ವಿಧಾನಸಭೆ ಚುನಾವಣೆ| ಜಮ್ಮು-ಕಾಶ್ಮೀರ ಸೆಪ್ಟೆಂಬರ್ 18, 25, ಅಕ್ಟೋಬರ್ 1; ಹರಿಯಾಣ ಅಕ್ಟೋಬರ್ 1
ಭಾರತೀಯ ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದಲ್ಲಿ ಚುನಾವಣೆಯ ದಿನಾಂಕಗಳನ್ನು ಶುಕ್ರವಾರ (ಆಗಸ್ಟ್ 16) ಪ್ರಕಟಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಹರಿಯಾಣದಲ್ಲಿ ಅಕ್ಟೋಬರ್ 1 ರಂದು ಒಂದು ಹಂತದಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 4 ರಂದು ಎರಡೂ ರಾಜ್ಯಗಳ ಮತ ಎಣಿಕೆ ನಡೆಯಲಿದೆ.
ವರ್ಷಾಂತ್ಯಕ್ಕೆ ಮೊದಲು ನಡೆಯಬೇಕಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದಿನಾಂಕಗಳನ್ನು ಇಂದು ಪ್ರಕಟಿಸಿಲ್ಲ.
ಹರಿಯಾಣ ಮತ್ತು ಮಹಾರಾಷ್ಟ್ರದ ವಿಧಾನಸಭೆಗಳ ಅವಧಿ ಕ್ರಮವಾಗಿ ನವೆಂಬರ್ 3 ಮತ್ತು ನವೆಂಬರ್ 26 ರಂದು ಕೊನೆಗೊಳ್ಳುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಗೆ ಸೆಪ್ಟೆಂಬರ್ 30 ಗಡುವನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿತ್ತು.
ಇಸಿ ಇತ್ತೀಚೆಗೆ ಚುನಾವಣೆ ಸಿದ್ಧತೆಯ ಮೇಲ್ವಿಚಾರಣೆಗೆಂದು ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣಕ್ಕೆ ಭೇಟಿ ನೀಡಿತ್ತು. ಇನ್ನೂ ಮಹಾರಾಷ್ಟ್ರಕ್ಕೆ ಭೇಟಿ ನೀಡಿಲ್ಲ.