ದೆಹಲಿ ಆಶ್ರಯತಾಣದಲ್ಲಿ 14 ಸಾವು; ಸಚಿವೆಯಿಂದ ಕ್ರಮದ ಭರವಸೆ
x

ದೆಹಲಿ ಆಶ್ರಯತಾಣದಲ್ಲಿ 14 ಸಾವು; ಸಚಿವೆಯಿಂದ ಕ್ರಮದ ಭರವಸೆ


ʻಆಶಾಕಿರಣ ಆಶ್ರಯತಾಣದಲ್ಲಿ ಜುಲೈನಲ್ಲಿ ಸಾವಿಗೀಡಾದ 14 ಮಂದಿಯಲ್ಲಿ ಕೆಲವರಿಗೆ ಬೇರೆ ಆರೋಗ್ಯ ಸಮಸ್ಯೆಗಳಿದ್ದವು. ಆದರೆ, ಯಾವುದೇ ನಿರ್ಲಕ್ಷ್ಯ ಕಂಡುಬಂದರೆ, ತಪ್ಪಿತಸ್ಥರಿಗೆ ಶಿಕ್ಷೆ ತಪ್ಪದುʼ ಎಂದು ದೆಹಲಿ ಕಂದಾಯ ಸಚಿವೆ ಅತಿಶಿ ಹೇಳಿದರು.

ದೆಹಲಿ ಸರ್ಕಾರವು ಮಾನಸಿಕ ಅಸ್ವಸ್ಥರ ಆಶ್ರಯತಾಣʻಆಶಾಕಿರಣʼದಲ್ಲಿ ಸಂಭವಿಸಿದ ಸಾವಿನ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. ಜನವರಿಯಲ್ಲಿ ಮೂವರು, ಫೆಬ್ರವರಿ ಇಬ್ಬರು, ಮಾರ್ಚ್‌ ಮೂವರು, ಏಪ್ರಿಲ್‌ ಇಬ್ಬರು, ಮೇ ಒಬ್ಬರು ಮತ್ತು ಜೂನ್‌ನಲ್ಲಿ ಮೂವರು ಸಾವನ್ನಪ್ಪಿದ್ದರು.

ಈ ಆಶ್ರಯತಾಣವನ್ನು ದೆಹಲಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತದೆ. ಸಚಿವ ರಾಜ್‌ಕುಮಾರ್‌ ಆನಂದ್‌ ರಾಜೀನಾಮೆ ನೀಡಿದ ಬಳಿಕ ಇಲಾಖೆಗೆ ಮುಖ್ಯಸ್ಥರು ಇಲ್ಲದಂತಾಗಿದೆ. ಜೊತೆಗೆ, ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಲಾಖೆಯ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಲ್ಲ.

ಗಂಭೀರ ವಿಷಯ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅತಿಶಿ, ʻಆಶಾಕಿರಣದಲ್ಲಿ 980 ನಿವಾಸಿಗಳು ಮತ್ತು 450 ಶುಶ್ರೂಷಕರು ಇದ್ದಾರೆ. ವಿವಿಧ ರೀತಿಯ ಬೌದ್ಧಿಕ ಅಸಾಮರ್ಥ್ಯಗಳಿರುವವರು ಇಲ್ಲಿದ್ದಾರೆ. ಇಂಥವರು ಸಹವರ್ತಿ ಕಾಯಿಲೆಗಳನ್ನು ಹೊಂದಿರುತ್ತಾರೆ. ಜುಲೈನಲ್ಲಿ 14 ಕೈದಿಗಳ ಸಾವು ಗಂಭೀರ ವಿಷಯ,ʼ ಎಂದರು.

ಮೃತಪಟ್ಟವರಲ್ಲಿ 13 ಮಂದಿ ವಯಸ್ಕರು ಮತ್ತು ಒಬ್ಬರು ಅಪ್ರಾಪ್ತ ವಯಸ್ಕರು. ʻಮೃತರ ಶವಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ. ಜೂನ್‌ ನಲ್ಲಿ ಸಾವಿಗೀಡಾದವರಲ್ಲಿ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಪ್ರಾಥಮಿಕ ವರದಿ 24 ಗಂಟೆಗಳಲ್ಲಿ ಬರಲಿದೆ. ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದರೆ, ಅವರ ವಿರುದ್ಧ ಪೊಲೀಸ್ ವಿಚಾರಣೆ ಆರಂಭಿಸಲಾಗುವುದು,ʼ ಎಂದು ಹೇಳಿದರು.

Read More
Next Story