
ಮಣಿಪುರ: ಇಬ್ಬರು ವಲಸೆ ಕಾರ್ಮಿಕರ ಹತ್ಯೆ: 8 ಉಗ್ರರ ಬಂಧನ
ಬಂಧಿತರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಮತ್ತು 10 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಬಿಹಾರದ ಇಬ್ಬರು ವಲಸೆ ಕಾರ್ಮಿಕರ ಹತ್ಯೆ ಮಾಡಿದ್ದ ನಿಷೇಧಿತ ಉಗ್ರಗಾಮಿ ಸಂಘಟನೆ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿ (ಪೀಪಲ್ಸ್ ವಾರ್ ಗ್ರೂಪ್)ಯ ಎಂಟು ಭಯೋತ್ಪಾದಕರನ್ನು ಮಣಿಪುರದ ಕಕ್ಚಿಂಗ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಇಬ್ಬರು ಕಾರ್ಮಿಕರ ಹತ್ಯೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲು ಡಿಸೆಂಬರ್ 14 ರಂದು ಮಣಿಪುರದಾದ್ಯಂತ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ನಿಷೇಧಿತ ಸಂಘಟನೆಯ ಸಕ್ರಿಯ ಸದಸ್ಯನನ್ನು ಸೋಮವಾರ ಕಕ್ಚಿಂಗ್ ಲಂಖೈ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
"ಸಮರ್ಪಕ ಮಾಹಿತಿ ಪಡೆದು ಪೊಲೀಸ್ ತಂಡವು ಕಕ್ಚಿಂಗ್ ಮಾಮಾಂಗ್ ಚಿಂಗ್ ಲೈಫಾಮ್ ಲೋಕ್ನುಂಗ್ ಪ್ರದೇಶದಲ್ಲಿರುವ ಶಿಬಿರದ ಮೇಲೆ ದಾಳಿ ನಡೆಸಿ ಅಲ್ಲಿಂದ ಕೆಸಿಪಿ (ಪಿಡಬ್ಲ್ಯೂಜಿ) ಯ ಇನ್ನೂ ಏಳು ಕಾರ್ಯಕರ್ತರನ್ನು ಬಂಧಿಸಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಮತ್ತು 10 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಕೆಸಿಪಿ (ಪಿಡಬ್ಲ್ಯೂಜಿ) ನಿಷೇಧಿತ ಸಂಘಟನೆ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ ಒಂದು ಬಣವಾಗಿದ್ದು, ಇಂಫಾಲ್ ಕಣಿವೆಯಲ್ಲಿ ಸುಲಿಗೆ ಮತ್ತು ಇತರ ಅಪರಾಧಗಳಲ್ಲಿ ಭಾಗಿಯಾಗುತ್ತಿತ್ತು.
ಈ ಆರೋಪಿಗಳು ಮಣಿಪುರದ ಕಕ್ಚಿಂಗ್ ಜಿಲ್ಲೆಯಲ್ಲಿ ಬಿಹಾರ ಮೂಲದ ಯುವ ಸಹೋದರರಾದ ಸುನಾಲಾಲ್ ಕುಮಾರ್ (18) ಮತ್ತು ದಶರಥ್ ಕುಮಾರ್ (17) ಅವರನ್ನು ಕ್ರೂರವಾಗಿ ಹತ್ಯೆ ಮಾಡಿದ್ದರು. ಘಟನೆಯನ್ನು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಖಂಡಿಸಿದ್ದರು.
"ಈ ಭಯೋತ್ಪಾದಕ ಕೃತ್ಯವು ನಮ್ಮ ರಾಜ್ಯದ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ. ಅವರ ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು" ಎಂದು ಅವರು ಹೇಳಿದ್ದರು.
ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದ ಸಿಂಗ್, ಅಗತ್ಯವಿದ್ದರೆ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ.