
ಭಾರತದ ರಕ್ಷಣೆಯಲ್ಲಿ ಇಸ್ರೋ ಉಪಗ್ರಹಗಳ ನಿರ್ಣಾಯಕ ಪಾತ್ರ: ಇಸ್ರೊ ಅಧ್ಯಕ್ಷ ಡಾ. ವಿ. ನಾರಾಯಣನ್
ದೇಶದ 7,000 ಕಿಲೋಮೀಟರ್ ಉದ್ದದ ಕರಾವಳಿ ಮತ್ತು ಉತ್ತರ ಗಡಿ ಭಾಗಗಳನ್ನು ಉಪಗ್ರಹ ಮತ್ತು ಡ್ರೋನ್ ತಂತ್ರಜ್ಞಾನದ ಮೂಲಕ ನಿಗಾ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಭಾರತದ ರಕ್ಷಣಾ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಉಪಗ್ರಹಗಳು ಅತ್ಯಂತ ಮಹತ್ವದ ಪಾತ್ರವಹಿಸುತ್ತಿವೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು ಭಾನುವಾರ (ಮೇ 11, 2025) ತಿಳಿಸಿದ್ದಾರೆ. ಮಣಿಪುರದ ಇಂಫಾಲ್‌ನಲ್ಲಿ ನಡೆದ ಸೆಂಟ್ರಲ್ ಅಗ್ರಿಕಲ್ಚರಲ್ ಯೂನಿವರ್ಸಿಟಿಯ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯ ಖಾತರಿಗಾಗಿ ಪ್ರಸ್ತುತ 10 ಉಪಗ್ರಹಗಳು ಹಗಲು- ರಾತ್ರಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಇತ್ತೀಚಿನ ಭಾರತ-ಪಾಕಿಸ್ತಾನ ಗಡಿ ಉದ್ವಿಗ್ನತೆ ಮತ್ತು 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಈ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.
ದೇಶದ 7,000 ಕಿಲೋಮೀಟರ್ ಉದ್ದದ ಕರಾವಳಿ ಮತ್ತು ಉತ್ತರ ಗಡಿ ಭಾಗಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದು ಹೇಳಿದ ಡಾ .ನಾರಾಯಣನ್ ಅವರು, ಉಪಗ್ರಹ ಮತ್ತು ಡ್ರೋನ್ ತಂತ್ರಜ್ಞಾನವಿಲ್ಲದೆ ಇದನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಮೇ 7 ರಂದು ನಡೆಸಿದ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಲ್ಲಿ ಇಸ್ರೋದ ಉಪಗ್ರಹಗಳು ನಿರ್ಣಾಯಕ ಪಾತ್ರವಹಿಸಿವೆ. ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಲು ಅಗತ್ಯ ಗುಪ್ತಚರ ಮಾಹಿತಿ ಒದಗಿಸುವಲ್ಲಿ, ನೌಕಾಪಡೆಯ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವಲ್ಲಿ ಮತ್ತು ನಿಖರ ದಾಳಿಗಳಿಗೆ ಸಹಾಯ ಮಾಡುವಲ್ಲಿ ಉಪಗ್ರಹಗಳು ನೆರವಾಗಿವೆ ಎಂದು ಅವರು ಹೇಳಿದರು.
10 ಉಪಗ್ರಹಗಳ ಕಣ್ಗಾವಲು
ಕಾರ್ಯತಂತ್ರಾತ್ಮಕ ಉದ್ದೇಶಗಳಿಗಾಗಿ 24/7 ಕಾರ್ಯನಿರ್ವಹಿಸುತ್ತಿರುವ 10 ಉಪಗ್ರಹಗಳು ಭಾರತದ ಕರಾವಳಿ, ಗಡಿ ಪ್ರದೇಶಗಳು ಮತ್ತು ಇತರ ಸೂಕ್ಷ್ಮ ಪ್ರದೇಶಗಳ ನಿರಂತರ ಮೇಲ್ವಿಚಾರಣೆಯನ್ನು ನಡೆಸುತ್ತಿವೆ. ಈ ಉಪಗ್ರಹಗಳು ರಿಮೋಟ್ ಸೆನ್ಸಿಂಗ್, ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ಸಂವಹನ ಸೌಲಭ್ಯಗಳನ್ನು ಒದಗಿಸುತ್ತವೆ, ಇದು ಸಶಸ್ತ್ರ ಪಡೆಗಳಿಗೆ ನೈಜ-ಸಮಯದ ಮಾಹಿತಿಯನ್ನು ಒದಗಿಸುತ್ತದೆ ಎಂದು ನುಡಿದರು.
ಭಾರತವು "ಶಕ್ತಿಶಾಲಿ ಬಾಹ್ಯಾಕಾಶ ಶಕ್ತಿಯಾಗಿ" ಹೊರಹೊಮ್ಮುತ್ತಿದೆ . ಇದುವರೆಗೆ 34 ರಾಷ್ಟ್ರಗಳ 433 ಉಪಗ್ರಹಗಳನ್ನು ಭಾರತ ಯಶಸ್ವಿಯಾಗಿ ಉಡಾವಣೆ ಮಾಡಿ ಕಕ್ಷೆಗೆ ಸೇರಿಸಿದೆ ಎಂದು ನಾರಾಯಣನ್ ಅವರು ತಿಳಿಸಿದರು.
ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ ಅವರು, ಭಾರತವು 2040ರ ವೇಳೆಗೆ ತನ್ನ ಮೊದಲ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದು ಹೇಳಿದರು. G20 ರಾಷ್ಟ್ರಗಳಿಗಾಗಿ ಹವಾಮಾನ, ವಾಯು ಮಾಲಿನ್ಯ ಮತ್ತು ತಾಪಮಾನದ ಮೇಲ್ವಿಚಾರಣೆಗಾಗಿ ಒಂದು ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಇದು ಜಾಗತಿಕ ಸಹಕಾರದಲ್ಲಿ ಭಾರತದ ಪಾತ್ರವನ್ನು ತೋರಿಸುತ್ತದೆ ಎಂದು ನುಡಿದರು.
ಸ್ವಾತಂತ್ರ್ಯದ ನಂತರ ಭಾರತವು ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರಗತಿ ಸಾಧಿಸಿದೆ ಎಂದು ಅವರು ಬಣ್ಣಿಸಿದರು. ಇಸ್ರೋದ ಉಪಗ್ರಹಗಳು ಕೃಷಿ, ಹವಾಮಾನ ಮುನ್ಸೂಚನೆ, ವಿಪತ್ತು ನಿರ್ವಹಣೆ ಮತ್ತು ಸಂವಹನದಂತಹ ಕ್ಷೇತ್ರಗಳಲ್ಲಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ ಎಂದು ಅವರು ತಿಳಿಸಿದರು.