
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: 'ಕಂದೀಲು'ಗೆ ಅತ್ಯುತ್ತಮ ಕನ್ನಡ ಚಿತ್ರ. ಶಾರುಖ್-ವಿಕ್ರಾಂತ್ ಶ್ರೇಷ್ಠ ನಟರು
'ಮಿಸೆಸ್ ಚಟರ್ಜಿ vs ನಾರ್ವೆ' ಚಿತ್ರದಲ್ಲಿ ತಮ್ಮ ಮಕ್ಕಳಿಗಾಗಿ ವಿದೇಶಿ ನೆಲದಲ್ಲಿ ಹೋರಾಡುವ ತಾಯಿಯ ಪಾತ್ರಕ್ಕೆ ಜೀವ ತುಂಬಿದ ರಾಣಿ ಮುಖರ್ಜಿ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಆಗಸ್ಟ್ 1 ರಂದು ಪ್ರಕಟಿಸಲಾಗಿದ್ದು, 2023ರ ಅತ್ಯುತ್ತಮ ಚಲನಚಿತ್ರಗಳು ಮತ್ತು ಕಲಾವಿದರನ್ನು ಗೌರವಿಸಲಾಗಿದೆ. ಈ ಬಾರಿಯ ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರರಂಗವು, 'ಕಂದೀಲು: ದಿ ರೇ ಆಫ್ ಹೋಪ್' ಚಿತ್ರದ ಮೂಲಕ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ (ಕನ್ನಡ) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಬಾಲಿವುಡ್ನ ತಾರೆಯರು ಈ ಬಾರಿಯ ಪ್ರಶಸ್ತಿಗಳಲ್ಲಿ ವಿಶೇಷವಾಗಿ ಮಿಂಚಿದ್ದಾರೆ. 'ಜವಾನ್' ಚಿತ್ರದಲ್ಲಿನ ದ್ವಿಪಾತ್ರದ ಅಬ್ಬರದ ನಟನೆಗಾಗಿ ಶಾರುಖ್ ಖಾನ್ ಮತ್ತು '12th ಫೇಲ್' ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ವಿಕ್ರಾಂತ್ ಮೆಸ್ಸಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. 'ಮಿಸೆಸ್ ಚಟರ್ಜಿ vs ನಾರ್ವೆ' ಚಿತ್ರದಲ್ಲಿ ತಮ್ಮ ಮಕ್ಕಳಿಗಾಗಿ ವಿದೇಶಿ ನೆಲದಲ್ಲಿ ಹೋರಾಡುವ ತಾಯಿಯ ಪಾತ್ರಕ್ಕೆ ಜೀವ ತುಂಬಿದ ರಾಣಿ ಮುಖರ್ಜಿ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಾದೇಶಿಕ ಚಿತ್ರಗಳ ಪ್ರಾಬಲ್ಯ
ಈ ಬಾರಿಯ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ಚಿತ್ರಗಳು ತಮ್ಮ ಛಾಪು ಮೂಡಿಸಿವೆ. 'ಕಂದೀಲು' ಕನ್ನಡಕ್ಕೆ ಕೀರ್ತಿ ತಂದರೆ, 'ಭಗವಂತ್ ಕೇಸರಿ' (ತೆಲುಗು), 'ಪಾರ್ಕಿಂಗ್' (ತಮಿಳು), 'ಉಲ್ಲೊಝುಕ್ಕು' (ಮಲಯಾಳಂ), 'ಕಥಲ್: ಎ ಜಾಕ್ಫ್ರೂಟ್ ಮಿಸ್ಟರಿ' (ಹಿಂದಿ), 'ವಶ್' (ಗುಜರಾತಿ) ಮತ್ತು 'ಶ್ಯಾಮಚಿ ಆಯಿ' (ಮರಾಠಿ) ತಮ್ಮ ಭಾಷೆಗಳಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ.
