ಲೋಕಸಭೆ ಚುನಾವಣೆ 2024| ಈಶಾನ್ಯ ಭಾರತದಲ್ಲಿ ಬದಲಾವಣೆಯ ಗಾಳಿ
x
ಜೋರ್ಹತ್ ಲೋಕಸಭೆ ಸ್ಥಾನವನ್ನು ಗೆದ್ದ ನಂತರ ಗೌರವ್ ಗೊಗೋಯ್ ವಿಜಯದ ಚಿಹ್ನೆಯನ್ನು ತೋರಿಸಿ ದರು. ಅವರು ಬಿಜೆಪಿಯ ತಪನ್ ಗೊಗೋಯ್ ವಿರುದ್ಧ 1.4 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಲೋಕಸಭೆ ಚುನಾವಣೆ 2024| ಈಶಾನ್ಯ ಭಾರತದಲ್ಲಿ ಬದಲಾವಣೆಯ ಗಾಳಿ


2024 ರ ಚುನಾವಣೆಯಲ್ಲಿ ದೇಶದ ಕೆಲವು ರಾಜ್ಯಗಳಲ್ಲಿ ʻಮೋದಿ ಮ್ಯಾಜಿಕ್‌ʼ ಕೆಲಸ ಮಾಡಿಲ್ಲ ಮತ್ತು ಪ್ರತಿಪಕ್ಷಗಳಿಗೆ ಅವಕಾಶ ನೀಡಿವೆ. ಈಶಾನ್ಯ ರಾಜ್ಯಗಳು ಈ ಗುಂಪಿಗೆ ಸೇರುತ್ತವೆ. ಇಲ್ಲಿನ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್‌ ನೆಲೆ ಕಂಡುಕೊಂಡಿದೆ; ಮೂರು ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿ ಹೊರಹೊಮ್ಮಿವೆ ಮತ್ತು ಎರಡು ರಾಜ್ಯಗಳು ಮೊದಲ ಬಾರಿಗೆ ತಮ್ಮ ಪ್ರತಿನಿಧಿಗಳನ್ನು ಲೋಕಸಭೆಗೆ ಕಳುಹಿಸಲಿವೆ.

ಈ ರಾಜ್ಯಗಳು 25 ಲೋಕಸಭೆ ಸ್ಥಾನಗಳನ್ನು ಹೊಂದಿವೆ. 2019 ರಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ 14 ಹಾಗೂ ಮಿತ್ರಪಕ್ಷಗಳು ಐದು ಸ್ಥಾನ ಗಳಿಸಿದ್ದವು. ಈ ಬಾರಿ ಬಿಜೆಪಿ 12 ಮತ್ತು ಮಿತ್ರಪಕ್ಷಗಳು ಮೂರು ಸ್ಥಾನ ಗಳಿಸಿವೆ. ಆದರೆ, ನಾಲ್ಕು ಸ್ಥಾನ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಏಳು ಸ್ಥಾನ ಗಳಿಸಿದೆ; ಅಸ್ಸಾಂನಲ್ಲಿ ಮೂರು (ಧುಬ್ರಿ, ನಾಗಾಂವ್, ಜೋರ್ಹತ್), ಮಣಿಪುರ 2 (ಹೊರ ಮಣಿಪುರ ಮತ್ತು ಒಳ ಮಣಿಪುರ), ಮೇಘಾಲಯ 1(ತುರಾ) ಮತ್ತು ನಾಗಾಲ್ಯಾಂಡ್‌ನ ಏಕೈಕ ಸ್ಥಾನ ಅದರ ಪಾಲಾಗಿದೆ. ಬಹು ಮುಖ್ಯವಾಗಿ, ಬಿಜೆಪಿಯ ಮೂರು ಪ್ರಾದೇಶಿಕ ಮಿತ್ರಪಕ್ಷಗಳು, ಅದರಲ್ಲಿ ಎರಡು ತಮ್ಮ ರಾಜ್ಯಗಳಲ್ಲಿ ಅಧಿಕಾರದಲ್ಲಿವೆ, ಯಾವುದೇ ಸ್ಥಾನ ಗೆಲ್ಲುವಲ್ಲಿ ವಿಫಲವಾಗಿವೆ.

