ಬೆಂಕಿಯುಂಡೆಯಾದ ದೆಹಲಿ| 52.9°ಸೆ ತಾಪಮಾನ; 79 ವರ್ಷಗಳಲ್ಲಿ ಇದೇ ಗರಿಷ್ಠ
ಅರೇಬಿಯನ್ ಸಮುದ್ರದಿಂದ ವಾಯವ್ಯ ಭಾರತಕ್ಕೆ ಬೀಸುತ್ತಿರುವ ಮಾರುತಗಳಿಂದ ಮುಂದಿನ ಎರಡು ದಿನಗಳಲ್ಲಿ ಶಾಖದ ಅಲೆ ಪರಿಸ್ಥಿತಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
ದೆಹಲಿಯ ಮುಂಗೇಶ್‌ಪುರದಲ್ಲಿ 52.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಆದರೆ, ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್ ವೀಕ್ಷಣಾಲಯದಲ್ಲಿ ಗರಿಷ್ಠ 46.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹೀಗಾಗಿ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಸಂವೇದಕಗಳಲ್ಲಿ ಸಂಭವನೀಯ ದೋಷಗಳಿಗಾಗಿ ಸ್ಥಳೀಯ ಹವಾಮಾನ ಕೇಂದ್ರವನ್ನು ಪರಿಶೀಲಿಸುತ್ತಿದೆ.
ಸಫ್ದರ್‌ಜಂಗ್ ವೀಕ್ಷಣಾಲಯದಿಂದ 47 ಕಿಮೀ ದೂರದಲ್ಲಿರುವ ಮುಂಗೇಶ್‌ಪುರ, ಹೊಲಗಳು ಮತ್ತು ಬಯಲು ಪ್ರದೇಶಗಳ ಮಧ್ಯೆ ಇರುವ ಜನನಿಬಿಡ ಪ್ರದೇಶ. ʻಇದು ಅಸಹಜವಾಗಿ ಕಾಣುತ್ತಿದೆ. ರಾಜಧಾನಿ ಪ್ರದೇಶದ ಇತರ ಹವಾಮಾನ ಕೇಂದ್ರಗಳೊಂದಿಗೆ ಹೋಲಿಸಿದರೆ, ಮುಂಗೇಶ್‌ಪುರ ಹೊರಗಿನ ಪ್ರದೇಶದಲ್ಲಿದೆ,ʼ ಎಂದು ಐಎಂಡಿ ಮಹಾ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.
ದೆಹಲಿಯ ಮೂರು ಹವಾಮಾನ ಕೇಂದ್ರಗಳಲ್ಲಿ 49.9 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿರುವುದರಿಂದ, ಮುಂಗೇಶ್‌ಪುರದ ಹವಾಮಾನ ಕೇಂದ್ರವನ್ನು ಪರಿಶೀಲಿಸುವಂತೆ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಐಎಂಡಿಗೆ ನಿರ್ದೇಶನ ನೀಡಿದ್ದಾರೆ.
ದಾಖಲೆಗಳು ಭಗ್ನ: ಉತ್ತರ ಮತ್ತು ಮಧ್ಯ ಭಾರತದ ಹೆಚ್ಚಿನ ಪ್ರದೇಶಗಳು ಬಿಸಿಲಿನ ಅಲೆಗೆ ಸಿಲುಕಿವೆ ಮತ್ತು ದೆಹಲಿಯಲ್ಲಿ 79 ವರ್ಷಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ನಗರಗಳು 47 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ, ರೋಹ್ಟಕ್ ಮತ್ತು ಪ್ರಯಾಗ್‌ರಾಜ್ ನಲ್ಲಿ 48.8 ಡಿಗ್ರಿ ತಾಪಮಾನ ದಾಖಲಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು ತಾಪಮಾನ ಎಂದು ಐಎಂಡಿ ತಿಳಿಸಿದೆ. ಮೇ 30, 1994 ರಂದು ಪ್ರಯಾಗರಾಜ್ ಗರಿಷ್ಠ 48.4 ಡಿಗ್ರಿ ಸೆಲ್ಸಿಯಸ್ ಹಾಗೂ ರೋಹ್ಟಕ್ ಜೂನ್ 6, 1995 ರಂದು ಗರಿಷ್ಠ 47.2 ಡಿಗ್ರಿ ತಾಪಮಾನ ದಾಖಲಿಸಿತ್ತು.
ಹಿಮಾಚಲ ಪ್ರದೇಶದ ಉನಾ 46 ಡಿಗ್ರಿ ಸೆ. ಗರಿಷ್ಠ ತಾಪಮಾನ ದಾಖಲಿಸಿದೆ. ಈ ಹಿಂದೆ ಮೇ 24, 2013 ರಂದು 45.2 ಡಿಗ್ರಿ ತಾಪಮಾನ ದಾಖ ಲಿಸಿತ್ತು. ಕರ್ನಾಟಕದ ಕಾರವಾರದಲ್ಲಿ ಗರಿಷ್ಠ 38 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇಲ್ಲಿ ಮೇ 5, 2022 ರಂದು 37.6 ಡಿಗ್ರಿ ಸೆ. ತಾಪಮಾನ ದಾಖಲಾಗಿತ್ತು.
