Election 2024| ಮೋದಿಯವರ ಚುನಾವಣೆ ಬಂಡಿಗೆ ಪ್ರಾದೇಶಿಕ ಪಕ್ಷಗಳಿಂದ ಅಡೆತಡೆ
x

Election 2024| ಮೋದಿಯವರ ಚುನಾವಣೆ ಬಂಡಿಗೆ ಪ್ರಾದೇಶಿಕ ಪಕ್ಷಗಳಿಂದ ಅಡೆತಡೆ

2019ರಲ್ಲಿ ಇದ್ದಂತೆ ಮೋದಿ ಅಲೆ ಇಲ್ಲ. 2024 ರ ಚುನಾವಣೆ ಹೆಚ್ಚು ಸ್ಥಳೀಯವಾಗಿ ಮಾರ್ಪಟ್ಟಿದೆ. ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ತೋರುತ್ತದೆ.


ದೇಶದ ಸಾರ್ವತ್ರಿಕ ಚುನಾವಣೆ ಕಣ ಸ್ಥಳೀಯ ಪಕ್ಷಗಳಿಂದ ಬದಲಾಗುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಪ್ರತಿಪಕ್ಷಗಳ ಇಂಡಿಯ ಒಕ್ಕೂಟ ಸವಾಲು ಎಸೆದಿದೆ. ಚುನಾವಣೆಯಲ್ಲಿ ವಿವಿಧ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಇವು ಬಿಜೆಪಿ ರಥಕ್ಕೆ ಕಡಿವಾಣ ಹಾಕಿದರೆ, ಮೋದಿ ವಿರೋಧಿಗಳು ನಗೆ ಬೀರುವ ಸಾಧ್ಯತೆ ಇದೆ.

ಪ್ರಾದೇಶಿಕ ಪಕ್ಷಗಳು ಪರಿಣಾಮ ಹೇಗೆ ಬೀರಬಲ್ಲವು ಎಂದರೆ.,

1. ಪ್ರಾದೇಶಿಕ ಪಕ್ಷಗಳ ಪುನಶ್ಚೇತನ: ಒಂದು ದಶಕದ ನಿದ್ರಾವಸ್ಥೆ ನಂತರ ಪ್ರಾದೇಶಿಕ ಪಕ್ಷಗಳು ಪುನಶ್ಚೇತನಗೊಂಡಿವೆ ಮತ್ತು ತಮ್ಮ ಪ್ರಭಾವವಿರುವ ವಲಯಗಳಲ್ಲಿ ಉತ್ತಮ ಹೋರಾಟ ನೀಡುತ್ತಿವೆ. 2014 ಮತ್ತು 2019ರಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ತಡೆಯಲು ಇವುಗಳಿಂದ ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ತಮ್ಮ ವೇಗವನ್ನು ಮರಳಿ ಪಡೆದಿದೆ.

ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮದೇ ಇತಿಹಾಸ ಹೊಂದಿವೆ. ನಮ್ಮದು ಒಕ್ಕೂಟ ವ್ಯವಸ್ಥೆ ಆಗಿರುವುದರಿಂದ, ಕೆಲವು ಪಕ್ಷಗಳು ಜಾತಿ- ಜನಾಂಗೀಯ ಪರಿಗಣನೆಗಳ ಪ್ರಾದೇಶಿಕ ಕೊರತೆ ಮತ್ತು ಉಪ ರಾಷ್ಟ್ರೀಯತೆಯನ್ನು ಆಧರಿಸಿಕೊಂಡವು. ಆದರೆ, ಹೆಚ್ಚಿನ ಪಕ್ಷಗಳು 1950 ಮತ್ತು 1960 ರ ಸಮಾಜವಾದಿ ಚಳವಳಿಯ ಉತ್ಪನ್ನಗಳಾಗಿವೆ. 1990 ರಲ್ಲಿ ಮಂಡಲ್ ಆಯೋಗದ ಶಿಫಾರಸುಗಳ ಅನುಷ್ಠಾನದ ನಂತರ ಅವು ಹೊಸ ಜೀವ ಪಡೆದವು. ದಲಿತರ ಸಬಲೀಕರಣಕ್ಕೆ ಮೀಸಲಾದ ರಾಜಕೀಯ ಪಕ್ಷಗಳೂ ಇದ್ದು, ಜ್ಯೋತಿಬಾ ಫುಲೆ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ರಾಜಕೀಯ ಸಿದ್ಧಾಂತಗಳೊಂದಿಗೆ ಸಂಬಂಧ ಹೊಂದಿವೆ.