ಅಸ್ಸಾಂ (14 ಸ್ಥಾನ): ಬಿಜೆಪಿ ತನ್ನ ಒಂಬತ್ತು ಸ್ಥಾನಗಳನ್ನು ಹಿಡಿದಿಟ್ಟುಕೊಂಡಿದೆ. ಎನ್‌ಡಿಎ ಭಾಗವಾದ ಅಸಾಮ್ ಗಣ ಪರಿಷತ್ (ಎಜಿಪಿ) ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ತಲಾ ಒಂದು ಸ್ಥಾನ ಪಡೆದುಕೊಂಡಿವೆ. ಕಾಂಗ್ರೆಸ್ ಮೂರು ಸ್ಥಾನ ಕೈವಶ ಮಾಡಿಕೊಂಡಿದೆ.

ಆದರೆ, ಇದು ಸಂಪೂರ್ಣ ಚಿತ್ರವಲ್ಲ. ಚುನಾವಣೆ ಆಯೋಗದ ಅಂಕಿಅಂಶಗಳ ಪ್ರಕಾರ, ಬಿಜೆಪಿಯ ಮತ ಗಳಿಕೆ ಪ್ರಮಾಣ ಶೇ. 36.41 ರಿಂದ ಶೇ. 37.43 ಕ್ಕೆ ಏರಿದ್ದು, ಎನ್‌ಡಿಎ ಒಟ್ಟಾರೆ ಮತ ಗಳಿಕೆ ಶೇ.0.45 ರಷ್ಟು ಕಡಿಮೆಯಾಗಿದೆ.ಎಜಿಪಿ ಮತ ಗಳಿಕೆ ಶೇ. 8.31 ರಿಂದ ಶೇ. 6.46 ಕ್ಕೆ ಕುಸಿದಿದೆ. ಯುನೈಟೆಡ್ ಪೀಪಲ್ಸ್ ಲಿಬರಲ್ ಪಕ್ಷವು ಕೊಕ್ರಜಾರ್‌ನಲ್ಲಿ ತನ್ನ ಮೊದಲ ಲೋಕಸಭೆ ಸ್ಥಾನ ಗೆದ್ದುಕೊಂಡಿತು. ಕಾಂಗ್ರೆಸ್‌ ಮತ ಗಳಿಕೆ ಶೇ. 35.79 ರಿಂದ ಶೇ.37.48 ಕ್ಕೆ ಹೆಚ್ಚಿದೆ. ಧುಬ್ರಿಯನ್ನು ಮೂರು ಬಾರಿ ಪ್ರತಿನಿಧಿಸಿದ್ದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಸಂಸ್ಥಾಪಕ ಮತ್ತು ಜಮೀಯತ್ ಉಲೆಮಾ-ಎ-ಹಿಂದ್‌ನ ರಾಜ್ಯ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಅವರಿಗೆ ಸೋಲುಂ ಟಾಗಿದೆ. ಅವರನ್ನು ಕಾಂಗ್ರೆಸ್‌ನ ರಕಿಬುಲ್ ಹುಸೇನ್ ಅವರು 10.12 ಲಕ್ಷ ಅಂತರದಿಂದ(ೆರಡನೇ ಅತಿ ಹೆಚ್ಚುಅಂತರ) ಸೋಲಿಸಿದರು.

2014 ರಲ್ಲಿ ಮೂರು ಲೋಕಸಭೆ ಸ್ಥಾನಗಳನ್ನು ಗೆದ್ದಿದ್ದ ಎಐಯುಡಿಎಫ್, ಈ ಬಾರಿ ಶೂನ್ಯ ಸಂಪಾದನೆ ಮಾಡಿದೆ. ಮತ ಗಳಿಕೆ ಪ್ರಮಾಣ ಶೇ. 7.87 ರಿಂದ ಶೇ. 3.13ಕ್ಕೆ ಕುಸಿದಿದೆ. ಪಕ್ಷದ ಕರೀಂಗಂಜ್‌ನ ಅಭ್ಯರ್ಥಿ ಶಹಾಬುಲ್ ಇಸ್ಲಾಂ ಚೌಧರಿ, ಬಿಜೆಪಿಯ ಕೃಪಾನಾಥ್ ಮಲ್ಲಾ ಮತ್ತು ಕಾಂಗ್ರೆಸ್‌ನ ಹಫೀಜ್ ರಶೀದ್ ಅಹ್ಮದ್ ಚೌಧರಿ ನಂತರ ಮೂರನೇ ಸ್ಥಾನ ಪಡೆದರು. ಮಲ್ಲಾ 18,360 ಮತಗಳಿಂದ ಗೆದ್ದಿದ್ದಾರೆ. ಶಹಾಬುಲ್‌ 29,205 ಮತ ಗಳಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣವಾಗಿದ್ದಾರೆ.

