ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ| ಕೃಷ್ಣಮೂರ್ತಿ ಬಿಳಿಗೆರೆ, ಶ್ರುತಿ ಬಿ.ಆರ್‌. ಕೃತಿಗಳ ಆಯ್ಕೆ
x

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ| ಕೃಷ್ಣಮೂರ್ತಿ ಬಿಳಿಗೆರೆ, ಶ್ರುತಿ ಬಿ.ಆರ್‌. ಕೃತಿಗಳ ಆಯ್ಕೆ

ಶ್ರುತಿ ಬಿ.ಆರ್‌. ಅವರಿಗೆ ಯುವ ಪುರಸ್ಕಾರ| ಕೃಷ್ಣಮೂರ್ತಿ ಬಿಳಿಗೆರೆ ಅವರಿಗೆ ಬಾಲ ಸಾಹಿತ್ಯ ಪುರಸ್ಕಾರ ಪ್ರಕಟ


2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಮತ್ತು ಪುರಸ್ಕಾರ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಕರ್ನಾಟಕದ ಕೃಷ್ಣಮೂರ್ತಿ ಬಿಳಿಗೆರೆ ಅವರಿಗೆ ಬಾಲ ಸಾಹಿತ್ಯ ಪುರಸ್ಕಾರ ಹಾಗೂ ಶ್ರುತಿ ಬಿ ಆರ್ ಅವರಿಗೆ ಯುವ ಪುರಸ್ಕಾರ ಲಭಿಸಿದೆ

ಕೃಷ್ಣಮೂರ್ತಿ ಬಿಳಿಗೆರೆ ಅವರ "ಛೂ ಮಂತ್ರಯ್ಯನ ಕಥೆಗಳು" ಮಕ್ಕಳ ಕಥೆಗಳಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ ಹಾಗೂ ಶ್ರುತಿ ಬಿ ಆರ್ ಅವರ "ಜೀರೋ ಬ್ಯಾಲೆನ್ಸ್" ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಸಂದಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಇಂಗ್ಲಿಷ್ ಲೇಖಕಿ ಕೆ. ವೈಶಾಲಿ, ಹಿಂದಿ ಲೇಖಕ ಗೌರವ್ ಪಾಂಡೆ ಸೇರಿದಂತೆ 23 ಲೇಖಕರಿಗೆ 2024ರ ಯುವ ಪುರಸ್ಕಾರವನ್ನು ಶನಿವಾರ ಪ್ರಕಟಿಸಿದೆ. ನ್ಯಾಷನಲ್ ಅಕಾಡೆಮಿ ಆಫ್ ಲೆಟರ್ಸ್, 24 ಮಂದಿ ಬಾಲ ಸಾಹಿತ್ಯ ಪುರಸ್ಕೃತರ ಹೆಸರು ಪ್ರಕಟಿಸಿದೆ. ಸಂಸ್ಕೃತದಲ್ಲಿ ಯುವ ಪುರಸ್ಕಾರ ವಿಜೇತರನ್ನು ಮುಂದೆ ಪ್ರಕಟಿಸಲಾಗುವುದು ಎಂದು ಅಕಾಡೆಮಿ ತಿಳಿಸಿದೆ.

ʻಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿಯು ಅದರ ಅಧ್ಯಕ್ಷ ಮಾಧವ ಕೌಶಿಕ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ 23 ಬರಹಗಾರರ ಆಯ್ಕೆಯನ್ನು ಅನುಮೋದಿಸಿತು. ಸಂಬಂಧಪಟ್ಟ ಭಾಷೆಯ ತಲಾ ಮೂವರು ಸದಸ್ಯರ ಸಮಿತಿ ಆಯ್ಕೆ ಮಾಡಿದೆ,ʼ ಅಕಾಡೆಮಿ ಹೇಳಿಕೆಯಲ್ಲಿ ತಿಳಿಸಿದೆ.

ಕೆ. ವೈಶಾಲಿ ಅವರ ಆತ್ಮಚರಿತ್ರೆ "ಹೋಮ್‌ಲೆಸ್: ಗ್ರೋಯಿಂಗ್ ಅಪ್ ಲೆಸ್ಬಿಯನ್ ಮತ್ತು ಡಿಸ್ಲೆಕ್ಸಿಕ್ ಇನ್ ಇಂಡಿಯಾʼ, ಗೌರವ್ ಪಾಂಡೆ ಅವರ ʻಸ್ಮೃತಿಯೋಂ ಕೆ ಬೀಚ್ ಗಿರಿ ಹೈ ಪೃಥ್ವಿʼ ಕವನ ಸಂಕಲನಕ್ಕೆ ಯುವ ಪುರಸ್ಕಾರ ಲಭ್ಯವಾಗಿದೆ.

