SIR: ತಿರುಗೇಟಿಗೆ ಸರ್ಕಾರ ಸಿದ್ಧತೆ; ZP-TP ಚುನಾವಣೆಗೆ ಮಾಸ್ಟರ್ ಪ್ಲಾನ್
ಜಿ.ಪಂ, ತಾ.ಪಂ. ಚುನಾವಣೆಗೆ ಎಸ್ಐಆರ್ ಮತದಾರರ ಪಟ್ಟಿ ಬದಲಿಗೆ ಹಳೆಯ ಮತದಾರರ ಪಟ್ಟಿಯನ್ನೇ ಆಧರಿಸಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಿಗೆ ಕೊನೆಗೂ ಕಾಲ ಕೂಡಿಬಂದಂತಾಗಿದೆ. ಈ ಮೂಲಕ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ಭರ್ಜರಿ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಕೇಂದ್ರದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಬದಲಿಗೆ ಹಳೆಯ ಮತದಾರರ ಪಟ್ಟಿಯನ್ನೇ ಆಧರಿಸಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇದರ ಹಿಂದೆ ಸೋಲಿನ ಭೀತಿ ಹಾಗೂ ರಾಜಕೀಯ ಅನಿವಾರ್ಯತೆ ಅಡಗಿದೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ತೀವ್ರಗೊಂಡಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಸುತ್ತಲಿನ ತಲ್ಲಣಗಳು ಹಾಗೂ ಇತ್ತೀಚಿನ ವಿಧಾನಪರಿಷತ್ ಚುನಾವಣೆಯ ಹಿನ್ನಡೆಯ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವವು ರಕ್ಷಣಾತ್ಮಕ ಆಟಕ್ಕೆ ಇಳಿದಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಸಾಮಾನ್ಯವಾಗಿ ಚುನಾವಣೆಗಳು ಕೇಂದ್ರ ಚುನಾವಣಾ ಆಯೋಗವು ಕಾಲಕಾಲಕ್ಕೆ ಪರಿಷ್ಕರಿಸುವ ಹೊಸ ಮತದಾರರ ಪಟ್ಟಿಯ ಆಧಾರದ ಮೇಲೆಯೇ ನಡೆಯುತ್ತವೆ. ಆದರೆ ಈ ಬಾರಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಈ ಸಂಪ್ರದಾಯಕ್ಕೆ ಎಳ್ಳು ನೀರು ಬಿಡುವ ಸಾಧ್ಯತೆ ಇದೆ. ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗವು SIR ನಡೆಸಿ ಹೊಸ ಮತದಾರರ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷಗಳು, ನಿವಾಸ ದೃಢೀಕರಣದ ಕೊರತೆ ಹಾಗೂ ಸಮರ್ಪಕ ಪರಿಶೀಲನೆ ನಡೆಯದ ಕಾರಣ ಹೆಚ್ಚು-ಕಡಿಮೆ ಒಂದು ಕೋಟಿ ಮತದಾರರ ಹೆಸರುಗಳು ಪಟ್ಟಿಯಿಂದ ಅಳಿಸಿಹೋಗಿವೆ.
