ಮುಂಬೈನ ಥಾಣೆಯಲ್ಲಿ ಮೊಸರು ಕುಡಿಕೆ ವೇಳೆ ಅವಘಡ; ಇಬ್ಬರ ಸಾವು, 117 ಮಂದಿಗೆ ಗಾಯ
x

ಮುಂಬೈನ ಥಾಣೆಯಲ್ಲಿ 'ಮೊಸರು ಕುಡಿಕೆ' ವೇಳೆ ಅವಘಡ; ಇಬ್ಬರ ಸಾವು, 117 ಮಂದಿಗೆ ಗಾಯ

ಶನಿವಾರ ರಾತ್ರಿ 9 ಗಂಟೆಯವರೆಗಿನ ವರದಿಯ ಪ್ರಕಾರ, ಮುಂಬೈ ಒಂದರಲ್ಲೇ 95 'ಗೋವಿಂದ'ರು (ಉತ್ಸವದಲ್ಲಿ ಭಾಗವಹಿಸುವವರು) ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.


ಮುಂಬೈ ಮತ್ತು ಪಕ್ಕದ ಥಾಣೆ ನಗರದಲ್ಲಿ ಶನಿವಾರ ನಡೆದ 'ಮೊಸರು ಕುಡಿಕೆ' ಉತ್ಸವದ ವೇಳೆ ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ ಇಬ್ಬರು ಮೃತಪಟ್ಟು, 117ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆದ ಈ ಉತ್ಸವದಲ್ಲಿ, ಮಾನವ ಪಿರಮಿಡ್​​ಗಳನ್ನು ರಚಿಸಿ ಮೊಸರು ತುಂಬಿದ ಮಡಿಕೆಗಳನ್ನು ಒಡೆಯುವಾಗ ಈ ದುರ್ಘಟನೆಗಳು ಸಂಭವಿಸಿವೆ.

ಮುಂಬೈನ ಅಂಧೇರಿ ಪ್ರದೇಶದಲ್ಲಿ, ಗೋವಿಂದ ಪಥಕದ ಸದಸ್ಯನಾಗಿದ್ದ ರೋಹನ್ ಮೋಹನ್ ಮಾಳ್ವಿ ಎಂಬುವರು ಟೆಂಪೋದಲ್ಲಿ ಕುಳಿತಿದ್ದಾಗಲೇ ಕುಸಿದುಬಿದ್ದು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ, ಈಶಾನ್ಯ ಮುಂಬೈನ ಮಾನ್ಖುರ್ದ್​​ನಲ್ಲಿ ಜಗಮೋಹನ್ ಶಿವಕಿರಣ್ ಚೌಧರಿ (32) ಎಂಬುವವರು, ತಮ್ಮ ಮನೆಯ ಮೊದಲ ಮಹಡಿಯ ಕಿಟಕಿ ಬಳಿ 'ಮೊಸರು ಕುಡಿಕೆ'ಯನ್ನು ಕಟ್ಟುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ನೂರಕ್ಕೂ ಹೆಚ್ಚು ಮಂದಿಗೆ ಗಾಯ

ಶನಿವಾರ ರಾತ್ರಿ 9 ಗಂಟೆಯವರೆಗಿನ ವರದಿಯ ಪ್ರಕಾರ, ಮುಂಬೈ ಒಂದರಲ್ಲೇ 95 'ಗೋವಿಂದ'ರು (ಉತ್ಸವದಲ್ಲಿ ಭಾಗವಹಿಸುವವರು) ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರಲ್ಲಿ 76 ಮಂದಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದ್ದು, 19 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಠಾಣೆ ನಗರದಲ್ಲಿ, 22 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 17 ಜನರನ್ನು ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ಗಂಭೀರ ಗಾಯವಾದ 18 ವರ್ಷದ ಯುವಕನೊಬ್ಬನನ್ನು ಮುಂಬೈನ ಜೆ.ಜೆ. ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಗಾಯಾಳುಗಳಲ್ಲಿ 5 ರಿಂದ 10 ವರ್ಷದೊಳಗಿನ ಮಕ್ಕಳೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಕೀಯ ಮತ್ತು ಸಿನಿಮಾ ರಂಗದ ಮೆರುಗು

ಉತ್ಸವವು ರಾಜಕೀಯವಾಗಿಯೂ ಪ್ರಾಮುಖ್ಯತೆ ಪಡೆದಿತ್ತು. ಶಿಂಧೆ ಬಣದ ಶಿವಸೇನೆ, ಉದ್ಧವ್ ಠಾಕ್ರೆ ಬಣದ ಶಿವಸೇನೆ (ಯುಬಿಟಿ) ಹಾಗೂ ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಪಕ್ಷಗಳು ಮರಾಠಿ ಮತದಾರರನ್ನು ಸೆಳೆಯಲು ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಠಾಣೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಬಾಲಿವುಡ್ ನಟರಾದ ಗೋವಿಂದ, ಚಂಕಿ ಪಾಂಡೆ ಮತ್ತು ಸುನೀಲ್ ಶೆಟ್ಟಿ ಭಾಗವಹಿಸಿ ಸಂಭ್ರಮಕ್ಕೆ ಮೆರುಗು ನೀಡಿದರು. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೂ ಸಹ ನಟ ಗೋವಿಂದ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

Read More
Next Story