
ಶೇ.44 ರಷ್ಟು ಹಾಲಿ ಸಂಸದರ ಮೇಲೆ ಕ್ರಿಮಿನಲ್ ಆರೋಪ: ಎಡಿಆರ್
514 ಸಂಸದರು ಸಲ್ಲಿಸಿದ ಸ್ವಯಂ ಪ್ರಮಾಣಪತ್ರ ಮತ್ತು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಣೆ ಪ್ರಕಾರ, 225 ಮಂದಿ ಅಥವಾ ಶೇ.44 ಮಂದಿ ಮೇಲೆ ಕ್ರಿಮಿನಲ್ ಮೊಕದ್ದಮೆಗಳು ಇವೆ.
ಎಡಿಆರ್ ವರದಿ ಪ್ರಕಾರ, ಶೇ. 5 ರಷ್ಟು ಮಂದು ಶತಕೋಟ್ಯಧಿಪತಿಗಳು(100 ಕೋಟಿ ರೂ.). ಕ್ರಿಮಿನಲ್ ಆರೋಪ ಹೊತ್ತಿರುವವರಲ್ಲಿ ಶೇ.29 ರಷ್ಟು ಮಂದಿ ಕೊಲೆ, ಕೊಲೆ ಯತ್ನ, ಕೋಮು ದ್ವೇಷಕ್ಕೆ ಉತ್ತೇಜನ, ಅಪಹರಣ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ.
ಒಂಬತ್ತು ಮಂದಿ ಕೊಲೆ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ ಐವರು ಸಂಸದರು ಬಿಜೆಪಿಗೆ ಸೇರಿದವರು. 28 ಸಂಸದರು ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. ಇವರಲ್ಲಿ 21 ಮಂದಿ ಬಿಜೆಪಿಗೆ ಸೇರಿದವರು. 16 ಸಂಸದರು ಅತ್ಯಾಚಾರ ಸೇರಿದಂತೆ ಮಹಿಳೆಯರ ವಿರುದ್ಧದ ಅಪರಾಧದ ಆರೋಪ ಎದುರಿಸುತ್ತಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಹೆಚ್ಚು ಶತಕೋಟ್ಯಧಿಪತಿ ಸಂಸದರನ್ನು ಹೊಂದಿವೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಶೇ.50 ಕ್ಕಿಂತ ಹೆಚ್ಚು ಸಂಸದರು ಇದ್ದಾರೆ. ನಕುಲ್ ನಾಥ್ (ಕಾಂಗ್ರೆಸ್), ಡಿ.ಕೆ. ಸುರೇಶ್ (ಕಾಂಗ್ರೆಸ್) ಮತ್ತು ಕಣೂರು ರಘು ರಾಮ ಕೃಷ್ಣರಾಜು (ಸ್ವತಂತ್ರ) ಅತ್ಯಧಿಕ ಆಸ್ತಿ ಹೊಂದಿರುವ ಮೂರು ಸಂಸದರು.
ಸಂಸದರಲ್ಲಿ ಶೇ.73ರಷ್ಟು ಮಂದಿ ಪದವೀಧರ ಅಥವಾ ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ. ಕೇವಲ ಶೇ.15 ಮಹಿಳೆಯರು ಇದ್ದಾರೆ.