ಒಂದು ವೇಳೆ ನೂತನ ಎಸ್ಐಆರ್ ಪಟ್ಟಿಯನ್ನೇ ಬಳಸಿದರೆ, ತಮ್ಮ ಪಕ್ಷದ ಪರವಾಗಿರುವ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ ಎಂಬ ಆತಂಕ ಸರ್ಕಾರ ಹಾಗೂ ಸ್ಥಳೀಯ ಮುಖಂಡರಲ್ಲಿದೆ. ಹೀಗಾಗಿ, ಯಾವುದೇ ಅರ್ಹ ನಾಗರಿಕನೂ ಮತದಾನದ ಹಕ್ಕಿನಿಂದ ದೂರ ಉಳಿಯಬಾರದು ಎಂದು ಹಳೆಯ ಮತದಾರರ ಪಟ್ಟಿಯನ್ನೇ ಆಧರಿಸಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಹಿಂಬಾಗಿಲು ಮೂಲಕ ಸೇರ್ಪಡಿಸುವ ಹುನ್ನಾರ
ಕಳೆದ ನಾಲ್ಕು ತಿಂಗಳುಗಳಿಂದ ರಾಜ್ಯಾದ್ಯಂತ ಹಗಲಿರುಳು ನಡೆದ ಬೃಹತ್ ಪ್ರಕ್ರಿಯೆಯ ನಂತರ, ರಾಜ್ಯದಲ್ಲಿ ಒಟ್ಟು 4.55 ಕೋಟಿ ಅರ್ಹ ಮತದಾರರು ಉಳಿದುಕೊಂಡಿದ್ದಾರೆ. ವಿಶೇಷ ಪರಿಷ್ಕರಣೆಯ ಪರಿಣಾಮವಾಗಿ ಬರೋಬ್ಬರಿ 99.32 ಲಕ್ಷ ಅಂದರೆ ಸುಮಾರು 1 ಕೋಟಿ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ರದ್ದಾಗಿವೆ. ರಾಜ್ಯದಲ್ಲಿ ಕೊನೆಯ ಬಾರಿಗೆ 2002ರಲ್ಲಿ ಇಂತಹ ಸಮಗ್ರ ಪರಿಷ್ಕರಣೆ ನಡೆದಿತ್ತು. ಬರೋಬ್ಬರಿ 32 ವರ್ಷಗಳ ಸುದೀರ್ಘ ಅವಧಿಯ ನಂತರ ನಡೆದ ಈ ಶುದ್ಧೀಕರಣ ಅಭಿಯಾನವು ಆಡಳಿತಾತ್ಮಕವಾಗಿ ಯಶಸ್ಸು ಕಂಡಿದ್ದರೂ, ರಾಜಕೀಯವಾಗಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವೆ ಭಾರೀ ಸಮರ, ಪ್ರತಿಭಟನೆ, ಧರಣಿ ಮತ್ತು ಎಫ್ಐಆರ್ಗಳ ಮಹಾಪೂರಕ್ಕೇ ಕಾರಣವಾಗಿತ್ತು. ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಒಂದು ಕೋಟಿ ಮತದಾರರ ಹೆಸರನ್ನು ಹಿಂಬಾಗಿಲು ಮೂಲಕ ಸೇರ್ಪಡಿಸುವ ಹುನ್ನಾರ ನಡೆಸಿದೆ ಎಂಬ ಅನುಮಾನಗಳು ಮೂಡಿವೆ.
ಸಚಿವ ಈಶ್ವರ್ ಖಂಡ್ರೆ ಅವರು ಇತ್ತೀಚೆಗೆ ಗ್ರಾಮೀಣ ಭಾಗದ ಜನರಿಗೆ ಯಾವುದೇ ಅನ್ಯಾಯವಾಗಬಾರದು. ಹಳೆಯ ಮತದಾರರ ಪಟ್ಟಿಯನ್ನೇ ಆಧರಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಕಾನೂನಿನಲ್ಲಿ ಸ್ಪಷ್ಟ ಅವಕಾಶವಿದೆ ಎಂಬ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ. ಈ ಸೂಕ್ಷ್ಮ ಹಾಗೂ ಮಹತ್ವದ ವಿಚಾರವಾಗಿ ಅಂತಿಮ ತೀರ್ಮಾನವನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲು ಮುಂದಾಗಿದೆ. ಈ ನಿರ್ಧಾರದ ಬೆನ್ನಲ್ಲೇ, ಮುಂದಿನ ಒಂದು ವಾರದೊಳಗೆ ಅಂತಿಮ ಹಂತದ ಅಧಿಸೂಚನೆಯನ್ನು ಪ್ರಕಟಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಸರ್ಕಾರದ ಈ ನಡೆಯ ಹಿಂದೆ ರಾಜಕೀಯ ಅಡಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಕಾಂಗ್ರೆಸ್ ಪಾಳೆಯದಲ್ಲಿ ಆತಂಕ
ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದ್ದು ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಮೇಲೆ ಪರಿಣಾಮ ಬೀರುವ ಆತಂಕ ಇದೆ. ಅಹಿಂದದಲ್ಲಿ ಏರುಪೇರಾದರೆ, ಅದು ನೇರವಾಗಿ ಗ್ರಾಮೀಣ ಭಾಗದ ಸಾಂಪ್ರದಾಯಿಕ ಮತಬ್ಯಾಂಕ್ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದು ರಾಜಕೀಯ ಲೆಕ್ಕಾಚಾರ. ಗ್ರಾಮೀಣ ಭಾಗದಲ್ಲಿ ಸಿದ್ದರಾಮಯ್ಯ ಅವರ ವೈಯಕ್ತಿಕ ವರ್ಚಸ್ಸೇ ಕಾಂಗ್ರೆಸ್ಗೆ ದೊಡ್ಡ ಶಕ್ತಿಯಾಗಿತ್ತು. ಇಂತಹ ಸಮಯದಲ್ಲಿ ನಾಯಕತ್ವದಲ್ಲಿ ಬದಲಾವಣೆ ಮಾಡಿರುವುದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ಗೆ ಭಾರಿ ಹಿನ್ನಡೆ ತರಬಹುದು ಎಂಬ ಆತಂಕ ಪಕ್ಷದ ಆಂತರಿಕ ವಲಯದಲ್ಲಿ ಮನೆಮಾಡಿದೆ.
ಇಷ್ಟು ಮಾತ್ರವಲ್ಲದೇ, ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದು ಬೀಗಿದ್ದ ಕಾಂಗ್ರೆಸ್ಗೆ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಗಳು ಎಚ್ಚರಿಕೆಯ ಗಂಟೆ ಬಾರಿಸಿವೆ. ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅನುಭವಿಸಿದ ಸೋಲು ಪಕ್ಷದ ಕಾರ್ಯಕರ್ತರ ಮತ್ತು ಸ್ಥಳೀಯ ಮುಖಂಡರ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಪರಿಷತ್ ಚುನಾವಣೆ ಫಲಿತಾಂಶವು ಕಾಂಗ್ರೆಸ್ಗೆ ಮುಖಭಂಗ ಮಾಡಿದೆ. ಈ ಹಿನ್ನಡೆಯು ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ಮೇಲೂ ನೆರಳು ಬೀರುವ ಸಾಧ್ಯತೆ ಇರುವುದರಿಂದ, ಕಾಂಗ್ರೆಸ್ ಯಾವುದೇ ರೀತಿಯ ಅಪಾಯ ತೆಗೆದುಕೊಳ್ಳಲು ಸಿದ್ಧವಿಲ್ಲದ ಸ್ಥಿತಿಯಲ್ಲಿದೆ. ಹೀಗಾಗಿ ಚುನಾವಣೆ ಮುಂದೂಡಿಕೆ ಮಾಡಲು ಹಳೆಯ ಮತದಾರರ ಪಟ್ಟಿಯಲ್ಲಿಯೇ ಚುನಾವಣೆ ನಡೆಸುವ ತಂತ್ರಗಾರಿಕೆ ರೂಪಿಸಿದೆ ಎಂದು ಹೇಳಲಾಗಿದೆ.
ಅರ್ಜಿ 6 ಭರ್ತಿಗೆ ಅವಕಾಶ
ಚುನಾವಣಾ ಆಯೋಗವು ಮತದಾರರ ಹಿತದೃಷ್ಟಿಯಿಂದ ಪರ್ಯಾಯ ಮಾರ್ಗವನ್ನು ಕೂಡ ತೆರೆದಿಟ್ಟಿದೆ. ಒಂದು ವೇಳೆ ಹೊಸ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಥವಾ ಹಳೆಯ ಪಟ್ಟಿಯಲ್ಲೂ ಗೊಂದಲಗಳಿದ್ದರೆ, ಮತದಾರರು ಆತಂಕಪಡುವ ಅಗತ್ಯವಿಲ್ಲ. ಅರ್ಹ ನಾಗರಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಮರು ಸೇರ್ಪಡೆ ಮಾಡಲು ಅರ್ಜಿ 6 ಅನ್ನು ಭರ್ತಿ ಮಾಡಿ ತಾಲೂಕು ಕಚೇರಿ ಅಥವಾ ಆಯಾ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬಹುದು. ಆನ್ಲೈನ್ ಮೂಲಕವೂ ಮತದಾರರ ಸೇರ್ಪಡೆಗೆ ತ್ವರಿತ ಅವಕಾಶ ಕಲ್ಪಿಸಲಾಗಿದೆ. ಪಂಚಾಯತ್ ಚುನಾವಣೆಗಳು ಪ್ರಜಾಪ್ರಭುತ್ವದ ತಳಹದಿಯಾಗಿರುವುದರಿಂದ ಪ್ರತಿಯೊಬ್ಬ ಮತದಾರನೂ ಪಟ್ಟಿಯಲ್ಲಿ ತನ್ನ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಆಯೋಗ ಮನವಿ ಮಾಡಿದೆ. ಆದರೆ ಈ ಎಲ್ಲಾ ಪ್ರಕ್ರಿಯೆ ಮುಗಿಯುವ ವೇಳೆ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಲಿದೆ. ಹೀಗಾದರೆ ಹೊಸದಾಗಿ ಮತದಾರರು ಮತದಾರರ ಪಟ್ಟಿಯಲ್ಲಿ ಸೇರುವುದಕ್ಕೆ ವಿಳಂಬವಾಗಲಿದೆ. ಇದು ಕಾಂಗ್ರೆಸ್ ಮತ ಬ್ಯಾಂಕ್ ಮೇಲೆ ಪರಿಣಾಮ ಬೀರಲಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ರಾಜ್ಯ ಚುನಾವಣಾ ಆಯೋಗವು ಸ್ವತಂತ್ರವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಲು ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿತ್ತು. ಗ್ರಾಮೀಣ ಭಾಗದ ನೈಜ ಮತದಾರರನ್ನು ಒಳಗೊಂಡ ನಿಖರ ಪಟ್ಟಿ ಸಿದ್ಧಪಡಿಸುವುದು ರಾಜ್ಯ ಆಯೋಗದ ಉದ್ದೇಶವಾಗಿತ್ತು. ಆದರೆ, ಇದೇ ವೇಳೆಗೆ ಕೇಂದ್ರ ಚುನಾವಣಾ ಆಯೋಗವು ಅಧಿಕೃತವಾಗಿ ತನ್ನದೇ ಆದ ಎಸ್ಐಆರ್ ಪ್ರಕ್ರಿಯೆಯನ್ನು ಘೋಷಿಸಿತು. ನಿಯಮಾವಳಿಗಳ ಪ್ರಕಾರ ಕೇಂದ್ರ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಆರಂಭಿಸಿದಾಗ, ರಾಜ್ಯ ಆಯೋಗವು ಪ್ರತ್ಯೇಕವಾಗಿ ಸಮಾನಾಂತರ ಪರಿಷ್ಕರಣೆ ನಡೆಸಲು ತಾಂತ್ರಿಕ ಹಾಗೂ ಕಾನೂನು ತೊಡಕುಗಳು ಎದುರಾದವು. ಹೀಗಾಗಿ, ರಾಜ್ಯ ಚುನಾವಣಾ ಆಯೋಗವು ತಾನು ಯೋಜಿಸಿದ್ದ ಎಸ್ಐಆರ್ ಪ್ರಕ್ರಿಯೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಬೇಕಾಯಿತು. ಕೇಂದ್ರದ ಹಸ್ತಕ್ಷೇಪದಿಂದಾಗಿ ರಾಜ್ಯ ಆಯೋಗದ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದ್ದಲ್ಲದೆ, ನಂತರದಲ್ಲಿ ಕೇಂದ್ರ ಆಯೋಗ ಪ್ರಕಟಿಸಿದ ಎಸ್ಐಆರ್ ಪಟ್ಟಿಯಲ್ಲಿ ಲಕ್ಷಾಂತರ ಗ್ರಾಮೀಣ ಮತದಾರರ ಹೆಸರುಗಳು ಕೈಬಿಟ್ಟುಹೋಗಿವೆ ಎಂಬ ಗಂಭೀರ ದೂರುಗಳು ಕೇಳಿಬಂದಿವೆ. ರಾಜ್ಯ ಆಯೋಗದ ಸ್ವಂತ ಪರಿಷ್ಕರಣೆ ನಡೆಯದೆ ಮತ್ತು ಕೇಂದ್ರದ ನೂತನ ಪಟ್ಟಿಯಲ್ಲಿ ಗೊಂದಲಗಳು ಸೃಷ್ಟಿಯಾದ ಕಾರಣ, ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಅನಿವಾರ್ಯವಾಗಿ ಹಳೆಯ ಮತದಾರರ ಪಟ್ಟಿಯ ಆಧಾರದಲ್ಲೇ ನಡೆಸುವ ಇಕ್ಕಟ್ಟಿಗೆ ಆಯೋಗ ಸಿಲುಕುವಂತಾಗಿದೆ ಎಂದು ಹೇಳಲಾಗಿದೆ.
