ಬಿಹಾರ: ಇಂದು ವಿಶ್ವಾಸ ಮತ ಯಾಚಿಸಲಿರುವ ನಿತೀಶ್ ಕುಮಾರ್
x

ಬಿಹಾರ: ಇಂದು ವಿಶ್ವಾಸ ಮತ ಯಾಚಿಸಲಿರುವ ನಿತೀಶ್ ಕುಮಾರ್


ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರ ಇತ್ತೀಚಿನ ದಿಢೀರ್ ರಾಜಕೀಯ ಯೂಟರ್ನ್ ಪರಿಣಾಮವಾಗಿ ಬಿಹಾರದಲ್ಲಿ ಅಧಿಕಾರ ಹಿಡಿದಿರುವ ಎನ್ಡಿಎ ಸರ್ಕಾರವು ಸೋಮವಾರ(ಫೆ.12) ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲಿದೆ.

ಬಜೆಟ್ ಅಧಿವೇಶನದ ಮೊದಲ ದಿನ ಉಭಯ ಸದನಗಳ ಶಾಸಕರನ್ನು ಉದ್ದೇಶಿಸಿ ರಾಜ್ಯಪಾಲರ ಸಾಂಪ್ರದಾಯಿಕ ಭಾಷಣದೊಂದಿಗೆ ಪ್ರಾರಂಭವಾಗುತ್ತದೆ. ನಂತರ ವಿಧಾನಸಭೆಯು ಸ್ಪೀಕರ್ ಅವಧ್ ಬಿಹಾರಿ ಚೌಧರಿ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಕೈಗೆತ್ತಿಕೊಳ್ಳಲಿದೆ. ಆ ನಂತರ ನಿತೀಶ್ ಕುಮಾರ್ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.


ಚೌಧರಿ ಕೆಳಗಿಳಿಯುವುದಿಲ್ಲ

ಹದಿನೈದು ದಿನಗಳ ಹಿಂದೆ ನಿತೀಶ್ ಕುಮಾರ್ ಅವರು ತ್ಯಜಿಸಿದ 'ಮಹಾಘಟಬಂಧನ್' ನ ಅತಿದೊಡ್ಡ ಘಟಕವಾದ ಆರ್ಜೆಡಿ ಪಕ್ಷದ ಮುಖಂಡರಾದ ಸ್ಪೀಕರ್ ಚೌಧರಿ, ಹೊಸ ಸರ್ಕಾರ ರಚನೆಯಾದ ಕೂಡಲೇ ಎನ್ಡಿಎಯ ಶಾಸಕರು ತಮ್ಮ ವಿರುದ್ಧ ಮಂಡಿಸಿದ ಅವಿಶ್ವಾಸ ಗೊತ್ತುವಳಿಯ ಹೊರತಾಗಿಯೂ ತಾವು ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜೆಡಿ(ಯು), ಬಿಜೆಪಿ, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಒಬ್ಬರು ಪಕ್ಷೇತರ ಶಾಸಕರ ಬೆಂಬಲ ಹೊಂದಿರುವ ಎನ್ಡಿಎ, 243 ಸದಸ್ಯ ಬಲದ ವಿಧಾನಸಭೆಯಲ್ಲಿ ಒಟ್ಟು 128 ಶಾಸಕರ ಬೆಂಬಲ ಹೊಂದಿದೆ. ಆ ಮೂಲಕ ಅದು ಸರಳ ಬಹುಮತಕ್ಕೆ ಬೇಕಾದ ಶಾಸಕರ ಸಂಖ್ಯೆಗಿಂತ ಆರು ಸ್ಥಾನ ಹೆಚ್ಚುವರಿಯಾಗಿ ಹೊಂದಿದೆ.

ಭಾನುವಾರ ನಡೆದ ಜೆಡಿಯು ಶಾಸಕಾಂಗ ಪಕ್ಷದ ಸಭೆಗೆ ಕೆಲವು ಶಾಸಕರು ಮತ್ತು ಬೋಧಗಯಾದಲ್ಲಿ ನಡೆದ ಬಿಜೆಪಿ ತರಬೇತಿ ಕಾರ್ಯಾಗಾರದಲ್ಲಿ ಕೆಲವು ಶಾಸಕರು ಗೈರು ಹಾಜರಾದ ಹಿನ್ನೆಲೆಯಲ್ಲಿ ಮಹಾಘಟಬಂಧನ ಬೇರೆಯದೇ ಲೆಕ್ಕಾಚಾರದಲ್ಲಿದೆ. ಸ್ಪೀಕರ್ ಪದಚ್ಯುತಗೊಳಿಸಲು ಬೇಕಾದ 122 ಮತಗಳು ಎನ್ ಡಿಎ ಬತ್ತಳಿಕೆಯಲ್ಲಿ ಇಲ್ಲ ಎಂಬುದು ಮಹಾಘಟಬಂಧನದ ವಿಶ್ವಾಸ.

ಆದರೆ, ಈ ವಾದವನ್ನು ತಳ್ಳಿಹಾಕಿರುವ ಜೆಡಿಯು ಮತ್ತು ಬಿಜೆಪಿ, ಅವಿಶ್ವಾಸ ಮಂಡನೆಯ ವೇಳೆ ಮೈತ್ರಿಕೂಟದ ಎಲ್ಲಾ ಶಾಸಕರು ಸದನದೊಳಗೆ ಹಾಜರಿರುತ್ತಾರೆ ಎಂದು ಹೇಳಿವೆ. ಆದಾಗ್ಯೂ, ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಯತ್ನವಾಗಿ ಜೆಡಿಯು, ಶಾಸಕಾಂಗ ಪಕ್ಷದ ಸಭೆಯ ಬಳಿಕ ಬಹುತೇಕ ಎಲ್ಲಾ ಶಾಸಕರನ್ನು ನಗರದ ಹೋಟೆಲ್ನಲ್ಲಿ ಇರಿಸಿದೆ.

ಬಿಜೆಪಿ ಕೂಡ ಇದೇ ತಂತ್ರಗಾರಿಕೆಯ ಮೊರೆಹೋಗಿದ್ದು, ಪಕ್ಷದ ಕಾರ್ಯಾಗಾರದ ಬಳಿಕ ಎಲ್ಲಾ ಶಾಸಕರನ್ನು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ವಿಜಯ್ ಕುಮಾರ್ ಸಿನ್ಹಾ ಅವರ ನಿವಾಸದಲ್ಲಿ ಉಳಿಸಿದೆ.

ಈ ನಡುವೆ, ದಾಖಲೆಯ ಒಂಬತ್ತನೇ ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಿತೀಶ್ ಕುಮಾರ್ ಅವರು ಜೆಡಿಯುನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಮತ್ತು ಒಂದು ದಿನದ ಹಿಂದೆ ನಡೆದ ಉಪಾಹಾರ ಕೂಟದಲ್ಲಿ ಕೂಡ ಅವರು ಭಾಗವಹಿಸಿದ್ದರು.

Read More
Next Story