ವೈಯಕ್ತಿಕ ಹಾಗೂ ಸ್ಥಳೀಯ ವಿಚಾರಗಳಿಂದ ಕಾಂಗ್ರೆಸ್ ನಿಂದ ಬೇರ್ಪಟ್ಟ ಪಕ್ಷಗಳಿದ್ದು, ಬಂಗಾಳ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ದಲ್ಲಿ ಅಸ್ತಿತ್ವದಲ್ಲಿವೆ. ಮಹಾರಾಷ್ಟ್ರ, ತಮಿಳುನಾಡು, ಕಾಶ್ಮೀರ, ಸಿಕ್ಕಿಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಜನಾಂಗೀಯ ಪ್ರಾದೇಶಿಕ ಪಕ್ಷಗಳಿವೆ. ದೆಹಲಿ ಮತ್ತು ಪಂಜಾಬ್‌ಗಳಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ, ತಟಸ್ಥ ಸಿದ್ಧಾಂತ ಮತ್ತು ಸಾಮಾಜಿಕ ಗುರುತು ಹೊಂದಿರುವ ಪಕ್ಷ.

ಕಾಂಗ್ರೆಸ್‌ನಿಂದ ಬೇರ್ಪಟ್ಟ ಪಕ್ಷಗಳನ್ನು ಹೊರತುಪಡಿಸಿ ಉಳಿದವು ಎರಡು ಸಾಮಾನ್ಯ ಗುಣಗಳನ್ನು ಹಂಚಿಕೊಳ್ಳುತ್ತವೆ: ಒಂದು ಅವು ಸಾಮೂಹಿಕ ಚಳವಳಿಗಳ ಉತ್ಪನ್ನಗಳು ಹಾಗೂ ಎರಡನೆಯದಾಗಿ, ಜನ ಬೆಂಬಲ ಗಳಿಸಲು ಪ್ರಾದೇಶಿಕತೆ, ಭಾಷೆ, ಸಾಂಸ್ಕೃತಿಕ ಮತ್ತು ಜನಾಂಗೀಯ ಗುರುತುಗಳನ್ನು ಬಳಸುತ್ತವೆ.

2. ʻ400 ಪ್ಲಸ್ʼ ಕಾರ್ಯತಂತ್ರದಿಂದ ಹಿನ್ನಡೆ: ʻಅಬ್ಕಿ ಬಾರ್, 400 ಪಾರ್ʼ (ಈ ಬಾರಿ ಸುಮಾರು 400 ಪ್ಲಸ್ ಸೀಟು) ಎಂಬ ಘೋಷಣೆ ಯಿಂದ ಹಿನ್ನಡೆಯಾಗಿದೆ. ಬಿಜೆಪಿ ಇಂಥ ಬಹುಮತದಿಂದ ಸಂವಿಧಾನವನ್ನು ಬದಲಿಸಲಿದೆ ಎಂಬ ಆತಂಕ ಸೃಷ್ಟಿಯಾಗಿದ್ದು ಹಿನ್ನಡೆಗೆ ಕಾರಣ. ಸಮಾಜದ ಅಂಚಿನಲ್ಲಿರುವ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು ಮತ್ತು ಇತರ ಅಲ್ಪಸಂಖ್ಯಾತರಲ್ಲಿ ಸಂವಿಧಾನ ಕೊಡಮಾಡಿದ ವಿಶೇಷ ಹಕ್ಕುಗಳು, ಸವಲತ್ತುಗಳು ಮತ್ತು ರಕ್ಷಣೆಯನ್ನು ಕಸಿದುಕೊಳ್ಳಲಾಗುತ್ತದೆ ಎಂಬ ಆತಂಕ ಮೂಡಿದೆ. ಇದನ್ನು ಜಾತಿ-ಸಮುದಾಯ ಆಧರಿತ ಪ್ರಾದೇಶಿಕ ಪಕ್ಷಗಳು ಪ್ರಚಾರದಲ್ಲಿ ಬಳಸಿಕೊಳ್ಳುತ್ತಿವೆ.