ನವೆಂಬರ್ ಅಂತ್ಯದ ವೇಳೆಗೆ ಮೀಸಲಾತಿ ಪಟ್ಟಿ?
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವುದು ರಾಜ್ಯ ಚುನಾವಣಾ ಆಯೋಗವಾದರೂ, ಅದಕ್ಕೆ ಪೂರಕವಾದ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ನವೆಂಬರ್ ತಿಂಗಳ ಅಂತ್ಯದ ವೇಳೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಸರ್ಕಾರ ಹಸ್ತಾಂತರಿಸಲಿದೆ. ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿದೆ. ಮತಪೆಟ್ಟಿಗೆ ದುರಸ್ತಿ, ಪರಿಶೀಲನೆ, ಸಿಬ್ಬಂದಿ ನಿಯೋಜನೆ ಸೇರಿದಂತೆ ಹಲವು ಆಡಳಿತಾತ್ಮಕ ಕೆಲಸಗಳಿಗೆ ಕನಿಷ್ಠ ಸಮಯ ಬೇಕಾಗುತ್ತದೆ. ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ, ಡಿಸೆಂಬರ್ನಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ. ಡಿಸೆಂಬರ್ ಕೊನೆಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದು, ಜನವರಿ ಮೊದಲ ವಾರದಲ್ಲಿ ಮತದಾನ ನಡೆಯುವ ನಿರೀಕ್ಷೆಯಿದೆ. ಹೀಗಾಗಿ ರಾಜ್ಯ ಸರ್ಕಾರವು ಹಳೆ ಮತದಾರರ ಪಟ್ಟಿಯ ಮೂಲಕ ಚುನಾವಣೆ ನಡೆಸಲು ಮುಂದಾಗಿದೆ ಎನ್ನಲಾಗಿದೆ.
ವಿಧಾನಪರಿಷತ್ ಸೋಲಿನ ಕಹಿಯಿಂದ ಕಂಗೆಟ್ಟಿರುವ ಆಡಳಿತ ಪಕ್ಷಕ್ಕೆ ಗ್ರಾಮೀಣ ಸಂಸ್ಥೆಗಳ ಚುನಾವಣೆ ಪ್ರತಿಷ್ಠೆ ಪ್ರಶ್ನೆಯಾಗಿದೆ. ಹೀಗಾಗಿಯೇ, ಎಸ್ಐಆರ್ ಪಟ್ಟಿಯ ರಿಸ್ಕ್ ತೆಗೆದುಕೊಳ್ಳದೆ ಹಳೆಯ ಮತದಾರರ ಪಟ್ಟಿಯ ಸುರಕ್ಷಿತ ಹಾದಿಯನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದೆ ಎಂಬುದು ರಾಜಕೀಯ ಪಡಸಾಲೆಯ ಮಾತಾಗಿದೆ. ಮುಂಬರುವ ಜನವರಿಯಲ್ಲಿ ಗ್ರಾಮೀಣ ಮತದಾರ ಈ ಎಲ್ಲಾ ತಂತ್ರಗಳಿಗೆ ಯಾವ ರೀತಿಯ ತೀರ್ಪು ನೀಡಲಿದ್ದಾನೆ ಎಂಬುದೇ ಈಗ ಕುತೂಹಲದ ಕೇಂದ್ರಬಿಂದು.