ನಾಗಾಂವ್‌ನಲ್ಲಿ ಪಕ್ಷದ ಅಭ್ಯರ್ಥಿ ಅಮಿನುಲ್ ಇಸ್ಲಾಂ ಅಪಜಯ ಅನುಭವಿಸಿದರು. ಕಾಂಗ್ರೆಸ್‌ನ ಹಾಲಿ ಸಂಸದ ಪ್ರದ್ಯುತ್ ಬೊರ್ಡೊಲೊ ಯ್ ಅವರು ಬಿಜೆಪಿಯ ಸುರೇಶ್ ಬೋರಾ ಅವರನ್ನು 2.1 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. ಧುಬ್ರಿ ಮತ್ತು ಕರೀಮ್‌ಗಂಜ್‌ ನಂತಹ ಮುಸ್ಲಿಂ ಬಹುಸಂಖ್ಯಾತ ಸ್ಥಾನಗಳಲ್ಲಿ ಎಐಯುಡಿಎಫ್‌ನ ಮತ ಗಳಿಕೆ ಪ್ರಮಾಣ ಕುಸಿತವು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ಬೆಂಬಲ ಹೆಚ್ಚಳವನ್ನು ಸೂಚಿಸುತ್ತದೆ.

ಜೋರ್ಹತ್‌ನಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್ ಅವರು ಗಮನಾರ್ಹ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ಬಳಿಕ ಸ್ವಕ್ಷೇತ್ರ ಕಲಿಯಾಬೋರ್ ಅನ್ನು ಕಳೆದುಕೊಂಡಿದ್ದ ಅವರು, ಜೋರ್ಹತ್‌ ನಲ್ಲಿ ಬಿಜೆಪಿಯ ತಪನ್ ಗೊಗೊಯ್ ವಿರುದ್ಧ ಸ್ಪರ್ಧಿಸಿ, 1.4 ಲಕ್ಷ ಮತಗಳಿಂದ ಗೆಲುವು ಸಾಧಿಸಿದರು.

ರಾಜ್ಯದ ಹೊಸ ಪಕ್ಷ ಅಸ್ಸಾಂ ರಾಷ್ಟ್ರೀಯ ಪರಿಷತ್ (ಎಜೆಪಿ) ನ ಲುರಿಂಜ್ಯೋತಿ ಗೊಗೊಯ್ ಅವರು ದಿಬ್ರುಗಢದಿಂದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರನ್ನು ಸೋಲಿಸಲು ವಿಫಲರಾದರು. ಆದರೆ, ಲುರಿಂಜ್ಯೋತಿ ತೀವ್ರ ಹೋರಾಟ ನಡೆಸಿ, 4 ಲಕ್ಷಕ್ಕೂ ಅಧಿಕ ಮತ ಗಳಿಸಿದರು. ಆಪ್‌ ಅಭ್ಯರ್ಥಿ ಮನೋಜ್ ಧನೋವರ್, ಜಾತ್ಯತೀತ ಮತ್ತು ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಿದರು.

ಇಂಡಿಯ ಒಕ್ಕೂಟದ ಪಕ್ಷಗಳು ಒಟ್ಟಾಗಿ ಹೋರಾಡಿದ್ದರೆ, ಉತ್ತಮ ಪ್ರದರ್ಶನ ನೀಡಬಹುದಾದ ಇತರ ಕ್ಷೇತ್ರಗಳೂ ಇವೆ. ಉದಾಹರಣೆಗೆ, ಬಾರ್ಪೇಟಾದಲ್ಲಿ ಇಂಡಿಯ ಒಕ್ಕೂಟದ ಘಟಕಗಳಾದ ಕಾಂಗ್ರೆಸ್, ಸಿಪಿಎಂ ಮತ್ತು ಟಿಎಂಸಿ ಪ್ರತ್ಯೇಕವಾಗಿ ಸ್ಪರ್ಧಿಸಿದವು. ಇದರಿಂದ, ಎಜಿಪಿ ಅಭ್ಯರ್ಥಿ ಫಣಿಭೂಷಣ್ ಚೌಧರಿ ಅವರು 8.6 ಲಕ್ಷ ಮತಗಳಿಂದ ಗೆದ್ದರು.

