ಜನ್ ಧನ್ ಯೋಜನೆಗೆ 10 ವರ್ಷ: ಪ್ರಧಾನಿ ಮೆಚ್ಚುಗೆ
ನವದೆಹಲಿ: ಜನ್ ಧನ್ ಯೋಜನೆ 10 ವರ್ಷ ಪೂರೈಸಿದ್ದು, ಅದು ಜನರಿಗೆ ಘನತೆ, ಸಬಲೀಕರಣ ಮತ್ತು ರಾಷ್ಟ್ರದ ಆರ್ಥಿಕ ಜೀವನದಲ್ಲಿ ಭಾಗವಹಿಸುವ ಅವಕಾಶವನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ʻಜನ್ ಧನ್ ಯೋಜನೆ ಯಶಸ್ವಿಯಾಗಲು ಶ್ರಮಿಸಿದವರನ್ನು ಶ್ಲಾಘಿಸಿದ ಮೋದಿ, ಆರ್ಥಿಕ ಸೇರ್ಪಡೆಯನ್ನು ಉತ್ತೇಜಿಸುವಲ್ಲಿ ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆʼ ಎಂದು ಎಕ್ಸ್‌ನ ಪೋಸ್ಟ್‌ನಲ್ಲಿ ಪ್ರಧಾನಿ ತಿಳಿಸಿದ್ದಾರೆ.
ಜನ್ ಧನ್ ಯೋಜನೆಯು ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವಲ್ಲಿ ಮತ್ತು ಕೋಟಿಗಟ್ಟಲೆ ಜನರಿಗೆ, ವಿಶೇಷವಾಗಿ ಮಹಿಳೆಯರು, ಯುವಕರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಘನತೆಯನ್ನು ನೀಡಿದೆ ಎಂದು ಅವರು ಹೇಳಿದರು.
ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಪ್ರಧಾನ ಮಂತ್ರಿ, ಜನ್ ಧನ್ ಯೋಜನೆ ಇಂದು ಒಂದು ದಶಕವನ್ನು ಪೂರೈಸಿದೆ. ಈ ಉಪಕ್ರಮವು ಕೇವಲ ಒಂದು ನೀತಿಗಿಂತ ಹೆಚ್ಚಿನದು. ವ್ಯಕ್ತಿಯ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ, ಔಪಚಾರಿಕ ಬ್ಯಾಂಕಿಂಗಿಗೆ ಪ್ರವೇಶವನ್ನು ನೀಡುವ ಪ್ರಮುಖ ಉಪಕ್ರಮವಾಗಿದೆ ಎಂದು ತಿಳಿಸಿದರು.
ʻಇದು ಏಕೆ ಮುಖ್ಯವಾದುದು ಎಂದು ಯುವಜನರು ಕೇಳಬಹುದು. ಈಗ ಬ್ಯಾಂಕ್ ಖಾತೆ ಹೊಂದಿರುವುದು ದೊಡ್ಡ ಸಂಗತಿಯಲ್ಲ. ನಾವು 2014 ರಲ್ಲಿ ಅಧಿಕಾರ ವಹಿಸಿಕೊಂಡಾಗ, ಸ್ವಾತಂತ್ರ್ಯ ಬಂದು ಸುಮಾರು 65 ವರ್ಷಗಳಾಗಿದ್ದರೂ ದೇಶದ ಅರ್ಧದಷ್ಟು ಕುಟುಂಬಗಳಿಗೆ ಬ್ಯಾಂಕಿಂಗ್ ಪ್ರವೇಶವು ದೂರದ ಕನಸಾಗಿತ್ತು,ʼ ಎಂದು ಪ್ರಧಾನಿ ಹೇಳಿದರು.
ʻನಾಲ್ಕುವರೆ ದಶಕಗಳ ಹಿಂದೆ ಕಾಂಗ್ರೆಸ್ ಸರ್ಕಾರ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿತು. ಆದರೆ, ಬಡವರಿಗೆ ಬ್ಯಾಂಕಿಂಗ್‌ಗೆ ಪ್ರವೇಶ ಸಿಗಲಿಲ್ಲ. ಜನ್ ಧನ್ ಯೋಜನೆ ಜಾರಿಯಾದಾಗ, ಅದರ ಸುತ್ತ ಸಂದೇಹಗಳಿದ್ದವು. ಕೆಲವರು ಕೇಳಿದರು - ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ತರಲು ಸಾಧ್ಯವೇ? ಈ ಪ್ರಯತ್ನ ದೃಢ ಬದಲಾವಣೆಗಳಿಗೆ ಕಾರಣವಾಗುತ್ತದೆಯೇ? ಜನ್ ಧನ್ ಯೋಜನೆಯಡಿ ಬ್ಯಾಂಕ್ ಖಾತೆ ಹೊಂದಿರುವ 53 ಕೋಟಿಗೂ ಹೆಚ್ಚು ಜನರಿದ್ದಾರೆ ಮತ್ತು 2.3 ಲಕ್ಷ ಕೋಟಿ ಠೇವಣಿ ಇದೆ,ʼ ಎಂದರು.
ʻಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಯೋಜನೆಯು ಸುಮಾರು 30 ಕೋಟಿ ಮಹಿಳೆಯರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ತಂದಿದೆ. ಜನ್ ಧನ್, ಮುದ್ರಾ ಅಥವಾ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಇಲ್ಲದಿದ್ದರೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗಳು ಎಂದಿಗೂ ಪರಿಣಾಮ ಬೀರುತ್ತಿರಲಿಲ್ಲ,ʼ ಎಂದು ಹೇಳಿದರು.
ʻಆಯುಷ್ಮಾನ್ ಭಾರತ್, ರೈತರಿಗೆ ಪಿಎಂ ಕಿಸಾನ್, ಬೀದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಸೇರಿದಂತೆ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಬ್ಯಾಂಕ್ ಖಾತೆಯು ತೊಂದರೆರಹಿತ ಮತ್ತು ನೇರ ವರ್ಗಾವಣೆಯನ್ನು ಖಚಿತಪಡಿಸಿದೆ,ʼ ಎಂದು ಅವರು ಹೇಳಿದರು.
2014 ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ದೇಶದ ಎಲ್ಲಾ ಕುಟುಂಬಗಳ ಸಮಗ್ರ ಆರ್ಥಿಕ ಸೇರ್ಪಡೆಯನ್ನು ಒಳಗೊಂಡಿರುವ ರಾಷ್ಟ್ರೀಯ ಮಿಷನ್ ಆಗಿದೆ.