
ಪ್ರೇಮಿಗಳ ದಿನಕ್ಕೆ ಯುವ ಕಾಂಗ್ರೆಸ್ 'ಪ್ರೀತಿಯ ಸೈನಿಕರ' ಕಾವಲು!
Valentine's Day| ಪ್ರೇಮಿಗಳ ದಿನದಂದು ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ನಡೆಯುವ ನೈತಿಕ ಪೊಲೀಸ್‌ಗಿರಿ ಮತ್ತು ದಾಂಧಲೆಯನ್ನು ತಡೆಯಲು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಮುಂದಾಗಿದೆ.
ಪ್ರತಿ ವರ್ಷ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ನಡೆಯುವ ನೈತಿಕ ಪೊಲೀಸ್‌ಗಿರಿ ಮತ್ತು ದಾಂಧಲೆಯನ್ನು ತಡೆಯಲು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಜ್ಜಾಗಿದೆ. ಈ ಬಾರಿ ಪ್ರೇಮಿಗಳ ರಕ್ಷಣೆಗಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು 'ಪ್ರೀತಿಯ ಸೈನಿಕರಾಗಿ' ಬೀದಿಗಿಳಿಯಲಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ತಿಳಿಸಿದ್ದಾರೆ.
ಸಂಘಟನೆಗಳ ಪುಂಡಾಟಿಕೆಗೆ ತಕ್ಕ ಉತ್ತರ
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಂಜುನಾಥ್ ಗೌಡ, "ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಶ್ರೀರಾಮಸೇನೆಯಂತಹ ಸಂಘಟನೆಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪೊಲೀಸರ ಕಣ್ಣೆದುರೇ ಇಂತಹ ದಾಂಧಲೆಗಳು ನಡೆಯುತ್ತಿವೆ. ಆದರೆ ಕರ್ನಾಟಕದಲ್ಲಿ ಇಂತಹ ಸಮಾಜಘಾತುಕ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ," ಎಂದು ಗುಡುಗಿದ್ದಾರೆ.
ಸಂವಿಧಾನ ನೀಡಿದ ಸ್ವಾತಂತ್ರ್ಯವೇ ನಮಗೆ ಶ್ರೀರಕ್ಷೆ
"ಭಾರತೀಯ ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬ ಪ್ರಜೆಗೂ ಗೌರವಯುತವಾಗಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಸುಪ್ರೀಂ ಕೋರ್ಟ್ ಕೂಡ ಸಂಗಾತಿಯ ಆಯ್ಕೆ ಮಾಡುವುದು ಮೂಲಭೂತ ಹಕ್ಕು ಎಂದು ಸ್ಪಷ್ಟಪಡಿಸಿದೆ. ಹೀಗಿದ್ದರೂ ಪ್ರೇಮಿಗಳ ದಿನದಂದು ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳಿಗೆ ಕಿರುಕುಳ ನೀಡುವುದು, ಹೂವಿನ ಅಂಗಡಿಗಳ ಮೇಲೆ ದಾಳಿ ಮಾಡುವುದನ್ನು ನಾವು ಸಹಿಸುವುದಿಲ್ಲ," ಎಂದು ಅವರು ಹೇಳಿದ್ದಾರೆ.
ಮಂಗಳೂರು ಸೇರಿ ರಾಜ್ಯಾದ್ಯಂತ ಹದ್ದಿನ ಕಣ್ಣು
ವಿಶೇಷವಾಗಿ ನೈತಿಕ ಪೊಲೀಸ್‌ಗಿರಿಗೆ ಹೆಸರಾದ ಮಂಗಳೂರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಕ್ರಿಯವಾಗಿರುತ್ತಾರೆ. ಪ್ರೇಮಿಗಳ ರಕ್ಷಣೆಗೆ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಎಲ್ಲಾ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ನಿರ್ದೇಶನ ನೀಡಲಾಗಿದೆ.
"ರಾಜ್ಯದ ಪ್ರೇಮಿಗಳು ಧೈರ್ಯದಿಂದ ಮತ್ತು ಮುಕ್ತವಾಗಿ ಓಡಾಡಬಹುದು. ಯಾವುದೇ ಗೂಂಡಾಗಳಿಗೆ ಹೆದರುವ ಅವಶ್ಯಕತೆಯಿಲ್ಲ, ನಿಮ್ಮ ರಕ್ಷಣೆಗೆ ನಾವಿದ್ದೇವೆ," ಎಂದು ಮಂಜುನಾಥ್ ಗೌಡ ಭರವಸೆ ನೀಡಿದ್ದಾರೆ.