ಬಿಹಾರದಲ್ಲಿ ಶಾಲೆ ಬಂದ್: ಬಿಹಾರ ಸರ್ಕಾರ ಖಾಸಗಿ ಮತ್ತು ಸರ್ಕಾರಿ ಶಾಲೆಗಳು, ಕೋಚಿಂಗ್ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಜೂನ್ 8 ರವರೆಗೆ ಮುಚ್ಚಲು ಆದೇಶಿಸಿದೆ.
ಶೇಖ್‌ಪುರ, ಬೇಗುಸರೈ, ಪೂರ್ವ ಚಂಪಾರಣ್ ಮತ್ತು ಇತರ ಪ್ರದೇಶಗಳಲ್ಲಿ ಬಿಸಿಲಿನ ಬೇಗೆಯಿಂದ ವಿದ್ಯಾರ್ಥಿಗಳು ಮೂರ್ಛೆ ಹೋದ ಘಟನೆಗಳು ವರದಿಯಾಗಿವೆ. ರಾಜ್ಯದಲ್ಲಿ ಇನ್ನೂ ಮೂರು ಅಥವಾ ನಾಲ್ಕು ದಿನಗಳ ಕಾಲ ಶಾಖದ ಅಲೆಯ ಪರಿಸ್ಥಿತಿ ಮುಂದುವರಿಯಲಿದೆ ಎಂದು ಐಎಂಡಿ ಹೇಳಿದೆ.
ಹರಿಯಾಣದಲ್ಲಿ ತೀವ್ರ ಬಿಸಿಲು: ಹರಿಯಾಣದ ಹಿಸಾರ್‌ನಲ್ಲಿ ಗರಿಷ್ಠ ತಾಪಮಾನ 48.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಹೇಂದ್ರಗಢ ದಲ್ಲಿ ಗರಿಷ್ಠ 48.3 ಡಿಗ್ರಿ, ಸಿರ್ಸಾ 48.2 ಡಿಗ್ರಿ, ಝಜ್ಜರ್ 48.4 ಡಿಗ್ರಿ, ಫರೀದಾಬಾದ್ 48 ಡಿಗ್ರಿ ಸೆ., ಅಂಬಾಲಾ 44.3 ಡಿಗ್ರಿ ಮತ್ತು ಕರ್ನಾಲ್ ನಲ್ಲಿ 42.2 ಡಿಗ್ರಿ ಸೆ. ದಾಖಲಾಗಿದೆ. ರೋಹ್ಟಕ್ ಮತ್ತು ಹಿಸಾರ್‌ನಲ್ಲಿ ಸಂಜೆ ತುಂತುರು ಮಳೆಯಾಯಿತು.
ಕುದಿಯುತ್ತಿರುವ ಪಂಜಾಬ್ ಮತ್ತು ರಾಜಸ್ಥಾನ: ಪಂಜಾಬ್‌ನ ಬಟಿಂಡಾ 48.5 ಡಿಗ್ರಿ ಸೆ., ಲುಧಿಯಾನ ಮತ್ತು ಪಠಾಣ್‌ಕೋಟ್‌ನಲ್ಲಿ ಪಾದರಸವು 46.1 ಡಿಗ್ರಿ ಸೆ. ತಲುಪಿದೆ. ಫರೀದ್‌ಕೋಟ್‌ನಲ್ಲಿ 46 ಡಿಗ್ರಿ ಸೆಲ್ಸಿಯಸ್, ಅಮೃತಸರದಲ್ಲಿ 45.8 ಡಿಗ್ರಿ, ಪಟಿಯಾಲದಲ್ಲಿ 45.7 ಡಿಗ್ರಿ ಮತ್ತು ಗುರುದಾಸ್‌ಪುರದಲ್ಲಿ 44.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ರಾಜಸ್ಥಾನದಲ್ಲಿ ಗರಿಷ್ಠ ತಾಪಮಾನವು ಒಂದರಿಂದ ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದೆ. ಜುಂಜುನು ಜಿಲ್ಲೆಯ ಪಿಲಾನಿ 48.2 ಡಿಗ್ರಿ ಸೆಲ್ಸಿಯಸ್‌ನೊಂದಿಗೆ ರಾಜ್ಯದ ಅತ್ಯಂತ ಬಿಸಿಯಾದ ಸ್ಥಳವೆಂದು ದಾಖಲಿಸಲ್ಪಟ್ಟಿದೆ. ನಂತರ ಚುರು ಪಟ್ಟಣದಲ್ಲಿ 47.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದಿತ್ತು.
ಅರೇಬಿಯನ್ ಸಮುದ್ರದಿಂದ ವಾಯವ್ಯ ಭಾರತಕ್ಕೆ ಬೀಸುತ್ತಿರುವ ಮಾರುತಗಳಿಂದ ಮುಂದಿನ ಎರಡು ದಿನಗಳಲ್ಲಿ ಶಾಖದ ಅಲೆ ಪರಿಸ್ಥಿತಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.