ದೇಶವು ʼದೊಡ್ಡ ಬದಲಾವಣೆʼಯತ್ತ ಸಾಗುತ್ತಿದೆ: 17ನೇ ಲೋಕಸಭೆಯಲ್ಲಿ ಮೋದಿ ಭಾಷಣ
x
ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ದೇಶವು ʼದೊಡ್ಡ ಬದಲಾವಣೆʼಯತ್ತ ಸಾಗುತ್ತಿದೆ: 17ನೇ ಲೋಕಸಭೆಯಲ್ಲಿ ಮೋದಿ ಭಾಷಣ

ಏಕರೂಪ ಸಂವಿಧಾನದ ತಲೆಮಾರುಗಳ ಕನಸು ನನಸಾಗಿದೆ ಎಂದ ಪ್ರಧಾನಿ ಮೋದಿ


17ನೇ ಲೋಕಸಭೆಯ ಐದು ವರ್ಷಗಳ ಅವಧಿಯು ದೇಶವನ್ನು 'ದೊಡ್ಡ ಬದಲಾವಣೆ'ಯತ್ತ ವೇಗವಾಗಿ ಮುನ್ನಡೆಸುವ ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಕಾಲವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಕೇಂದ್ರ ಬಜೆಟ್‌ ಅಧಿವೇಶನದ ಕೊನೇ ದಿನ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 21ನೇ ಶತಮಾನದ ಭಾರತಕ್ಕೆ ಭದ್ರ ಬುನಾದಿ ಹಾಕುವಂತಹ ಸುಧಾರಣೆಯನ್ನು ಕಳೆದ ಐದು ವರ್ಷಗಳ ಅವಧಿಯಲ್ಲಿ ಕೈಗೊಳ್ಳಲಾಗಿದೆ ಎಂದಿದ್ದಾರೆ.

'ವೇಗದ ಗತಿಯಲ್ಲಿ ದೊಡ್ಡ ಬದಲಾವಣೆಗಳು'

‘’ದೇಶವು ಭಾರಿ ಬದಲಾವಣೆಯ ಕಡೆಗೆ ಅತ್ಯಂತ ವೇಗವಾಗಿ ಸಾಗುತ್ತಿದ್ದು, ಸದನದ ಎಲ್ಲ ಸದಸ್ಯರು ಅದಕ್ಕೆ ಪೂರಕವಾದ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಜನರು ಶತಮಾನಗಳಿಂದ ಕಾಯುತ್ತಿದ್ದಂತಹ ಕೆಲಸಗಳನ್ನು ಸಂಪೂರ್ಣಗೊಳಿಸಲಾಗಿದೆ’’ ಎಂದು ಹೇಳಿದ್ದಾರೆ.

ಏಕರೂಪದ ಸಂವಿಧಾನಕ್ಕಾಗಿ ಜನರು ತಲೆಮಾರುಗಳಿಂದ ಕನಸು ಕಂಡಿದ್ದರು. ಸಂವಿಧಾನ 370ನೇ ವಿಧಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮೂಲಕ ಸದನವು ಆ ಕನಸನ್ನು ಸಾಕಾರಗೊಳಿಸಿದೆ. ಇಂತಹ ಹಲವು ಪ್ರಮುಖ ನಿರ್ಧಾರಗಳನ್ನು 17ನೇ ಲೋಕಸಭೆ ಅವಧಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

'ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ ಮತ್ತು ದೇಶವು ಸರಿಯಾದ ಮಾರ್ಗದರ್ಶನ ಮಾಡಿದೆ' ಎಂದಿರುವ ಅವರು, 'ಐದು ವರ್ಷಗಳ ಅವಧಿಯು ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯಿಂದ ಕೂಡಿತ್ತು. 17ನೇ ಲೋಕಸಭೆಗೆ ಜನರ ಆಶೀರ್ವಾದ ಸಿಗಲಿದೆ' ಎಂದು ಹೇಳಿಕೊಂಡಿದ್ದಾರೆ.

