
ಮಹಿಳೆ ಸೇರಿದಂತೆ 10 ಮಾವೋವಾದಿಗಳ ಹತ್ಯೆ
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಗುಂಡಿನ ಚಕಮಕಿ
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ಮಂಗಳವಾರ (ಏಪ್ರಿಲ್ 2) ನಡೆದ ಗುಂಡಿನ ಕಾಳಗದಲ್ಲಿ ಮಹಿಳೆ ಸೇರಿದಂತೆ 10 ಮಾವೋವಾದಿಗಳು ಹತರಾಗಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಬಸ್ತರ್ ವಲಯ) ಪಿ.ಸುಂದರರಾಜ್ ಪ್ರಕಾರ, ಗಂಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಲೆಂಡ್ರಾ ಮತ್ತು ಕೊರ್ಚೋಲಿ ಗ್ರಾಮಗಳ ನಡುವಿನ ಕಾಡಿನಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ಸಂಭವಿಸಿದೆ. ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿತ್ತು.ಜಿಲ್ಲಾ ಮೀಸಲು ದಳ (ಡಿಆರ್‌ಜಿ), ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಕೋಬ್ರಾ(ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಹೇಳಿದರು.
ʻಗುಂಡಿನ ವಿನಿಮಯ ನಿಂತ ನಂತರ ನಾಲ್ವರು ನಕ್ಸಲರ ಶವ ವಶಪಡಿಸಿಕೊಳ್ಳಲಾಯಿತು. ಆನಂತರ ಚಕಮಕಿ ನಡೆದ ಸ್ಥಳದಲ್ಲಿ ಆರು ಶವಗಳು ಪತ್ತೆಯಾದವುʼ ಎಂದು ಐಜಿ ಹೇಳಿದರು.ಲಘು ಮಷಿನ್ ಗನ್ (ಎಲ್‌ಎಂಜಿ), .303 ರೈಫಲ್, 12 ಬೋರ್ ಗನ್, ಬ್ಯಾರಲ್ ಗ್ರೆನೇಡ್ ಲಾಂಚರ್‌ಗಳು ಮತ್ತು ಶೆಲ್‌ಗಳು ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಹೇಳಿದರು. ಹತ್ಯೆಗೀಡಾದವರ ಗುರುತು ಪತ್ತೆಯಾಗಿಲ್ಲ. ಆದರೆ, ಪಿಎಲ್‌ಜಿಎ (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ)ಯ ಎರಡನೇ ಕಂಪನಿಗೆ ಸೇರಿದವರು ಎಂದು ಅಧಿಕಾರಿ ಹೇಳಿದರು.
ಮಾವೋವಾದಿಗಳು ಪ್ರತಿ ವರ್ಷ ಮಾರ್ಚ್ ಮತ್ತು ಜೂನ್ ನಡುವಿನ ಬೇಸಿಗೆಯಲ್ಲಿ ಟ್ಯಾಕ್ಟಿಕಲ್ ಕೌಂಟರ್ ಅಫೆನ್ಸಿವ್ ಕ್ಯಾಂಪೇನ್ (ಟಿಸಿಒಸಿ) ನಡೆಸುತ್ತಾರೆ. ಆನಂತರ ಚಟುವಟಿಕೆಗಳನ್ನು ಹೆಚ್ಚಿಸುತ್ತಾರೆ. ಈ ಅವಧಿಯಲ್ಲಿ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳ ವಿರುದ್ಧ ಹಲವು ದಾಳಿಗಳನ್ನು ನಡೆಸಲಾಗಿದೆ. ಮಾರ್ಚ್ 27 ರಂದು ಬಿಜಾಪುರದ ಬಸಗುಡ ಪ್ರದೇಶದಲ್ಲಿ ಆರು ಮಾವೋವಾದಿಗಳು ಹತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ಘಟನೆಯೊಂದಿಗೆ, ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 43 ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜಾಪುರ ಜಿಲ್ಲೆಯು ಬಸ್ತಾರ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಏಪ್ರಿಲ್ 19 ರಂದು ಮತದಾನ ನಡೆಯಲಿದೆ.