Vijayawada - Bengaluru closer, Vande Bharat train to start soon
x

ವಂದೇ ಭಾರತ್‌ ರೈಲು.

ರೈಲ್ವೆ ಹಳಿಯಲ್ಲಿ 'ರೀಲ್ಸ್' ಮಾಡುತ್ತಿದ್ದ ನಾಲ್ವರು ಬಾಲಕರಿಗೆ ವಂದೇ ಭಾರತ್ ಡಿಕ್ಕಿ, ಸ್ಥಳದಲ್ಲೇ ಸಾವು

ರೈಲು ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.


ಇನ್‌ಸ್ಟಾಗ್ರಾಂ ರೀಲ್ಸ್ ಮಾಡುವ ಹುಚ್ಚು ನಾಲ್ವರು ಬಾಲಕರ ಪ್ರಾಣಕ್ಕೆ ಎರವಾ ದಾರುಣ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಹಳಿಯ ಮೇಲೆ ನಿಂತು ರೀಲ್ಸ್ ಚಿತ್ರೀಕರಿಸುತ್ತಿದ್ದಾಗ ವೇಗವಾಗಿ ಬಂದ ಜೋಗ್‌ಬಾನಿ-ದಾನಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಹದಿಹರೆಯದ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶುಕ್ರವಾರ (ಅಕ್ಟೋಬರ್ 3) ಮುಂಜಾನೆ ಈ ದುರಂತ ಸಂಭವಿಸಿದ್ದು, ಐವರು ಬಾಲಕರು ನವರಾತ್ರಿ ಜಾತ್ರೆಯಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದರು. ಈ ವೇಳೆ ಪೂರ್ಣಿಯಾ ಮತ್ತು ಕಸ್ಬಾ ರೈಲ್ವೆ ನಿಲ್ದಾಣಗಳ ನಡುವೆ, ಹಳಿಯ ಮೇಲೆ ನಿಂತು ಎದುರಿನಿಂದ ಬರುತ್ತಿದ್ದ ರೈಲಿನ ರೀಲ್ಸ್ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ದುರದೃಷ್ಟವಶಾತ್, ವೇಗವಾಗಿ ಬಂದ ವಂದೇ ಭಾರತ್ ರೈಲು ಇವರಿಗೆ ಡಿಕ್ಕಿ ಹೊಡೆದಿದೆ.

ರೈಲು ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮೃತಪಟ್ಟ ಯುವಕರು 14 ರಿಂದ 15 ವರ್ಷ ವಯಸ್ಸಿನವರೆಂದು ಗುರುತಿಸಲಾಗಿದೆ.

"ಇಂದು ಮುಂಜಾನೆ 4:54 ಕ್ಕೆ ಜೋಗ್‌ಬಾನಿ-ದಾನಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಿಂದ ಅಪಘಾತ ಸಂಭವಿಸಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಘಟನೆ ನಡೆದಾಗ ಅವರು ಸಾಮಾಜಿಕ ಮಾಧ್ಯಮಕ್ಕಾಗಿ ರೀಲ್ಸ್ ಮಾಡುತ್ತಿದ್ದರು ಎಂದು ಶಂಕಿಸಲಾಗಿದೆ" ಎಂದು ಈಶಾನ್ಯ ಗಡಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಕಳೆದ ತಿಂಗಳು, ಸೆಪ್ಟೆಂಬರ್ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಜೋಗ್‌ಬಾನಿ-ದಾನಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು. ಈ ರೈಲು ಅರಾರಿಯಾ, ಪೂರ್ಣಿಯಾ, ಮಧೇಪುರ, ಸಹರ್ಸಾ, ಖಗರಿಯಾ, ಬೇಗುಸರಾಯ್, ಪಾಟ್ನಾ ಸೇರಿದಂತೆ ಹಲವು ಜಿಲ್ಲೆಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ.

Read More
Next Story