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೂ ಧನ್ಯವಾದ ಹೇಳಿದ ಮೋದಿ, 'ಏನೇ ಆಗಲಿ, ನಿಮ್ಮ ಮುಖದ ಮೇಲೆ ನಗು ಇರುತ್ತಿತ್ತು. ಈ ಸದನವನ್ನು ನಿಷ್ಪಕ್ಷಪಾತವಾಗಿ ಮುನ್ನಡೆಸಿದ್ದೀರಿ. ಅದಕ್ಕಾಗಿ ನಿಮ್ಮನ್ನು ಶ್ಲಾಘಿಸುತ್ತೇನೆ. ಕೋಪ ಮತ್ತು ಆರೋಪಗಳ ಸಂದರ್ಭಗಳು ಎದುರಾದಾಗಲೂ ಶಾಂತಚಿತ್ತದಿಂದ, ತುಂಬಾ ಪ್ರಬುದ್ಧವಾಗಿ ಸದನ ನಡೆಸಿಕೊಟ್ಟಿದ್ದೀರಿ' ಎಂದು ಬಿರ್ಲಾ ಅವರನ್ನು ಮೋದಿ ಶ್ಲಾಘಿಸಿದರು.

ಸೆಂಗೋಲ್ ಸ್ಥಾಪನೆ

ಕೋವಿಡ್‌ ಅವಧಿಯನ್ನು ಉಲ್ಲೇಖಿಸಿದ ಪ್ರಧಾನಿ, ಕಳೆದ ಐದು ವರ್ಷಗಳಲ್ಲಿ ದೇಶವು ಅತಿದೊಡ್ಡ ಸಂಕಷ್ಟಕ್ಕೆ ಸಾಕ್ಷಿಯಾಯಿತು. ಅಂತಹ ಸಂದರ್ಭದಲ್ಲಿಯೂ ಕಲಾಪಗಳಿಗೆ ಅಡ್ಡಿಯಾದಂತೆ, ಸದನದ ಘನತೆಗೆ ಕುಂದುಂಟಾದಂತೆ ವ್ಯವಸ್ಥೆ ಮಾಡಿದರು ಎಂದು ಬಿರ್ಲಾ ಅವರನ್ನು ಹೊಗಳಿದ್ದಾರೆ.

ಹೊಸ ಸಂಸತ್ತಿನ ನಿರ್ಮಾಣ ಅಗತ್ಯತೆಯ ಬಗ್ಗೆ ಹಿಂದೆ ಮಾತನಾಡುತ್ತಿದ್ದರು. ಆದರೆ, ಬಿರ್ಲಾ ಅವರು ಸ್ಪಷ್ಟ ನಿರ್ಧಾರ ಕೈಗೊಳ್ಳುವ ಮೂಲಕ ಈ ಲೋಕಸಭೆ ಅವಧಿಯಲ್ಲಿ ಕಾರ್ಯರೂಪಕ್ಕೆ ಬರುವಂತೆ ಮಾಡಿದರು. ಅವರ ನಾಯಕತ್ವದಲ್ಲಿಯೇ ಐತಿಹಾಸಿಕ 'ಸೆಂಗೋಲ್‌' ಅನ್ನು ಸದನದಲ್ಲಿ ಪ್ರತಿಷ್ಠಾಪಿಸಲಾಯಿತು ಎಂದೂ ಇದೇ ವೇಳೆ ಹೇಳಿದ್ದಾರೆ.

ಇದೇ ವೇಳೆ, ಶೇ 97ರಷ್ಟು ಫಲಪ್ರಿದವಾಗಿರುವ 17ನೇ ಲೋಕಸಭೆ ಅವಧಿಯ ಅಂತ್ಯದತ್ತ ಸಾಗುತ್ತಿದ್ದೇವೆ. 18ನೇ ಲೋಕಸಭೆಯು ಶೇ 100ಕ್ಕಿಂತ ಹೆಚ್ಚು ಫಲಪ್ರಭದವಾಗುವಂತೆ ನಾವೆಲ್ಲ ನಿರ್ಣಯ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರವಾಗಿದ್ದನ್ನು ಮತ್ತು ತ್ವರಿತ ತ್ರಿವಳಿ ತಲಾಖ್ ರದ್ದುಪಡಿಸಿದ್ದನ್ನು ಮೋದಿ ಶ್ಲಾಘಿಸಿದರು.

Read More
Next Story