ಕಂಗನಾ ರನೌತ್‌ಗೆ ಮಾನಸಿಕ ಚಿಕಿತ್ಸೆ ಅಗತ್ಯ: ನಿಮ್ಹಾನ್ಸ್‌ಗೆ ಕಳುಹಿಸುವಂತೆ ಮೋದಿಗೆ ಯುವ ಕಾಂಗ್ರೆಸ್ ಆಗ್ರಹ
x

ಕಂಗನಾ ರನೌತ್‌ಗೆ ಮಾನಸಿಕ ಚಿಕಿತ್ಸೆ ಅಗತ್ಯ: ನಿಮ್ಹಾನ್ಸ್‌ಗೆ ಕಳುಹಿಸುವಂತೆ ಮೋದಿಗೆ ಯುವ ಕಾಂಗ್ರೆಸ್ ಆಗ್ರಹ

ಇತ್ತೀಚೆಗಷ್ಟೇ ಸಂಸದೆ ಕಂಗನಾ ರನೌತ್ ಅವರು ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ತೀವ್ರ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಅದನ್ನು ಯುವ ಕಾಂಗ್ರೆಸ್​ ಖಂಡಿಸಿದೆ.


Click the Play button to hear this message in audio format

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಏಕವಚನದಲ್ಲಿ ಹಾಗೂ ಅತ್ಯಂತ ಕೀಳುಮಟ್ಟದ ಪದಗಳನ್ನು ಬಳಸಿ ವಾಗ್ದಾಳಿ ನಡೆಸಿದ್ದ ಬಿಜೆಪಿ ಸಂಸದೆ ಕಂಗನಾ ರನೌತ್ ಅವರಿಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮಾನಸಿಕ ಚಿಕಿತ್ಸೆ ಕೊಡಿಸಬೇಕು ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಆಗ್ರಹಿಸಿದೆ. ರಾಹುಲ್ ಗಾಂಧಿ ಅವರ ಮೇಲಿನ ಕಂಗನಾ ರನೌತ್ ಟೀಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಅವರು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪತ್ರ ಬರೆದಿದ್ದಾರೆ.

ಇತ್ತೀಚೆಗಷ್ಟೇ ಸಂಸದೆ ಕಂಗನಾ ರನೌತ್ ಅವರು ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ತೀವ್ರ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ರಾಹುಲ್ ಗಾಂಧಿ ಅವರು ಮಹಿಳಾ ಸಂಸದರಿಗೆ ಮುಜುಗರ ಉಂಟುಮಾಡುತ್ತಾರೆ ಹಾಗೂ ಟಪೋರಿಯಂತೆ ವರ್ತಿಸುತ್ತಾರೆ ಎಂದು ಟೀಕಿಸಿದ್ದರು. ಈ ವಿವಾದಾತ್ಮಕ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಮಂಜುನಾಥ್ ಗೌಡ, ಇದು ಕಂಗನಾ ಅವರ ಮಾನಸಿಕ ಅಸಮತೋಲನದ ಸ್ಪಷ್ಟ ಲಕ್ಷಣವಾಗಿದೆ. ಅವರಿಗೆ ಪ್ರಜಾಸತ್ತಾತ್ಮಕ ಚರ್ಚೆ ಮತ್ತು ವೈಯಕ್ತಿಕ ಟೀಕೆಯ ನಡುವಿನ ವ್ಯತ್ಯಾಸದ ಅರಿವಿಲ್ಲ. ಅಲ್ಲದೆ ಓರ್ವ ಸಂಸದೆಯಾಗಿ ಸಾರ್ವಜನಿಕ ವೇದಿಕೆಯಲ್ಲಿ ಹೇಗೆ ವರ್ತಿಸಬೇಕು ಎಂಬ ಕನಿಷ್ಠ ಜ್ಞಾನವೂ ಅವರಿಗಿಲ್ಲ ಎಂದು ಕಿಡಿಕಾರಿದ್ದಾರೆ.

ಚಿಕಿತ್ಸಾ ವೆಚ್ಚ ಭರಿಸಲು ಯುವ ಕಾಂಗ್ರೆಸ್ ಸಿದ್ಧ

ಮಹಿಳೆಯರ ಗೌರವದಂತಹ ಅತ್ಯಂತ ಗಂಭೀರವಾದ ವಿಷಯವನ್ನು ಕಂಗನಾ ರನೌತ್ ಕೇವಲ ಅಗ್ಗದ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಹುಲ್ ಗಾಂಧಿ ಅವರ ವಿರುದ್ಧ ಇಂತಹ ಕೀಳುಮಟ್ಟದ ಭಾಷೆ ಬಳಸಿರುವುದು ಆಘಾತಕಾರಿ. ಕಂಗನಾ ರನೌತ್ ಅವರನ್ನು ಕೂಡಲೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಡಿ, ಅವರ ಮಾನಸಿಕ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಯುವ ಕಾಂಗ್ರೆಸ್ ಭರಿಸಲಿದೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಮಂಜುನಾಥ್ ಗೌಡ ತಿಳಿಸಿದ್ದಾರೆ. ಒಬ್ಬ ಸಂಸದೆಯ ಇಂತಹ ಅಸಂಸದೀಯ ವರ್ತನೆಗೆ ಪ್ರಧಾನಿಯವರ ಸಮ್ಮತಿ ಇಲ್ಲವಾದರೆ, ತಕ್ಷಣವೇ ಕಂಗನಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Read More
Next Story