10 ಕವನ ಸಂಗ್ರಹ, ಏಳು ಸಣ್ಣ ಕಥೆಗಳ ಸಂಕಲನ, ಎರಡು ಲೇಖನಗಳ ಸಂಕಲನ ಮತ್ತು ಒಂದು ಪ್ರಬಂಧಗಳ ಸಂಕಲನ, ಒಂದು ಕಾದಂಬರಿ, ಒಂದು ಗಜಲ್‌ಗಳ ಪುಸ್ತಕ ಮತ್ತು ಒಂದು ಸ್ಮರಣ ಸಂಚಿಕೆಗೆ ನೀಡಲಾಗಿದೆ.

ಪುರಸ್ಕಾರ ವಿವರ

ಯುವ ಪುರಸ್ಕಾರದ ಇತರ ವಿಜೇತರೆಂದರೆ, ನಯನಜ್ಯೋತಿ ಶರ್ಮಾ (ಅಸ್ಸಾಮಿ), ಸುತಾಪ ಚಕ್ರವರ್ತಿ (ಬಂಗಾಳಿ), ಸೆಲ್ಫ್ ಮೇಡ್ ರಾಣಿ ಬಾರೋ (ಬೋಡೋ), ಹೀನಾ ಚೌಧರಿ (ಡೋಗ್ರಿ), ರಿಂಕು ರಾಥೋಡ್ (ಗುಜರಾತಿ), ಶ್ರುತಿ ಬಿ.ಆರ್. (ಕನ್ನಡ), ಮೊಹಮ್ಮದ್ ಅಶ್ರಫ್ ಜಿಯಾ (ಕಾಶ್ಮೀರಿ), ಅದ್ವೈತ್ ಸಲ್ಗಾಂವ್ಕರ್ (ಕೊಂಕಣಿ), ರಿಂಕಿ ಝಾ ರಿಷಿಕಾ (ಮೈಥಿಲಿ), ಶ್ಯಾಮಕೃಷ್ಣನ್ ಆರ್ (ಮಲಯಾಳಂ), ವೈಖೋಮ್ ಚಿಂಗ್ಖೀಂಗನ್ಬಾ (ಮಣಿಪುರಿ), ದೇವಿದಾಸ್ ಸೌದಾಗರ್ (ಮರಾಠಿ), ಸೂರಜ್ ಚಾಪಗೈನ್ (ನೇಪಾಳಿ), ಸಂಜಯ್ ಕುಮಾರ್ ಪಾಂಡಾ (ಒಡಿಯಾ), ರಣಧೀರ್ (ಪಂಜಾಬಿ), ಸೋನಾಲಿ ಸುತಾರ್ (ರಾಜಸ್ಥಾನಿ), ಅಂಜನ್ ಕರ್ಮಾಕರ್ (ಸಂತಾಲಿ), ಗೀತಾ ಪ್ರದೀಪ್ ರೂಪಾನಿ (ಸಿಂಧಿ), ಲೋಕೇಶ್ ರಘುರಾಮನ್ (ತಮಿಳು), ರಮೇಶ್ ಕಾರ್ತಿಕ್ ನಾಯಕ್ (ತೆಲುಗು) ಮತ್ತು ಜಾವೇದ್ ಅಂಬರ್ ಮಿಸ್ಬಾಹಿ (ಉರ್ದು).

ಪುರಸ್ಕೃತರಿಗೆ ತಾಮ್ರ ಫಲಕ ಮತ್ತು 50,000 ರೂ.ಗಳ ಚೆಕ್ ನೀಡಲಾಗುತ್ತದೆ.

