
ಮ್ಯಾರಥಾನ್ ಓಟಗಾರ ಫೌಜಾ ಸಿಂಗ್
ಶತಾಯುಷಿ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ವಾಹನ ಡಿಕ್ಕಿಯಾಗಿ ನಿಧನ
ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಭೋಗಪುರದಿಂದ ಬರುತ್ತಿದ್ದ ಕಾರು ಫೌಜಾ ಸಿಂಗ್ ಅವರಿಗೆ ಡಿಕ್ಕಿ ಹೊಡೆದಿದೆ. ಅವರಿಗೆ ತಲೆಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಸಂಜೆ ನಿಧನರಾದರು.
2012ರ ಲಂಡನ್ ಒಲಿಂಪಿಕ್ಸ್‌ನ ಕ್ರೀಡಾಜ್ಯೋತಿಧಾರಿ, 114 ವರ್ಷದ ಅನುಭವಿ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಅವರು ಪಂಜಾಬ್‌ನ ಜಲಂಧರ್ ಜಿಲ್ಲೆಯ ತಮ್ಮ ಹುಟ್ಟೂರು ಬಯಾಸ್‌ನಲ್ಲಿ ನಿನ್ನೆ (ಸೋಮವಾರ) ವಾಕಿಂಗ್ ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಿಧನರಾಗಿದ್ದಾರೆ.
ಪಂಜಾಬ್‌ನ ಮಾಜಿ ರಾಜ್ಯ ಮಾಹಿತಿ ಆಯುಕ್ತರೂ ಆಗಿರುವ ಕುಶ್ವಂತ್ ಸಿಂಗ್, ಫೌಜಾ ಸಿಂಗ್ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಕುಶ್ವಂತ್ ಸಿಂಗ್ ಅವರು ಫೌಜಾ ಸಿಂಗ್ ಅವರ ಜೀವನಚರಿತ್ರೆಯನ್ನು 'ದಿ ಟರ್ಬನೆಡ್ ಟೊರ್ನಾಡೋ' ಎಂಬ ಶೀರ್ಷಿಕೆಯಲ್ಲಿ ಬರೆದಿದ್ದರು. ಜಲಂಧರ್ ಪೊಲೀಸ್ ಅಧಿಕಾರಿಯೊಬ್ಬರು ಕೂಡ ಫೌಜಾ ಸಿಂಗ್ ಅವರ ಸಾವನ್ನು ದೃಢಪಡಿಸಿದ್ದು, ಅವರು ಬಯಾಸ್ ಗ್ರಾಮದಲ್ಲಿ ವಾಕಿಂಗ್ ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ. ಫೌಜಾ ಸಿಂಗ್ ಅವರಿಗೆ ತಲೆಗೆ ಗಾಯಗಳಾಗಿದ್ದು, ಸಂಜೆ ವೇಳೆಗೆ ನಿಧನರಾದರು.
"ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಭೋಗಪುರದಿಂದ ಬರುತ್ತಿದ್ದ ಕಾರು ಫೌಜಾ ಸಿಂಗ್ ಅವರಿಗೆ ಡಿಕ್ಕಿ ಹೊಡೆದಿದೆ. ಅವರಿಗೆ ತಲೆಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಸಂಜೆ ನಿಧನರಾದರು" ಎಂದು ಜಲಂಧರ್‌ನ ಆದಂಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹರ್ದೇವ್‌ಪ್ರೀತ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ. ನಿರ್ಲಕ್ಷ್ಯದ ಚಾಲನೆಗಾಗಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣ್ಯರಿಂದ ಸಂತಾಪ
ಪಂಜಾಬ್ ರಾಜ್ಯಪಾಲರು ಮತ್ತು ಚಂಡೀಗಢ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ ಅವರು ಫೌಜಾ ಸಿಂಗ್ ಅವರ ನಿಧನಕ್ಕೆ "ತೀವ್ರ ದುಃಖ" ವ್ಯಕ್ತಪಡಿಸಿದ್ದಾರೆ. "114ನೇ ವಯಸ್ಸಿನಲ್ಲಿ, ಅವರು 'ನಶೆ ಮುಕ್ತ, ರಂಗ್ಲಾ ಪಂಜಾಬ್' ಜಾಥಾದಲ್ಲಿ ನನ್ನೊಂದಿಗೆ ಅಪ್ರತಿಮ ಉತ್ಸಾಹದಿಂದ ಭಾಗಿಯಾಗಿದ್ದರು. ಅವರ ಪರಂಪರೆ ಮಾದಕ ವ್ಯಸನ ಮುಕ್ತ ಪಂಜಾಬ್‌ಗೆ ಸ್ಫೂರ್ತಿಯಾಗಲಿದೆ," ಎಂದು ರಾಜ್ಯಪಾಲರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಜೆಪಿ ನಾಯಕ ಮತ್ತು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು, ಅನುಭವಿ ಮ್ಯಾರಥಾನ್ ಓಟಗಾರನ "ಅಸಾಮಾನ್ಯ ಜೀವನ ಮತ್ತು ಅಚಲವಾದ ಉತ್ಸಾಹ" ಪೀಳಿಗೆಗೆ ಸ್ಫೂರ್ತಿಯಾಗಿ ಮುಂದುವರಿಯಲಿದೆ ಎಂದಿದ್ದಾರೆ. "
ಫೌಜಾ ಸಿಂಗ್ ಅವರ ಬದುಕು ಮತ್ತು ಸಾಧನೆ
1911 ರಲ್ಲಿ ರೈತರ ಕುಟುಂಬದಲ್ಲಿ ಜನಿಸಿದ ಫೌಜಾ ಸಿಂಗ್ ನಾಲ್ಕು ಒಡಹುಟ್ಟಿದವರಲ್ಲಿ ಕಿರಿಯರು. ಅವರು ತಮ್ಮ ವೃದ್ಧಾಪ್ಯದಲ್ಲಿ ಮ್ಯಾರಥಾನ್ ಓಟವನ್ನು ಪ್ರಾರಂಭಿಸಿದರು, ತಮ್ಮ ಸಹಿಷ್ಣುತೆ ಮತ್ತು ಅಥ್ಲೆಟಿಸಂಗಾಗಿ "ಟರ್ಬನೆಡ್ ಟೊರ್ನಾಡೋ" ಎಂಬ ಅಡ್ಡಹೆಸರನ್ನು ಪಡೆದರು. ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅನೇಕ ದಾಖಲೆಗಳನ್ನು ಗಳಿಸಿದ ಅವರು, ಮ್ಯಾರಥಾನ್ ಪೂರ್ಣಗೊಳಿಸಿದ ಮೊದಲ ಶತಾಯುಷಿಯಾದರು.
1990ರ ದಶಕದಲ್ಲಿ ಇಂಗ್ಲೆಂಡ್‌ಗೆ ತೆರಳಿದ ಅವರು, ನಂತರ ಪಂಜಾಬ್‌ನಲ್ಲಿರುವ ತಮ್ಮ ಹುಟ್ಟೂರಿಗೆ ಮರಳದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಟಾರ್ಚ್‌ಬೆರರ್ ಆಗಿ ಭಾಗವಹಿಸಿ ಗಮನ ಸೆಳೆದಿದ್ದರು. ಫೌಜಾ ಸಿಂಗ್ ಅವರು 1999 ರಲ್ಲಿ ಚಾರಿಟಿಗಾಗಿ ಮ್ಯಾರಥಾನ್ ಓಡಲು ನಿರ್ಧರಿಸಿದರು. ಅವರ ಮೊದಲ ಚಾರಿಟಿ ಕಾರ್ಯಕ್ರಮವು ಅವಧಿಪೂರ್ವ ಶಿಶುಗಳಿಗಾಗಿತ್ತು.