ಕಾಂಗ್ರೆಸ್ ಪಕ್ಷ ದೇಶಾದ್ಯಂತ ಜಾತಿ ಜನಗಣತಿಯನ್ನು ಪ್ರತಿಪಾದಿಸುತ್ತಿದೆ. ಮೋದಿ ಅವರ ಮೂರನೇ ಅವಧಿಯಲ್ಲಿ ದೇಶದಲ್ಲಿ ಪ್ರಜಾಪ್ರಭು ತ್ವದ ಅಂತ್ಯ ಮತ್ತು ಮೀಸಲು ರದ್ದುಗೊಳಿಸಲಿದೆ ಎಂದು ಹೇಳುತ್ತದೆ. ಮೋದಿ ಅವರನ್ನು ನಿರಾಕರಣೆ-ವಿವರಣೆ ನೀಡುವುದಕ್ಕೆ ಸೀಮಿತಗೊಳಿಸಿ, ಹಿಂದಕ್ಕೆ ತಳ್ಳಲಾಗಿದೆ.

3. ಪ್ರತಿಪಕ್ಷಗಳ ಏಕತೆಯಿಂದ ಮತ ವಿಭಜನೆಗೆ ತಡೆ: ಹಿಂದೆ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧದ ಮತಗಳನ್ನುಪ್ರಾದೇಶಿಕ ಪಕ್ಷಗಳು ವಿಭಜಿಸುತ್ತಿದ್ದವು. ಆದರೆ, ಇಂಡಿಯ ಒಕ್ಕೂಟ ರಚನೆಯಿಂದ ವಿರೋಧ ಪಕ್ಷಗಳ ನಡುವೆ ಹೋರಾಟ ತಪ್ಪಿದೆ. ಕೇರಳ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಇದಕ್ಕೆ ಅಪವಾದ.

ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಹುಜನ ಸಮಾಜ ಪಕ್ಷವು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದೊಂದಿಗೆ ಹೊಂದಾಣಿಕೆಗೆ ನಿರಾಕರಿಸಿತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್, ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದೆ.

4. ಹಿಂದುಳಿದ ಜಾತಿ ಅಭ್ಯರ್ಥಿಗಳು ಕಣಕ್ಕೆ: ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಮೀಸಲು ಪರ ಪ್ರಾದೇಶಿಕ ಪಕ್ಷಗಳು ಪ್ರಬಲವಲ್ಲದ ಮತ್ತು ಅತ್ಯಂತ ಹಿಂದುಳಿದ ಜಾತಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಕಣಕ್ಕಿಳಿಸಿವೆ. ಇದರಿಂದ ಇವು ಹಿಂದುಳಿದ ಜಾತಿಗಳಲ್ಲಿರುವ ಪ್ರಬಲ ವರ್ಗಗಳಿಗೆ ಮಾತ್ರ ಒಲವು ತೋರುತ್ತವೆ ಎಂಬ ಬಿಜೆಪಿ ಪ್ರಚಾರಕ್ಕೆ ತಡೆಯೊಡ್ಡುತ್ತದೆ.

ಬಿಜೆಪಿಯು ಹಿಂದುಳಿದ ಜಾತಿಗಳು ಮತ್ತು ದಲಿತರನ್ನು ಸಹಯೋಗ ಮತ್ತು ಪ್ರಾತಿನಿಧ್ಯದ ಮೂಲಕ ದುರ್ಬಲಗೊಸಿದೆ. ಈ ಕಾರ್ಯತಂತ್ರ ಉತ್ತರ ಪ್ರದೇಶದಲ್ಲಿ ಲಾಭ ನೀಡಿತು. ಆದರೆ, 2024ರಲ್ಲಿ ಬಿಜೆಪಿಯ ಈ ತಂತ್ರ ಪರೀಕ್ಷೆಗೊಳಗಾಗಲಿದೆ. ಏಕೆಂದರೆ, ದೇಶದಲ್ಲಿ ಮೋದಿ ಅಲೆ ಇಲ್ಲ ಮತ್ತು ದೇಶದೆಲ್ಲೆಡೆ ಅನ್ವಯಿಸಬಲ್ಲ ನರೇಟಿವ್‌ ಇಲ್ಲ. ಇದರಿಂದ ಚುನಾವಣೆಯು ಸ್ಥಳೀಯ ವ್ಯವಹಾರವಾಗಿ ಬದಲಾಗಿದೆ. ರಾಜ್ಯದಿಂದ ರಾಜ್ಯಕ್ಕೆ ಹಾಗೂ ಕ್ಷೇತ್ರ ಮಟ್ಟದಲ್ಲೂ ಬದಲಾಗಿದೆ.