ಕಾಂಗ್ರೆಸ್ ಅಭ್ಯರ್ಥಿ ಮೀರಾ ಬೋರ್ತಕೂರ್ ಗೋಸ್ವಾಮಿ ಪ್ರಬಲ ಪೈಪೋಟಿ ನೀಡಿದರೂ, ಬಿಜೆಪಿ ಗುವಾಹಟಿ ಕ್ಷೇತ್ರವನ್ನು ಉಳಿಸಿಕೊಂಡಿದೆ. ಅವರು ಬಿಜೆಪಿಯ ಬಿಜುಲಿ ಕಲಿತಾ ಮೇಧಿ ವಿರುದ್ಧ 2.5 ಲಕ್ಷ ಮತಗಳಿಂದ ಸೋತರು.

ಅರುಣಾಚಲ ಪ್ರದೇಶ (2 ಸ್ಥಾನ): ಅರುಣಾಚಲ ಪಶ್ಚಿಮದಿಂದ ಬಿಜೆಪಿಯ ಕಿರಣ್ ರಿಜಿಜು ಮತ್ತು ಅರುಣಾಚಲ ಪೂರ್ವದಿಂದ ಪಕ್ಷದ ರಾಜ್ಯಾಧ್ಯಕ್ಷ ತಾಪಿರ್ ಗಾವೊ ಆಯ್ಕೆಯಾಗಿದ್ದಾರೆ. ರಿಜಿಜು ಸಂಪುಟದಲ್ಲಿ ಸಚಿವರಾಗಿದ್ದರು. ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ನ ನಬಮ್ ತುಕಿ ಅವರು ಅರುಣಾಚಲ ಪಶ್ಚಿಮದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಪರಾಭವಗೊಂಡಿದ್ದಾರೆ.

ಮೇಘಾಲಯ (2 ಸ್ಥಾನ): 2023 ರ ವಿಧಾನಸಭೆ ಚುನಾವಣೆಯಲ್ಲಿ ತುರಾ ಕ್ಷೇತ್ರದಿಂದ ಗೆದ್ದ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ), ಕ್ಷೇತ್ರವನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಸಹೋದರಿ, ಸಂಸದೆ ಅಗಾಥಾ ಸಂಗ್ಮಾ ಅವರು ಕಾಂಗ್ರೆಸ್‌ನ ಸಲೇಂಗ್ ಸಂಗ್ಮಾ ವಿರುದ್ಧ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋತರು. ತುರಾ 1989-90ರ ಎರಡು ವರ್ಷ ಹೊರತುಪಡಿಸಿ, 1977 ರಿಂದ ಕಾನ್ರಾಡ್ ಕುಟುಂಬದೊಂದಿಗೆ ಇದ್ದ ಕ್ಷೇತ್ರ. ಕಾನ್ರಾಡ್ ಅವರ ತಂದೆ, ಮಾಜಿ ಲೋಕಸಭಾ ಸ್ಪೀಕರ್ ಪಿ.ಎ. ಸಂಗ್ಮಾ ಅವರು ಕಾಂಗ್ರೆಸ್, ಎನ್‌ಸಿಪಿ, ಟಿಎಂಸಿ ಮತ್ತು ಎನ್‌ಪಿಪಿ ಅಭ್ಯರ್ಥಿಯಾಗಿ ಹಲವು ವರ್ಷ ಪ್ರತಿನಿಧಿಸಿದ್ದರು. 1998ರ ನಂತರ ಮೊದಲ ಬಾರಿಗೆ ಈ ಕ್ಷೇತ್ರ ಕಾಂಗ್ರೆಸ್‌ಗೆ ಮರಳಿದೆ.

