ಗಡ್ಚಿರೋಲಿ ಚಕಮಕಿ: 12 ನಕ್ಸಲರ ಹತ್ಯೆ
x

ಗಡ್ಚಿರೋಲಿ ಚಕಮಕಿ: 12 ನಕ್ಸಲರ ಹತ್ಯೆ


ಗಡ್ಚಿರೋಲಿ, ಜು.18 - ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಮೂವರು ಹಿರಿಯ ಕಾರ್ಯಕರ್ತರು ಸೇರಿದಂತೆ 12 ನಕ್ಸಲರ ತಲೆ ಮೇಲೆ 86 ಲಕ್ಷ ರೂ. ನಗದು ಬಹುಮಾನ ಇತ್ತು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಯಶಸ್ವಿ ಕಾರ್ಯಾಚರಣೆಯಿಂದ ಕೊರ್ಚಿ-ತಿಪಗಡ್ ಮತ್ತು ಚಟಗಾಂವ್-ಕಸನ್ಸೂರ್ ದಳಗಳನ್ನು ನಾಶಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಛತ್ತೀಸ್‌ಗಢದ ಗಡಿಯಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಐವರು ಮಹಿಳೆಯರು ಸೇರಿದಂತೆ 12 ನಕ್ಸಲರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮಧ್ಯಾಹ್ನ ಪ್ರಾರಂಭವಾದ ಗುಂಡಿನ ಚಕಮಕಿ ಸುಮಾರು ಆರು ಗಂಟೆ ಕಾಲ ನಡೆಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ʻಕೊರ್ಚಿ-ತಿಪಗಡ್ ಮತ್ತು ಚಟಗಾಂವ್-ಕಸನ್ಸೂರ್ ಜಂಟಿ ಸ್ಥಳೀಯ ದಳ(ಎಲ್‌ಒಎಸ್‌)ದ 12 ರಿಂದ 15 ಸದಸ್ಯರು ವಂಡೋಲಿ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ವಿಧ್ವಂಸಕ ಚಟುವಟಿಕೆ ನಡೆಸುವ ಉದ್ದೇಶದಿಂದ ಸೇರಿದ್ದರು.ನಕ್ಸಲರು ಹುತಾತ್ಮರ ಸಪ್ತಾಹ (ಜುಲೈ 28 ಮತ್ತು ಆಗಸ್ಟ್ 3 ರ ನಡುವೆ) ಆಚರಿಸುತ್ತಾರೆ,ʼ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗಡ್‌ಚಿರೋಲಿ ಕಚೇರಿ ಹೊರಡಿಸಿದ ಪ್ರಕಟಣೆ ತಿಳಿಸಿದೆ.

ʻಉಪ ಪೊಲೀಸ್ ವರಿಷ್ಠಾಧಿಕಾರಿ (ಕಾರ್ಯಾಚರಣೆ) ವಿಶಾಲ್ ನಾಗರಗೋಜೆ ನೇತೃತ್ವದ ಏಳು ಘಟಕಗಳನ್ನು ಶೋಧ ಕಾರ್ಯಾಚರಣೆಗೆ ಕಳುಹಿಸಲಾಯಿತು. ಮಾವೋವಾದಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಸಿ-60 ತಂಡ ತೀವ್ರವಾಗಿ ಪ್ರತಿಕ್ರಿಯಿಸಿತು.ಇದರಿಂದ ಮಾವೋವಾದಿಗಳು ಪಲಾಯನ ಮಾಡಿದರು,ʼ ಎಂದು ಎಸ್ಪಿ ನೀಲೋತ್ಪಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ʻನಂತರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಏಳು ಪುರುಷ ಮತ್ತು ಐದು ಮಹಿಳಾ ಮಾವೋವಾದಿಗಳ ಶವ ಸಿಕ್ಕಿತು. ಏಳು ಸ್ವಯಂಚಾಲಿತ ಶಸ್ತ್ರ, ಮೂರು ಎಕೆ 47 ರೈಫಲ್‌, ಎರಡು ಐಎನ್‌ಎಸ್‌ಎಎಸ್ ರೈಫಲ್‌, ಒಂದು ಕಾರ್ಬೈನ್ ಗನ್ ಮತ್ತು ಒಂದು ಸ್ವಯಂ ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್), ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ,ʼ ಎಂದು ಎಸ್ಪಿ ಹೇಳಿದರು.

ʻ12 ಮೃತರ ತಲೆ ಮೇಲೆ 86 ಲಕ್ಷ ರೂ.ಬಹುಮಾನ ಇತ್ತು.ಯೋಗೇಶ್ ತುಳವಿ ಅಲಿಯಾಸ್ ನರೇಂದ್ರ (36), ವಿಶಾಲ್ ಅತ್ರಾಮ್ ಅಲಿಯಾಸ್ ಲಕ್ಷ್ಮಣ್ (43) ಮತ್ತು ಪ್ರಮೋದ್ ಕಚ್ಲಾಮಿ (31), ಮಹಾರು ಗಾವಡೆ (31), ಅನಿಲ್ ದರ್ರೋ (28), ಸರಿತಾ ಪರ್ಸಾ (37), ರಜ್ಜೋ ಗಾವಡೆ (35), ವಿಜ್ಜು, ಚಂದಾ ಪೊದ್ಯಮ್, ಸೀತಾ ಹಾಕ್, ರೋಜಾ ಮತ್ತು ಸಾಗರ್ ಹತ್ಯೆಯಾದವರು. 2021 ರಿಂದ ಗಡ್ಚಿರೋಲಿಯಲ್ಲಿ 80 ಮಾವೋವಾದಿಗಳನ್ನು ತಟಸ್ಥಗೊಳಿಸಲಾಗಿದೆ, 102 ಮಾವೋವಾದಿಗಳನ್ನು ಬಂಧಿಸಲಾಗಿದೆ ಮತ್ತು 29 ಮಂದಿ ಶರಣಾಗಿದ್ದಾರೆ ಎಂದು ನೀಲೋತ್ಪಲ್ ಹೇಳಿದರು.

Read More
Next Story