ವಿದೇಶಿ ಯುವತಿಯ ತೊಡೆಯಲ್ಲಿ ಜಗನ್ನಾಥನ ಹಚ್ಚೆ; ಟ್ಯಾಟೂ ಪಾರ್ಲರ್​ ಮಾಲೀಕ, ಕಲಾವಿದ ಬಂಧನ ​
x

ವಿದೇಶಿ ಯುವತಿಯ ತೊಡೆಯಲ್ಲಿ ಜಗನ್ನಾಥನ ಹಚ್ಚೆ; ಟ್ಯಾಟೂ ಪಾರ್ಲರ್​ ಮಾಲೀಕ, ಕಲಾವಿದ ಬಂಧನ ​

ವರದಿಗಳ ಪ್ರಕಾರ, ಯುವತಿ ಎನ್​ಜಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಇಟಲಿಯ ಪ್ರಜೆ. ಪೊಲೀಸರು ಆಕೆಯ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.


ವಿದೇಶಿ ಯುವತಿಯೊಬ್ಬಳ ತೊಡೆಯ ಮೇಲೆ ಜಗನ್ನಾಥನ ಟ್ಯಾಟೂ ಬಿಡಿಸಿದ ಆರೋಪದಲ್ಲಿ ಭುವನೇಶ್ವರದ ಟ್ಯಾಟೂ ಪಾರ್ಲರ್ ಮಾಲೀಕ ಮತ್ತು ಕಲಾವಿದನನ್ನು ಸಾಹಿದ್ ನಗರ ಪೊಲೀಸರು ಸೋಮವಾರ (ಮಾರ್ಚ್ 3) ಬಂಧಿಸಿದ್ದಾರೆ. ಭಕ್ತರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿಯ ತೊಡೆಯಲ್ಲಿ ಚಿತ್ರ ಬಿಡಿಸಿದ ವಿಡಿಯೊ ವೈರಲ್ ಆಗಿತ್ತು.

ಟ್ಯಾಟೂ ಪಾರ್ಲರ್ ಮಾಲೀಕ ರಾಕಿ ರಂಜನ್ ಬಿಸೋಯ್ ಮತ್ತು ಕಲಾವಿದ ಅಶ್ವಿನಿ ಕುಮಾರ್ ಪ್ರಧಾನ್ ಬಂಧಿತರು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299 (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಕೇಸ್​​ ದಾಖಲಿಸಲಾಗಿದೆ.

ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಪ್ರಕಾರ, ಕಲಾವಿದ ಅಶ್ವಿನಿ ಕುಮಾರ್ ತಪ್ಪೊಪ್ಪಿಕೊಂಡಿದ್ದು, ವಿದೇಶಿ ಯುವತಿ ಒತ್ತಾಯಪೂರ್ವಕವಾಗಿ ಹಚ್ಚೆ ಹಾಕಿಸಿಕೊಂಡಿದ್ದಾಳೆ ಎಂದು ಹೇಳಿದ್ದಾನೆ. ಭಗವಾನ್ ಜಗನ್ನಾಥನ ಚಿತ್ರ ಬೇಡ ಎಂದರೂ ಕೇಳಲಿಲ್ಲ ಎಂದು ಹೇಳಿದ್ದಾನೆ.

ಹಿಂದೂಪರ ಸಂಘಟನೆಗಳ ಪ್ರತಿಭಟನೆ

ಜಗನ್ನಾಥನ ಹಚ್ಚೆ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ಜಗನ್ನಾಥನ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ವರದಿಗಳ ಪ್ರಕಾರ, ಯುವತಿ ಎನ್​ಜಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಇಟಲಿಯ ಪ್ರಜೆ. ಪೊಲೀಸರು ಆಕೆಯ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ

ಯುವತಿ ಮತ್ತು ಪಾರ್ಲರ್ ಮಾಲೀಕ ಸಾಮಾಜಿಕ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸಿದ್ದಾರೆ. ಅವರಿಬ್ಬರೂ ಕೈಗಳನ್ನು ಜೋಡಿಸಿ ಬಿಟ್ಟುಬಿಡಿ ಎಂದು ಕೋರಿದ್ದಾರೆ.

"ನಾನು ಭಗವಾನ್ ಜಗನ್ನಾಥನ ನಿಜವಾದ ಭಕ್ತೆ. ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತೇನೆ. ನಾನು ತಪ್ಪು ಮಾಡಿದ್ದೇನೆ ಮತ್ತು ಇದಕ್ಕಾಗಿ ನನ್ನನ್ನು ಕ್ಷಮಿಸಿ" ಎಂದು ಯುವತಿ ವಿಡಿಯೊದಲ್ಲಿ ಹೇಳಿದ್ದಾರೆ.

ಭಗವಾನ್ ಜಗನ್ನಾಥನ ಹಚ್ಚೆಯನ್ನು ಯಾರಿಗೂ ಕಾಣದ ಜಾಗದಲ್ಲಿ ಹಾಕುವಂತೆ ಕೋರಿದ್ದೆ. ವಿವಾದ ಮಾಡುವ ಉದ್ದೇಶ ನನಗೆ ಇರಲಿಲ್ಲ. ಹಚ್ಚೆ ಹಾಕಿದ ತ್ವಚೆಯ ಭಾಗದ ಗಾಯ ವಾಸಿಯಾದ ಬಳಿಕ ತೆಗೆದು ಹಾಕುತ್ತೇನೆ ಎಂದು ಆಕೆ ಹೇಳಿದ್ದಾಳೆ.

Read More
Next Story