಹೆಸರಿವೆ.
ವರದಿಯಲ್ಲೇನಿದೆ?
- • ಪಕ್ಷಕ್ಕೆ ಬಂದ ಒಟ್ಟು ನಿಧಿಯ ಪೈಕಿ ಶೇ. 43ಕ್ಕಿಂತ ಹೆಚ್ಚು ಮೊತ್ತವು 'ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್' (Prudent Electoral Trust) ನಿಂದ ಬಂದಿದೆ. ಈ ಟ್ರಸ್ಟ್ ಒಂದೇ ಕಳೆದ ವರ್ಷ ಆಪ್‌ಗೆ 16.4 ಕೋಟಿ ರೂ. ದೇಣಿಗೆ ನೀಡಿದೆ. ಇದೇ ಅವಧಿಯಲ್ಲಿ ಈ ಟ್ರಸ್ಟ್ ಬಿಜೆಪಿಗೆ 2,180.07 ಕೋಟಿ ರೂ. ದೇಣಿಗೆ ನೀಡಿರುವುದು ಗಮನಾರ್ಹ.
- ವ್ಯಕ್ತಿಗತ ದೇಣಿಗೆಯ ಪ್ರಾಬಲ್ಯ: ಕಾರ್ಪೊರೇಟ್ ಸಂಸ್ಥೆಗಳಿಗಿಂತ ಹೆಚ್ಚಾಗಿ ವ್ಯಕ್ತಿಗಳೇ ಆಪ್‌ಗೆ ಹೆಚ್ಚಿನ ದೇಣಿಗೆ ನೀಡಿದ್ದಾರೆ. ಮೊದಲ 100 ದೇಣಿಗೆದಾರರ ಪಟ್ಟಿಯಲ್ಲಿ ಕೇವಲ ನಾಲ್ಕು ಸಂಸ್ಥೆಗಳು ಮಾತ್ರ ಇವೆ. ಮೊದಲ 300 ದೇಣಿಗೆದಾರರ ಪಟ್ಟಿಯಲ್ಲಿ ಕೇವಲ ಎಂಟು ಕಂಪನಿಗಳು ಸೇರಿವೆ. ಉಳಿದಲ್ಲೆವೂ ವ್ಯಕ್ತಿಗತ ದೇಣಿಗೆಯಾಗಿದೆ.
- ವಿವಿಧ ಸಂಸ್ಥೆಗಳ ಪಾಲು: ಸುಮಾರು 17 ಕಂಪನಿಗಳು ಒಟ್ಟು 90.3 ಲಕ್ಷ ರೂ.ಗಳನ್ನು ಪಕ್ಷಕ್ಕೆ ನೀಡಿವೆ. ಫಾರ್ಮಾಸ್ಯುಟಿಕಲ್ ಸಂಸ್ಥೆಗಳು, ಆಟೋಮೊಬೈಲ್ ಡೀಲರ್‌ಶಿಪ್‌ಗಳು ಮತ್ತು ಭದ್ರತಾ ಏಜೆನ್ಸಿಗಳಂತಹ ಸಣ್ಣ ವ್ಯವಹಾರಗಳು 25,000 ರೂ.ನಿಂದ 6 ಲಕ್ಷ ರೂ.ವರೆಗೆ ದೇಣಿಗೆ ನೀಡಿವೆ.
ಕರ್ನಾಟಕದ ಮೂಲದ ಉದ್ಯಮಿಗಳ ಹೆಸರು
- • ಮುಂಬೈ ಮೂಲದ ತಲಪಾಡಿ ಉಮಾಶಂಕರ್ ಶೆಣೈ ಅವರು 37.74 ಲಕ್ಷ ರೂ.ಗಳನ್ನು ಆನ್‌ಲೈನ್ ಮೂಲಕ ನೀಡುವ ಮೂಲಕ ಎರಡನೇ ಅತಿದೊಡ್ಡ ದೇಣಿಗೆದಾರರಾಗಿದ್ದಾರೆ.
- • ಮಂಗಳೂರು ಮೂಲದ ಮೈಕೆಲ್ ಡಿಸೋಜಾ ಅವರು 30 ಲಕ್ಷ ರೂ. ನೀಡುವ ಮೂಲಕ ಮೊದಲ ಹತ್ತು ದೇಣಿಗೆದಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ದೇಣಿಗೆ ನೀಡಿದ ಪಕ್ಷದ ನಾಯಕರು
ಪಕ್ಷದ ಹಿರಿಯ ನಾಯಕರು ಕೂಡ ನಿರಂತರವಾಗಿ ದೇಣಿಗೆ ನೀಡುತ್ತಿದ್ದಾರೆ. ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ತಲಾ 10,000 ರೂ.ನಂತೆ 12 ಬಾರಿ ದೇಣಿಗೆ ನೀಡಿದ್ದಾರೆ. ಪಂಜಾಬ್ ಆಪ್ ಅಧ್ಯಕ್ಷ ಅಮಾನ್ ಅರೋರಾ, ಆರೋಗ್ಯ ಸಚಿವ ಬಲಬೀರ್ ಸಿಂಗ್ ಮತ್ತು ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಕೂಡ ಇದೇ ರೀತಿಯಲ್ಲಿ ದೇಣಿಗೆ ನೀಡಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಅವರು 3,500 ರೂ.ನಂತೆ 12 ಬಾರಿ ದೇಣಿಗೆ ನೀಡಿದ್ದಾರೆ. ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಒಟ್ಟು 62,000 ರೂ. ನೀಡಿದ್ದಾರೆ.

