ಛತ್ತೀಸ್‌ಗಢ ಎನ್‌ಕೌಂಟರ್: 8 ಮಾವೋವಾದಿಗಳು, ಒಬ್ಭರು ಭದ್ರತಾ ಸಿಬ್ಬಂದಿ ಹತ್ಯೆ
ನಾರಾಯಣಪುರ, ಜೂ.15- ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಎಂಟು ನಕ್ಸಲೀಯರು ಮತ್ತು ಒಬ್ಬ ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ನಾರಾಯಣಪುರ, ಕಂಕೇರ್, ದಾಂತೇವಾಡ ಮತ್ತು ಕೊಂಡಗಾಂವ್ ಜಿಲ್ಲೆಗಳ ಭದ್ರತಾ ಸಿಬ್ಬಂದಿಗಳ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ, ಅಭುಜ್ಮದ್ ಅರಣ್ಯದಲ್ಲಿ ಇಂದು ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ ಎಂದು ರಾಯ್‌ಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ʻಇದುವರೆಗೆ ಎಂಟು ನಕ್ಸಲೀಯರು ಹತರಾಗಿದ್ದಾರೆ. ಒಬ್ಬ ಯೋಧ ಹುತಾತ್ಮರಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ,ʼ ಎಂದು ಹೇಳಿದರು.
ನಾಲ್ಕು ಜಿಲ್ಲೆಗಳ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ), ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ನ 53 ನೇ ಬೆಟಾಲಿಯನ್‌ನ ಸಿಬ್ಬಂದಿಗಳನ್ನು ಒಳಗೊಂಡ ಕಾರ್ಯಾಚರಣೆಯನ್ನು ಜೂನ್ 12 ರಂದು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.