5. ರಾಜ್ಯಗಳಲ್ಲಿ ಆಡಳಿತ ವಿರೋಧಿ ಭಾವನೆ: ಬಿಹಾರದಂತಹ ಕೆಲವು ರಾಜ್ಯಗಳಲ್ಲಿ ಮೈತ್ರಿಕೂಟದ ಪಾಲುದಾರರ ಆಡಳಿತ ವಿರೋಧಿ ಆಡಳಿತದ ಭಾರವನ್ನು ಮೋದಿ ಅನುಭವಿಸಬೇಕಿದೆ. ಚುನಾವಣೆಯ ಆರಂಭಿಕ ಹಂತಗಳಲ್ಲಿ ಕಡಿಮೆ ಮತದಾನವನ್ನುಗಮನಿಸಿದರೆ, ಮೋದಿಯವರ 10 ವರ್ಷಗಳ ಆಡಳಿತದ ವಿರುದ್ಧ ವಿರೋಧಿ ಅಲೆಯನ್ನು ತಳ್ಳಿಹಾಕುವಂತಿಲ್ಲ. ಶಾಸಕರ ಖರೀದಿ, ಪಕ್ಷಾಂತರ ಮತ್ತು ಕೇಂದ್ರೀಯ ತನಿಖಾ ದಳಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ಒಡೆಯುವುದು ಮತ್ತಿತರ ಪ್ರಜಾಸತ್ತಾತ್ಮಕವಲ್ಲದ ಕುತಂತ್ರದ ಬಗ್ಗೆ ಜನ ಅಸಮಾಧಾನಗೊಂಡಿದ್ದಾರೆ.

ಎನ್‌ಡಿಎ ತನ್ನ 2019 ರ ಸಂಖ್ಯೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವಂತೆ ತೋರುತ್ತಿದೆ. ಬಿಜೆಪಿ ಪ್ರಮುಖ ಪ್ರಾದೇಶಿಕ ಪಕ್ಷಗಳೊಂದಿಗೆ ಆಟಗಾರರೊಂದಿಗೆ, ಉದಾಹರಣೆಗೆ, ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಅಥವಾ ಈಗಾಗ ಲೇ ಕೆಳಮುಖವಾಗಿರುವ ಪಕ್ಷಗಳೊಂದಿಗೆ (ಕರ್ನಾಟಕ ಮತ್ತು ಬಿಹಾರದಲ್ಲಿ) ಮೈತ್ರಿ ಮಾಡಿಕೊಂಡಿದೆ.

ಹಲವು ವರ್ಷಗಳ ನಂತರ ಮುಂದಿನ ಸರ್ಕಾರದ ಕೀಲಿಕೈಯನ್ನು ಪ್ರಾದೇಶಿಕ ಪಕ್ಷಗಳು ಹಿಡಿದಿರುವಂತಿದೆ. ಅವು ಯಶಸ್ವಿಯಾಗುತ್ತವೆಯೇ ಎಂಬುದನ್ನು ಕಾರ್ಯನೀತಿಯ ಜಾರಿಯಲ್ಲಿನ ಕ್ಷಮತೆ ನಿರ್ಧರಿಸುತ್ತದೆ.

(ಸತೀಶ್ ಕೆ ಝಾ, ದೆಹಲಿ ವಿಶ್ವವಿದ್ಯಾನಿಲಯದ ಆರ್ಯಭಟ್ಟ ಕಾಲೇಜಿನ ಶಿಕ್ಷಕ. ಕ್ರಿಯೇಟಿವ್ ಕಾಮನ್ಸ್ ಅಡಿಯಲ್ಲಿ 360info ಮೂಲಕ ಪ್ರಕಟಿಸಲಾಗಿದೆ).

Read More
Next Story