
ಬಿಹಾರದ ರಾಷ್ಟ್ರೀಯ ಹೆದ್ದಾರಿ-19 ರಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿವೆ.
ಕೊಲ್ಕತ್ತಾ-ದೆಹಲಿ ಹೆದ್ದಾರಿಯಲ್ಲಿ ತಗ್ಗದ ಸಂಚಾರ ದಟ್ಟಣೆ
ಭಾರೀ ಮಳೆಯಿಂದಾಗಿ ಹೆದ್ದಾರಿಯ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಸಾರಾಂ ಹತ್ತಿರದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ.
ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೆಹಲಿ–ಕೊಲ್ಕತ್ತಾ ರಾಷ್ಟ್ರೀಯ ಹೆದ್ದಾರಿ -19 ರಲ್ಲಿ ಸತತ ಐದನೇ ದಿನವೂ ಭಾರೀ ಸಂಚಾರ ದಟ್ಟಣೆ ಕಂಡು ಬಂದಿದೆ. ನಾಲ್ಕನೇ ದಿನ ಬುಧವಾರ ಸುಮಾರು 65 ಕಿ.ಮೀ. ವರೆಗೆ ಸಂಚಾರ ದಟ್ಟಣೆ ಉಂಟಾಗಿ, ನೂರಾರು ವಾಹನ ಸವಾರರು ಪರಿತಪಿಸಿದ್ದರು. ಐದನೇ ದಿನವಾದ ಗುರುವಾರ ಕೂಡ ದಟ್ಟಣೆ ಕಂಡು ಬಂದಿದೆ.
ಭಾರೀ ಮಳೆಯಿಂದಾಗಿ ಹೆದ್ದಾರಿಯ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಸಸಾರಾಂ ಬಳಿ ಬುಧವಾರ ಪರಿಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಸರ್ವೀಸ್ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ರಸ್ತೆಗಳಲ್ಲಿ ದೊಡ್ಡ ಹೊಂಡಗಳು ಬಿದ್ದಿದ್ದು, ನೀರು ನಿಂತಿರುವುದರಿಂದ ವಾಹನಗಳು ಜಾರುತ್ತಿವೆ. ಕೆಲವೇ ಕಿ.ಮೀ ಪ್ರಯಾಣಿಸಲು ಗಂಟೆಗಳ ಕಾಲ ತೆಗೆದುಕೊಳ್ಳುತ್ತಿದೆ. ಸಂಚಾರ ದಟ್ಟಣೆಯು ರೋಹ್ತಾಸ್‌ನಿಂದ ಸುಮಾರು 65 ಕಿಲೋಮೀಟರ್ ದೂರದ ಔರಂಗಾಬಾದ್‌ವರೆಗೆ ವಿಸ್ತರಿಸಿತ್ತು.
"ಕಳೆದ 30 ಗಂಟೆಗಳಲ್ಲಿ ಕೇವಲ 7 ಕಿಲೋಮೀಟರ್ ಮಾತ್ರ ಪ್ರಯಾಣಿಸಿದ್ದೇವೆ. ಟೋಲ್ ಹಾಗೂ ರಸ್ತೆ ತೆರಿಗೆ ಪಾವತಿಸಿದರೂ ಎನ್‌ಎಚ್‌ಎಐ ಸಿಬ್ಬಂದಿ ಅಥವಾ ಸ್ಥಳೀಯ ಆಡಳಿತದವರು ಎಲ್ಲೂ ಕಾಣುತ್ತಿಲ್ಲ" ಎಂದು ಟ್ರಕ್ ಚಾಲಕ ಪ್ರವೀಣ್ ಸಿಂಗ್ ಎಂಬುವರು ಆರೋಪಿಸಿದ್ದಾರೆ.
ಮತ್ತೊಬ್ಬ ಚಾಲಕ ಸಂಜಯ್ ಸಿಂಗ್ ಮಾತನಾಡಿ, ಎರಡು ದಿನಗಳಿಂದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದೇವೆ. ಹಸಿವು, ದಾಹವಾಗುತ್ತಿದೆ. ಕೆಲವೇ ಕಿಲೋಮೀಟರ್ ಕ್ರಮಿಸಲು ಗಂಟೆಗಳ ಕಾಲ ಕಾಯಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇಷ್ಟಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.