
ತುರ್ತು ಪರಿಸ್ಥಿತಿ 50ನೇ ವರ್ಷ: 'ಪ್ರಜಾಪ್ರಭುತ್ವದ ಕರಾಳ ಅಧ್ಯಾಯ' ಎಂದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ 'ಎಕ್ಸ್' ಖಾತೆಯಲ್ಲಿ 'ಸಂವಿಧಾನಹತ್ಯೆದಿನ' ಎಂಬ ಹ್ಯಾಶ್ಟ್ಯಾಗ್ ಅಡಿಯಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಯನ್ನು "ಪ್ರಜಾಪ್ರಭುತ್ವದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ" ಎಂದು ಬಣ್ಣಿಸಿದ್ದಾರೆ. ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದ ಆ ದಿನಗಳನ್ನು ಯಾವುದೇ ಭಾರತೀಯರು ಮರೆಯಲು ಸಾಧ್ಯವಿಲ್ಲ ಎಂದು ಹೇಳಿರುವ ಅವರು, ಸಾಂವಿಧಾನಿಕ ಆದರ್ಶಗಳನ್ನು ಬಲಪಡಿಸುವ ಕೇಂದ್ರ ಸರ್ಕಾರದ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ 'ಎಕ್ಸ್' ಖಾತೆಯಲ್ಲಿ '#ಸಂವಿಧಾನಹತ್ಯೆದಿನ' ಎಂಬ ಹ್ಯಾಶ್ಟ್ಯಾಗ್ ಅಡಿಯಲ್ಲಿ ಸರಣಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. "ತುರ್ತು ಪರಿಸ್ಥಿತಿ ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ವಿರುದ್ಧ ಪ್ರಧಾನಿ ವಾಗ್ದಾಳಿ
ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆದ ಘಟನೆಗಳನ್ನು ಸ್ಮರಿಸಿದ ಮೋದಿ, "ಸಂವಿಧಾನದಲ್ಲಿ ಪ್ರತಿಪಾದಿಸಿದ ಮೌಲ್ಯಗಳನ್ನು ಕಡೆಗಣಿಸಲಾಯಿತು. ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿಡಲಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರನ್ನು ಜೈಲಿಗೆ ಕಳುಹಿಸಲಾಯಿತು," ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ಅಂದಿನ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವವನ್ನು ಬಂಧನದಲ್ಲಿರಿಸಿತ್ತು. ಸಂಸತ್ತಿನ ಧ್ವನಿಯನ್ನು ಕ್ಷೀಣಗೊಳಿಸಲಾಯಿತು. ನ್ಯಾಯಾಲಯಗಳನ್ನು ನಿಯಂತ್ರಿಸಲು ಯತ್ನಿಸಲಾಯಿತು. ಹಿಂದುಳಿದ, ಬಡವರು ಹಾಗೂ ದೀನದಲಿತರನ್ನು ಗುರಿಯಾಗಿಸಲಾಯಿತು. ಇವೆಲ್ಲವೂ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಸರ್ಕಾರದ ಕುತಂತ್ರಗಳಿಗೆ ಉದಾಹರಣೆಯಾಗಿದೆ," ಎಂದು ಅವರು ಆರೋಪಿಸಿದರು.
ಪ್ರಜಾಪ್ರಭುತ್ವ ರಕ್ಷಣೆಗಾಗಿ ಹೋರಾಡಿದವರಿಗೆ ಸಲಾಂ
ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದವರಿಗೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದರು. "ತುರ್ತು ಪರಿಸ್ಥಿತಿಯ ಸಮಯದಲ್ಲಿ ಹೋರಾಡಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಗೌರವ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಲು ಮತ್ತು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನವನ್ನು ಮುಡಿಪಾಗಿಟ್ಟ ಆದರ್ಶಗಳನ್ನು ಸಂರಕ್ಷಣೆಗಾಗಿ ದೇಶದಾದ್ಯಂತ ಜನರು ಒಂದೇ ಗುರಿಯೊಂದಿಗೆ ಒಗ್ಗಟ್ಟಾಗಿ ಕೆಲಸ ಮಾಡಿದ್ದರು," ಎಂದು ಉಲ್ಲೇಖಿಸಿದರು. ಈ ಸಾಮಾಜಿಕ ಹೋರಾಟವೇ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲು ಹಾಗೂ ಹೊಸ ಚುನಾವಣೆ ಘೋಷಿಸಲು ಕಾರಣವಾಯಿತು, ಆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೀನಾಯ ಸೋಲು ಎದುರಾಯಿತು ಎಂದು ಅವರು ನೆನಪಿಸಿಕೊಂಡರು.
ಸಂವಿಧಾನದ ಮೌಲ್ಯಗಳ ಬಲವರ್ಧನೆಗೆ ಬದ್ಧತೆ
"ನಮ್ಮ ಸಂವಿಧಾನದ ಮೌಲ್ಯಗಳನ್ನು ಬಲಪಡಿಸುವ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸಲು ಒಗ್ಗಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ. ನಾವು ಪ್ರಗತಿಯ ಹೊಸ ಎತ್ತರಕ್ಕೆ ತಲುಪೋಣ ಮತ್ತು ಬಡವರು, ದೀನದಲಿತರ ಕನಸುಗಳನ್ನು ನನಸುಗೊಳಿಸೋಣ," ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಕೇಂದ್ರ ಸರ್ಕಾರವು ತುರ್ತು ಪರಿಸ್ಥಿತಿ ಹೇರಿಕೆಯ ದಿನವನ್ನು 'ಸಂವಿಧಾನ ಹತ್ಯೆ ದಿನ'ವಾಗಿ ಆಚರಿಸುವುದಾಗಿ ಘೋಷಿಸಿತ್ತು. ಈ ಸ್ಮರಣೆಯು ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಕಠಿಣ ಅವಧಿಯನ್ನು ನೆನಪಿಸುತ್ತದೆ.