ಶೇ.60ರಷ್ಟು ಮಕ್ಕಳಲ್ಲಿ ಡಿಜಿಟಲ್ ವ್ಯಸನದ ಅಪಾಯ: ಸಮೀಕ್ಷೆ
ನವದೆಹಲಿ, ಮಾ.23- ಐದರಿಂದ 16 ವರ್ಷ ವಯಸ್ಸಿನ ಸುಮಾರು ಶೇ. 60 ರಷ್ಟು ಮಕ್ಕಳು ಡಿಜಿಟಲ್ ವ್ಯಸನ ನಡವಳಿಕೆಗಳನ್ನು ಪ್ರದರ್ಶಿಸುತ್ತಾರೆ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ. ಇಂಥ ನಕಾರಾತ್ಮಕ ಪರಿಣಾಮಗಳನ್ನು ತಗ್ಗಿಸಲು ಸಮರ್ಥ ಕಾರ್ಯತಂತ್ರಗಳು ಅಗತ್ಯವಿದೆ ಎಂದು ಹೇಳಿದೆ.
ಚತುರ ಪೋಷಕ ಪರಿಹಾರಗಳ ಸಂಸ್ಥೆ ಬಾತು ಟೆಕ್, 1,000 ಪೋಷಕರನ್ನು ಸಂದರ್ಶಿಸಿ ಸಮೀಕ್ಷೆ ನಡೆಸಿದೆ. ಹೆಚ್ಚು ಕಾಲ ಪರದೆ ವೀಕ್ಷಣೆಯಿಂದ ಕಡಿಮೆ ನಿದ್ರೆ, ದೈಹಿಕ ಚಟುವಟಿಕೆ ಕುಂಠಿತ, ಸಾಮಾಜಿಕವಾಗಿ ಬೆರೆಯದೆ ಇರುವುದು ಮತ್ತು ಶೈಕ್ಷಣಿಕ ಸಾಧನೆ ಕುಸಿತ ಸೇರಿದಂತೆ ವಿವಿಧ ಅಪಾಯಗಳು ಹೆಚ್ಚುತ್ತದೆ ಎಂಬುದನ್ನು ಸಮೀಕ್ಷೆ ಬಹಿರಂಗಪಡಿಸಿದೆ.
ʻಶೇ.60 ರಷ್ಟು ಮಕ್ಕಳು ಡಿಜಿಟಲ್ ಸಂಭವನೀಯ ವ್ಯಸನದ ನಡವಳಿಕೆಗಳನ್ನು ಪ್ರದರ್ಶಿಸುತ್ತಾರೆ ಮತ್ತು ಶೇ. 85 ರಷ್ಟು ಪೋಷಕರು ಮಕ್ಕಳ ಆನ್‌ಲೈನ್ ವಿಷಯ ಬಳಕೆಯನ್ನು ನಿರ್ವಹಿಸುವಲ್ಲಿ ಸಮಸ್ಯೆ ಎದುರಿಸುತ್ತಾರೆʼ ಎಂದು ಸಮೀಕ್ಷೆ ಹೇಳಿದೆ. ಪರದೆಯಲ್ಲಿ ಹೆಚ್ಚು ಸಮಯ ಕಳೆಯುವುದರ ಸಂಭವನೀಯ ಅಪಾಯಕ್ಕೆ ಒತ್ತು ನೀಡುವ ಸಮೀಕ್ಷೆ,ʻಶೇ. 70-80 ಮಕ್ಕಳು ಪ್ರತಿದಿನ ಶಿಫಾರಸು ಮಾಡಿದ ಮಿತಿಗಳನ್ನು ಮೀರುತ್ತಿದ್ದಾರೆʼ ಎಂದು ಹೇಳಿದೆ.
ಗೇಮಿಂಗ್ ಮತ್ತು ಸಾಮಾಜಿಕ ಮಾಧ್ಯಮ ಮಕ್ಕಳು ಹೆಚ್ಚು ಬಳಸುವ ವೇದಿಕೆಗಳಾಗಿವೆ. ಇವು ಸೂಕ್ತವಲ್ಲದ ವಿಷಯ ಮತ್ತು ಅದರ ಸಂಬಂಧಿತ ಪರಿಣಾಮಗಳಿಗೆ ಸಂಭಾವ್ಯ ಒಡ್ಡುವಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ʻಶೇ. 10 ರಷ್ಟು ಪೋಷಕರು ಮಾತ್ರ ನಿಯಂತ್ರಣ ತಂತ್ರಗಳನ್ನು ಬಳಸುತ್ತಾರೆ; ಪರದೆ ಸಮಯವನ್ನು ಮಿತಿಗೊಳಿಸಲು ತಂತ್ರಗಳನ್ನು ಅಳವಡಿಸಿಕೊಳ್ಳುವುದು ಧನಾತ್ಮಕ ಫಲಿತಾಂಶ ನೀಡುತ್ತದೆʼ ಎಂದು ಸಮೀಕ್ಷೆ ಹೇಳಿದೆ.