ರಾಜ್ಯದ ಇನ್ನೊಂದು ಲೋಕಸಭೆ ಕ್ಷೇತ್ರ ಶಿಲ್ಲಾಂಗ್‌, ಹೊಸ ಪ್ರಾದೇಶಿಕ ಘಟಕದ ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ (ವಿಪಿಪಿ) ಪಾಲಾಗಿದೆ. ಶಾಸಕ ಮತ್ತು ಹಿಲ್ ಸ್ಟೇಟ್ ಪೀಪಲ್ ಡೆಮಾಕ್ರಟಿಕ್ ಪಕ್ಷದ ಮಾಜಿ ಅಧ್ಯಕ್ಷ ಅರ್ಡೆಂಟ್ ಮಿಲ್ಲರ್ ಬಸಯಾವ್ಮೊಯಿಟ್ ನೇತೃತ್ವದಲ್ಲಿ ಈ ಪಕ್ಷವು ಕಳೆದ ವರ್ಷ ಕಣಕ್ಕೆ ಇಳಿದಿತ್ತು. 2009 ರಿಂದ ಈ ಕ್ಷೇತ್ರವನ್ನು ಉಳಿಸಿಕೊಂಡಿದ್ದ ಕಾಂಗ್ರೆಸ್ ನ ವಿನ್ಸೆಂಟ್ ಪಾಲಾ ಅವರು ವಿಪಿಪಿಯ ರಿಕಿ ಆಂಡ್ರ್ಯೂ ಸಿಂಗ್ಕಾನ್ ವಿರುದ್ಧ 3.7 ಲಕ್ಷ ಮತಗಳಿಂದ ಸೋಲು ಅನುಭವಿಸಿದರು.

ಮಣಿಪುರ (2 ಸ್ಥಾನ): ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ 2019ರಲ್ಲಿ ಒಳ ಮಣಿಪುರದಲ್ಲಿ ಬಿಜೆಪಿಯ ಆರ್‌.ಕೆ. ರಂಜನ್ ಸಿಂಗ್ ಹಾಗೂ ಹೊರ ಮಣಿಪುರದಲ್ಲಿ ಎನ್‌ಡಿಎ ಮಿತ್ರ ಪಕ್ಷ ನಾಗಾ ಪೀಪಲ್ಸ್ ಫ್ರಂಟ್‌ನ ಲೋರ್ಹೋ ಎಸ್. ಪಿಫೋಜ್ ವಿಜೇತರಾಗಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ಅಂಗೋಮ್ಚಾ ಬಿಮೋಲ್ ಅಕೋಯ್ಜಮ್ 1 ಲಕ್ಷಕ್ಕೂ ಹೆಚ್ಚು ಮತಗಳಿಂದ ಬಿಜೆಪಿಯಿಂದ ಕ್ಷೇತ್ರವನ್ನು ಕಸಿದುಕೊಂಡಿದ್ದಾರೆ. ಹೊರ ಮಣಿಪುರದಲ್ಲಿ ಎನ್‌ಡಿಎ ಮಿತ್ರಪಕ್ಷ ಎನ್‌ಪಿಎಫ್ ಅಭ್ಯರ್ಥಿ, ಕಾಂಗ್ರೆಸ್‌ನ ಆಲ್ಫ್ರೆಡ್ ಆರ್ಥರ್ ವಿರುದ್ಧ 65,000 ಮತಗಳಿಂದ ಸೋತರು. ರಾಹುಲ್ ಗಾಂಧಿಯವರ ಮಣಿಪುರ ಭೇಟಿ ಮತ್ತು ಆನಂತರ ರಾಜ್ಯದಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಆರಂಭಿಸಿದ್ದು ಕಾಂಗ್ರೆಸ್‌ ಗೆ ನೆರವಾಗಿದೆ.

ನಾಗಾಲ್ಯಾಂಡ್ (1 ಸ್ಥಾನ): ಎನ್‌ಡಿಎ ಅಂಗಪಕ್ಷವಾದ ಆಡಳಿತಾರೂಢ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪೀಪಲ್ಸ್ ಪಾರ್ಟಿ (ಎನ್‌ಡಿಪಿಪಿ), ಸೋಲುಂಡಿದೆ. 1999 ರ ನಂತರ ಕ್ಷೇತ್ರ ಕಾಂಗ್ರೆಸ್‌ಗೆ ಮರಳಿದೆ. ಎಸ್‌ಎಸ್ ಜಮೀರ್ ಸುಮಾರು 51,000 ಮತಗಳಿಂದ ಚುಂಬೆನ್ ಮರ್ರಿ ಅವರನ್ನು ಸೋಲಿಸಿದರು.