ಪೋಷಕ ಪಾತ್ರಗಳಲ್ಲಿ ಮಿಂಚಿದ ತಾರೆಯರು
ಪೋಷಕ ಪಾತ್ರಗಳಲ್ಲೂ ಅನುಭವಿ ಕಲಾವಿದರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮಲಯಾಳಂನ 'ಪೂಕಳಂ' ಚಿತ್ರದ ನಟನೆಗಾಗಿ ವಿಜಯರಾಘವನ್ ಮತ್ತು ತಮಿಳಿನ 'ಪಾರ್ಕಿಂಗ್' ಚಿತ್ರಕ್ಕಾಗಿ ಎಂ.ಎಸ್. ಭಾಸ್ಕರ್ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ, 'ಉಲ್ಲೊಝುಕ್ಕು' (ಮಲಯಾಳಂ) ಚಿತ್ರಕ್ಕಾಗಿ ಊರ್ವಶಿ ಮತ್ತು 'ವಶ್' (ಗುಜರಾತಿ) ಚಿತ್ರಕ್ಕಾಗಿ ಜಾನಕಿ ಬೋಡಿವಾಲಾ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಸಂಗೀತ ಮತ್ತು ತಾಂತ್ರಿಕ ವಿಭಾಗದ ವಿಜೇತರು
ಸಂಗೀತ ಮತ್ತು ಸಾಹಿತ್ಯ: 'ವಾತಿ' (ತಮಿಳು) ಚಿತ್ರವು ಅತ್ಯುತ್ತಮ ಸಂಗೀತ ನಿರ್ದೇಶನ (ಗೀತೆಗಳು) ಪ್ರಶಸ್ತಿ ಪಡೆದರೆ, 'ಬಲಗಂ' (ತೆಲುಗು) ಚಿತ್ರಕ್ಕೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ಲಭಿಸಿದೆ. 'ಜವಾನ್' ಮತ್ತು 'ಬೇಬಿ' ಚಿತ್ರಗಳು ಕ್ರಮವಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಮತ್ತು ಗಾಯಕ ಪ್ರಶಸ್ತಿಗಳನ್ನು ಪಡೆದಿವೆ.
ತಾಂತ್ರಿಕ ಶ್ರೇಷ್ಠತೆ: 'ಹನು-ಮಾನ್' (ತೆಲುಗು) ಚಿತ್ರಕ್ಕೆ ಅತ್ಯುತ್ತಮ ಸಾಹಸ ನಿರ್ದೇಶನ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಗೆ ಅತ್ಯುತ್ತಮ ನೃತ್ಯ ಸಂಯೋಜನೆ, ಮತ್ತು 'ಸ್ಯಾಮ್ ಬಹದ್ದೂರ್' ಚಿತ್ರಕ್ಕೆ ಅತ್ಯುತ್ತಮ ವಸ್ತ್ರ ವಿನ್ಯಾಸ ಪ್ರಶಸ್ತಿ ಸಂದಿದೆ. 'ದಿ ಕೇರಳ ಸ್ಟೋರಿ' ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಪಡೆದರೆ, 'ಅನಿಮಲ್' ಚಿತ್ರವು ಅತ್ಯುತ್ತಮ ಧ್ವನಿ ವಿನ್ಯಾಸ ಮತ್ತು ವಿಶೇಷ ಉಲ್ಲೇಖ (ರೀ-ರೆಕಾರ್ಡಿಂಗ್ ಮಿಕ್ಸರ್) ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಪ್ರಶಸ್ತಿ ಆಯ್ಕೆ ಸಮಿತಿಯು ವಿಜೇತರ ಸಂಪೂರ್ಣ ಪಟ್ಟಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಅಧಿಕೃತವಾಗಿ ಸಲ್ಲಿಸಿತು. ಈ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸಚಿವ ಡಾ. ಎಲ್. ಮುರುಗನ್ ಮತ್ತು ಕಾರ್ಯದರ್ಶಿ ಸಂಜಯ್ ಜಾಜು ಉಪಸ್ಥಿತರಿದ್ದರು.