
ಗೋವಾದಲ್ಲಿ ಮೂವರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ: ನಾಲ್ವರು ಆರೋಪಿಗಳ ಬಂಧನ
ಬಾಲಕಿಯರ ಪೋಷಕರು ಜೂನ್ 8ರಂದು ತಮ್ಮ ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಾದ ಕೂಡಲೇ ಪೊಲೀಸರು ತಂಡಗಳನ್ನು ರಚಿಸಿ ತೀವ್ರ ಕಾರ್ಯಾಚರಣೆ ನಡೆಸಿ, ಬಾಲಕಿಯರನ್ನು ಗೆಸ್ಟ್ಹೌಸ್ನಿಂದ ರಕ್ಷಿಸಲಾಗಿದೆ.
ಗೋವಾ ರಾಜ್ಯದ ಉತ್ತರ ಗೋವಾ ಜಿಲ್ಲೆಯ ಕಾಲಂಗುಟ್ ಪ್ರದೇಶದಲ್ಲಿರುವ ಒಂದು ಗೆಸ್ಟ್ಹೌಸ್ನಲ್ಲಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೆಸ್ಟ್ಹೌಸ್ ಮಾಲೀಕ ಮತ್ತು ಮ್ಯಾನೇಜರ್ ಸೇರಿ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಬಾಲಕಿಯರ ವಯಸ್ಸು ಕ್ರಮವಾಗಿ 11, 13 ಮತ್ತು 15 ವರ್ಷಗಳು ಎಂದು ತಿಳಿದುಬಂದಿದೆ. ಅವರು ಒಂದೇ ಪ್ರದೇಶದವರು. ಈ ಬಾಲಕಿಯರು ಜೂನ್ 7 ಮತ್ತು 8ರಂದು ಅಲ್ತಾಫ್ ಮುಜಾವರ್ (19) ಮತ್ತು ಓಂ ನಾಯ್ಕ್ (21) ಎಂಬಿಬ್ಬರ ಜತೆ ಗೆಸ್ಟ್ ಹೌಸ್ಗೆ ಹೋಗಿದ್ದರು. ಅಲ್ಲಿ ಅವರ ಅತ್ಯಾಚಾರ ನಡೆದಿದೆ. ಘಟನೆ ಬೆಳಕಿಗೆ ಬಂದ ಕೂಡಲೇ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಲಕಿಯರ ಪೋಷಕರು ಜೂನ್ 8ರಂದು ತಮ್ಮ ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಾದ ಕೂಡಲೇ ಪೊಲೀಸರು ತಂಡಗಳನ್ನು ರಚಿಸಿ ತೀವ್ರ ಕಾರ್ಯಾಚರಣೆ ನಡೆಸಿ, ಬಾಲಕಿಯರನ್ನು ಗೆಸ್ಟ್ಹೌಸ್ನಿಂದ ರಕ್ಷಿಸಲಾಗಿದೆ.
ಬುಧವಾರ ರಾತ್ರಿ ಗೆಸ್ಟ್ಹೌಸ್ ಮಾಲೀಕ ರಜತ್ ಚೌಹಾಣ್(31) ಮತ್ತು ಮ್ಯಾನೇಜರ್ ಮಂಸೂರ್ ಪೀರ್ (35) ಎಂಬುವರನ್ನೂ ಬಂಧಿಸಲಾಗಿದೆ. ಪೋಷಕರ ಅನುಮತಿ ಇಲ್ಲದೆ ಮತ್ತು ಪರಿಶೀಲನೆ ನಡೆಸದೆ ಅಪ್ರಾಪ್ತ ಬಾಲಕಿಯರಿಗೆ ಕೊಠಡಿ ನೀಡಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.
ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ, ಪೋಕ್ಸೊ ಕಾಯ್ದೆ ಮತ್ತು ಗೋವಾ ಮಕ್ಕಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಗುಪ್ತಾ ತಿಳಿಸಿದ್ದಾರೆ. ಅಲ್ಲದೆ, ಗೆಸ್ಟ್ಹೌಸ್ ಅನ್ನು ಮುಚ್ಚಲು ಮತ್ತು ಅದರ ಪರವಾನಗಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.