ಬಾಲ ಸಾಹಿತ್ಯ ಪುರಸ್ಕಾರ: ಇಂಗ್ಲಿಷ್ ಲೇಖಕಿ ನಂದಿನಿ ಸೇನ್‌ಗುಪ್ತಾ ಅವರ ಐತಿಹಾಸಿಕ ಕಾದಂಬರಿ ʻದಿl ಬ್ಲೂ ಹಾರ್ಸ್ ಅಂಡ್ ಅಮೇಜಿಂಗ್ ಅನಿಮಲ್ ಸ್ಟೋರೀಸ್ ಫ್ರಮ್ ಇಂಡಿಯನ್ ಹಿಸ್ಟರಿʼ ಮತ್ತು ದೇವೆಂದರ್ ಕುಮಾರ್ ಅವರ ಮಕ್ಕಳ ಕಥೆಗಳ ಸಂಗ್ರಹ ʻ51 ಬಾಲ್ ಕಹಾನಿಯನ್ʼ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಏಳು ಕಾದಂಬರಿ, ಆರು ಕವನ, ನಾಲ್ಕು ಕಥೆ , ಐದು ಸಣ್ಣ ಕಥೆ, ಒಂದು ನಾಟಕ ಮತ್ತು ಒಂದು ಐತಿಹಾಸಿಕ ಕಾದಂಬರಿಗೆ ಬಾಲಸಾಹಿತ್ಯ ಪುರಸ್ಕಾರ ನೀಡಲಾಗಿದೆ.

ಬಾಲ ಸಾಹಿತ್ಯ ಪುರಸ್ಕಾರ ವಿಜೇತರೆಂದರೆ, ರಂಜು ಹಜಾರಿಕಾ (ಅಸ್ಸಾಮಿ), ದೀಪನ್ವಿತಾ ರಾಯ್ (ಬಂಗಾಳಿ), ಬರ್ಗಿನ್ ಜೆಕೋವಾ ಮಚಹರಿ (ಬೋಡೋ), ಬಿಶನ್ ಸಿಂಗ್ 'ದರ್ದಿ' (ಡೋಗ್ರಿ), ಗಿರಾ ಪಿನಾಕಿನ್ ಭಟ್ (ಗುಜರಾತಿ), ಕೃಷ್ಣಮೂರ್ತಿ ಬಿಳಿಗೆರೆ (ಕನ್ನಡ),ಮುಜಾಫರ್ ಹುಸೇನ್ ದಿಲ್ಬರ್ (ಕಾಶ್ಮೀರಿ), ಹರ್ಷ ಸದ್ಗುರು ಶೆಟ್ಯೆ (ಕೊಂಕಣಿ), ನಾರಾಯಣಗೀ (ಮೈಥಿಲಿ), ಉನ್ನಿ ಅಮ್ಮಾಯಂಬಲಂ (ಮಲಯಾಳಂ), ಕ್ಷೇತ್ರಿಮಯೂನ್ ಸುದಾನಿ (ಮಣಿಪುರಿ), ಭಾರತ್ ಸಸಾನೆ (ಮರಾಠಿ), ಬಸಂತ ಥಾಪಾ (ನೇಪಾಳಿ) ಮತ್ತು ಮಾನಸ್ ರಂಜನ್ ಸಮಲ್ (ಒಡಿಯಾ), ಕುಲದೀಪ್ ಸಿಂಗ್ ದೀಪ್ (ಪಂಜಾಬಿ), ಪ್ರಹ್ಲಾದ್ ಸಿಂಗ್ 'ಜೋರ್ಡಾ' (ರಾಜಸ್ಥಾನಿ), ಹರ್ಷದೇವ್ ಮಾಧವ್ (ಸಂಸ್ಕೃತ), ದುಗಲ್ ತುಡು (ಸಂತಾಲಿ), ಲಾಲ್ ಹೊತ್ಚಂದನಿ 'ಲಾಚಾರ್' (ಸಿಂಧಿ), ಯುವ ವಾಸುಕಿ (ತಮಿಳು), ಪಿ ಚಂದ್ರಶೇಖರ್ ಆಜಾದ್ (ತೆಲುಗು) ಮತ್ತು ಶಮ್ಸುಲ್ ಇಸ್ಲಾಂ ಫಾರೂಕಿ (ಉರ್ದು).

ಬಾಲ ಸಾಹಿತ್ಯ ಪುರಸ್ಕಾರ ವಿಜೇತರಿಗೆ ತಾಮ್ರ ಫಲಕ ಮತ್ತು 50,000 ರೂ.ಚೆಕ್ ನೀಡಲಾಗುತ್ತದೆ.

Read More
Next Story