ನಾಗಾಲ್ಯಾಂಡ್ ಮತ್ತು ಮೇಘಾಲಯದ ಬಗೆಹರಿಯದ ಜನಾಂಗೀಯ ಸಮಸ್ಯೆಗಳು ಬಿಜೆಪಿ ಹಿನ್ನಡೆಗೆ ಕಾರಣವಾಗಿರಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸಿ, ಆರು ಜಿಲ್ಲೆಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಮತದಾರರು ಮತದಾನ ಬಹಿಷ್ಕರಿಸಿದ್ದರು.

ತ್ರಿಪುರ (2 ಸ್ಥಾನ): ಬಿಜೆಪಿಯ ಕೃತಿ ದೇವಿ ದೆಬ್ಬರ್ಮನ್ ತ್ರಿಪುರ ಪೂರ್ವ ಕ್ಷೇತ್ರದಲ್ಲಿ 4.8 ಲಕ್ಷ ಮತಗಳ ಅಂತರದಿಂದ ಹಾಗೂ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದೇಬ್ ತ್ರಿಪುರಾ ಪಶ್ಚಿಮದಲ್ಲಿ 6.1 ಲಕ್ಷ ಮತಗಳಿಂದ ಗೆದ್ದಿದ್ದಾರೆ. ತಿಪ್ರಾ ಮೋಥಾ ಸಂಘಟನೆ ಮುಖ್ಯಸ್ಥ ಪ್ರದ್ಯೋತ್ ದೆಬ್ಬರ್ಮಾ ಅವರ ಸಹೋದರಿ ಕೃತಿ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಲಾಗಿತ್ತು. ತ್ರಿಪುರ ಪೂರ್ವ ಕ್ಷೇತ್ರದಲ್ಲಿ ಬೆಂಬಲ ನೀಡಿದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಪರಿಶೀಲಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಬಿಜೆಪಿ ಬಹುಮತ ಸಾಧಿಸದ ಕಾರಣ ಈ ಬೇಡಿಕೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮಿಜೋರಾಂ (1 ಸ್ಥಾನ): ಕಳೆದ ವರ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ಝಡ್‌ ಪಿಎಂ) ರಾಜ್ಯದ ಏಕೈಕ ಲೋಕಸಭೆ ಸ್ಥಾನ ಗೆದ್ದುಕೊಂಡಿದೆ. ರಿಚರ್ಡ್ ವನಲಮಂಗೈಹಾ ಅವರು ಪಕ್ಷದ ಸಂಸದರಾಗಿದ್ದಾರೆ. ಮಿಜೋರಾಂ ಮುಖ್ಯಮಂತ್ರಿ ಮತ್ತು ಝಡ್‌ಪಿಎಂ ಮುಖ್ಯಸ್ಥ ಲಾಲ್ದುಹೋಮ, ತಮ್ಮ ಪಕ್ಷ ಎನ್‌ಡಿಎ ಅಥವಾ ಇಂಡಿಯ ಒಕ್ಕೂಟದ ಭಾಗವಾಗುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಸಿಕ್ಕಿಂ (1 ಸ್ಥಾನ): ಎನ್‌ಡಿಎ ಘಟಕವಾದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಅಭ್ಯರ್ಥಿ, ಹಾಲಿ ಸಂಸದ ಇಂದ್ರ ಹ್ಯಾಂಗ್ ಸುಬ್ಬ ಗೆಲುವು ಸಾಧಿಸಿದ್ದಾರೆ. ಎರಡನೇ ಸ್ಥಾನ ಪಡೆದವರು ಸಿಟಿಜನ್ ಆಕ್ಷನ್ ಪಾರ್ಟಿ-ಸಿಕ್ಕಿಂನ ಭಾರತ್ ಬಾಸ್ನೆಟ್.

Read More
Next Story